Tuesday, 1 May 2012

ಪ್ರತೀ ಮನುಷ್ಯನೂ ತನ್ನ ಮನಸ್ಥಿತಿಯ ಮೇಲೆ ಸವಾರಿ ಮಾಡ್ತಾನೆ

ಪ್ರತೀ ಮನುಷ್ಯನೂ ತನ್ನ ಮನಸ್ಥಿತಿಯ ಮೇಲೆ ಸವಾರಿ ಮಾಡ್ತಾನೆ

ನಾನು ಪತ್ರಿಕೆಯಲ್ಲಿ ಕೆಲಸ ಮಾಡುವವನು. ಅದರಲ್ಲೂ ನಮ್ಮ ಪತ್ರಿಕೆಯಲ್ಲಿ ಕ್ರೈಂ ಸುದ್ದಿಗಳಿಗೆ ಮೊದಲ ಆದ್ಯತೆ. ಹೆಚ್ಚೆಂದರೆ ವಾರಕ್ಕೆ ಎರಡು ಮರ್ಡರ್ ಕಥಾನಕವಾದ್ರೂ ನಮ್ಮ ಪತ್ರಿಕೆಯಲ್ಲಿ ಲೀಡ್ ಆಗುತ್ತೆ. ಪತ್ರಿಕೆಯ ಕೆಲಸಕ್ಕೆ ಸೇರಿದಾಗ ಇಂತಹ ನ್ಯೂಸ್ಗಳನ್ನು ಎಡಿಟ್ ಮಾಡೋಕೆ ಅಂತ ಕುಳಿತರೇನೆ ಒಮ್ಮೆ ಬೆಚ್ಚಿ ಬೀಳ್ತಿದ್ದೆ. ಯಾಕೆಂದರೆ ಕೆಲವೊಂದು ಕೊಲೆಗಳೇ ಅಷ್ಟು ಭಯಾನಕವಾಗಿರುತ್ತೆ. ಆದ್ರೆ ಅನುಭವ ಮನುಷ್ಯನನ್ನೇ ಬದಲಾಯಿಸುತ್ತೆ ಅನ್ನೋ ಹಾಗೆ, ಒಂದೇ ತಿಂಗಳಲ್ಲಿ ನಾನು ಇಂತಹ ಕ್ರೈಂ ಸುದ್ದಿಗಳಿಗೆ ಹೊಂದಿಕೊಂಡು ಬಿಟ್ಟಿದ್ದೆ. ಆದ್ರೂ ಕೊಲೆಗಾರ ಎಷ್ಟು ಕ್ರೂರಿ ಅಲ್ವಾ ಅನ್ನೋದು ನಾನು ಪ್ರತೀ ರಿಪೋಟರ್್ಗಳನ್ನು ತಿರುವಿ ಹಾಕಿದಾಗ ನನಗೆ ಸ್ಪಷ್ಟವಾಗ್ತಾ ಇತ್ತು.
ಸುಮಾರು ವರ್ಷಗಳ ಹಿಂದೆ ಮನೆಯಲ್ಲಿ ಕ್ರೈಂ ಸ್ಟೋರಿ ನೋಡ್ತಾ ಇದ್ದೆ. ಆಗ ಅಲ್ಲೊಂದು ಬೆಚ್ಚಿ ಬೀಳಿಸುವ ಮರ್ಡರ್ ಮಿಸ್ಟರಿ ಪ್ರತ್ಯಕ್ಷವಾಯಿತು. ಚಿಕ್ಕಂದಿನಲ್ಲಿ ಸಹಜವಾಗಿಯೇ ಕುತೂಹಲ ಇದ್ದದ್ದೇ. ಆದರೆ ಅದನ್ನು ನೋಡಿ ಮಲಗಿದ್ದ ನಾನು ಮಧ್ಯರಾತ್ರಿ ಹನ್ನೆರಡು ಘಂಟೆಗೆ ಬೆಚ್ಚಿ ಬಿದ್ದಿದ್ದೆ. ಯಾಕೆಂದರೆ ಹಾಗಿತ್ತು ಆ ಕೊಲೆ! ಆವಾಗಿಂದ ಕೊಲೆಗಾರ ಎಷ್ಟು ಕ್ರೂರಿಯಲ್ವಾ ಅಂತ ನನ್ನಲ್ಲೇ ನಾನು ಪ್ರಶ್ನೆ ಮಾಡ್ತೇನೆ. ಅದೆಷ್ಟೋ ಮಂದಿ ಸಿಗದ ಪ್ರೀತಿಗಾಗಿ, ಮಾನವೀಯ ಸಂಬಂಧಕ್ಕಾಗಿ, ಭಾವನೆಗಳನ್ನು ಹಂಚಿಕೊಳ್ಳುವ ಜೀವಕ್ಕಾಗಿ ಕಾಯ್ತಾ ಇರ್ತಾರೆ. ಆದ್ರೆ ಕೆಲ ಹಂತಕರಿಗೆ ಇದೆಲ್ಲಾ ಬೇಡವಾ? ಅಥವಾ ಇವೆಲ್ಲವನ್ನ ಅನುಭವಿಸಿದ ನಂತರವೇ ಅವರೊಳಗಿನ ಹಂತಕ ಜಾಗೃತನಾಗ್ತಾನಾ? ಕೆಲವೊಂದು ಕೊಲೆಯ ಹಿಂದಿನ ಪುಟಗಳನ್ನು ಬಿಚ್ಚಿಟ್ಟರೆ ಇಂತಹ ಸಾಧ್ಯತೆಗಳು ನಿಚ್ಚಳಲವಾಗಿರುತ್ತೆ.
ನಮ್ಮೂರಲ್ಲಿ ಒಂದು ಪದ್ದತಿಯಿದೆ. ಪತ್ತನಾಜೆ ಎಂಬ ದಿನ ಜಾಗಕ್ಕೆ ರಕ್ತ ಕೊಡುವ ನೆಪದಲ್ಲಿ ಕೋಳಿಗಳನ್ನು ಕೊಯ್ಯಲಾಗುತ್ತೆ. ಇದು ಹಿಂದಿನಿಂದಲೂ ತುಳುನಾಡಿನಲ್ಲಿ ನಡೆದುಕೊಂಡು ಬಂದ ಸಂಪ್ರದಾಯ. ನಮ್ಮ ಮನೆಯಲ್ಲೂ ಈ ಸಂಪ್ರದಾಯ ಯಥಾವತ್ತಾಗಿ ನಡೀತಾ ಇತ್ತು. ಆಗೆಲ್ಲಾ ನಾವು ಚಿಕ್ಕವರಾಗಿದ್ದ ಕಾರಣ ಪಕ್ಕದ ಮನೆಯವರು ಬಂದು ಕೋಳಿಯ ಕತ್ತು ಕಡಿದು ರಕ್ತ ಅಪರ್ಿಸ್ತಾ ಇದ್ರೂ. ನಾನು ಅದನ್ನು ನೋಡಿ ಬೆಳದಿದ್ದೆನೆ ವಿನಃ ಅದರ ಪ್ರಯೋಗವನ್ನು ನಾನು ಮಾಡಿರಲಿಲ್ಲ. ಆದ್ರೆ ನಾನು ದೊಡ್ಡವನಾದ ಮೇಲೆ ನೆರೆಮನೆಯವರನ್ನು ಕರೆಯೋದು ಬೇಡವೆಂದು ನನ್ನ ಅಜ್ಜಿ ನನ್ನಿಂದಲೇ ಕೋಳಿಯ ಕತ್ತು ಕುಯ್ಯಲು ಹೇಳಿದರು. ಅಂದು ಹೇಗೋ ಕೈ ನಡುಗುತ್ತಾ ಒಲ್ಲದ ಮನಸ್ಸಿನಿಂದ ಕೆಲಸ ಮುಗಿಸಿದೆ. ಆದರೆ ಅದೇ ಕೊನೆ ಅಂದಿನಿಂದ ನಮ್ಮ ಮನೆಯಲ್ಲಿ ಅಂತಹ ಸಂಪ್ರದಾಯಕ್ಕೆ ನಾನಾಗಿಯೇ ತಾತ್ಕಾಲಿಕ ಅನ್ನೋ ಹಾಗೆ ಬ್ರೇಕ್ ಹಾಕಿದ್ದೇನೆ. ಯಾಕೋ ಗೊತ್ತಿಲ್ಲ? ಹಿಂಸೆಗೂ ನನಗೂ ಮಾರುದ್ದ ದೂರ. ಪ್ರೀತಿ ವಿಚಾರದಲ್ಲಿ, ಒಬ್ಬರನ್ನು ತುಂಬಾ ಹಚ್ಚಿಕೊಳ್ಳೋದರಲ್ಲಿ ತುಂಬಾ ಅಂದ್ರೆ ತುಂಬಾ ಹತ್ತಿರ. ಆಗೆಲ್ಲಾ ನಾನು ಒಂದು ವಿಚಾರವನ್ನು ಪದೇ ಪದೇ ಯೋಚನೆ ಮಾಡ್ತೇನೆ. ಮನುಷ್ಯತ್ವದ ಪರಿಚಯವೇ ಇಲ್ಲದ ರೀತಿಯಲ್ಲಿ ಕೊಲೆ ಮಾಡುವ ಹಂತಕನ ಮನಸ್ಥಿತಿ ಹೇಗಿರಬೇಡ ಅಂತ. ಆದ್ರೂ ಹಂತಕ ಗ್ರೇಟ್! ಆತ ಆತನ ಮನಸ್ಥಿತಿಯೇ ಮೇಲೆಯೇ ಸವಾರಿ ಮಾಡ್ತಾನೆ. ಒಂದು ಜೀವವನ್ನು ಅನಾಮತ್ತಾಗಿ ಕೊಂದು ಬಿಡುವ ತಾಕತ್ತು ಹಂತಕನಲ್ಲಿ ಜಾಗೃತವಾಗೋದು ಯಾವಾಗ ಅನ್ನೋದು ಕೂಡ ಅಷ್ಟು ಸುಲಭವಾಗಿ ಹೇಳೋಕೆ ಬರೋದಿಲ್ಲ.
ಮೊನ್ನೆ ಮೊನ್ನೆ ಜೀ ಟಿವಿಯಲ್ಲಿ ಜೋಗಿ ಸಿನಿಮಾ ನೋಡಿದೆ. ಬಹುಶಃ ಈ ಸಿನಿಮಾವನ್ನು ನಾನು ನೋಡ್ತಾ ಇರೋದು ಹತ್ತನೇ ಬಾರಿ ಇರಬಹುದೋ ಏನೋ? ಸೆಂಟಿಮೆಂಟ್ಗಳಿಗೆ ತೀರಾ ಹೆಚ್ಚೇ ಎನ್ನುವಷ್ಟು ಬೆಲೆ ಕೊಡುವ ನನಗೆ ಈ ಸಿನಿಮಾ ತುಂಬಾನೇ ಇಷ್ಟ ಆಗಿತ್ತು. ಆದರೆ ಇಲ್ಲೂ ಮಚ್ಚು-ಲಾಂಗುಗಳ ಆರ್ಭಟ ನೋಡಿದಾಗ ಪಾತಕ ಲೋಕದ ಭಯಾನಕತೆಯ ಬಗ್ಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಯೋಚಿಸ್ತೇನೆ. ಹಿಂದೊಮ್ಮೆ ನನ್ನ ತೀರಾ ಹತ್ತಿರದ ಹಿತೈಷಿ ಎನ್ನಬಹುದಾದ ವ್ಯಕ್ತಿಯೊಬ್ಬರು ಅಗ್ನಿ ಶ್ರೀಧರ್ ಎಂಬ ಅಂಡರ್ವಲ್ಡರ್್ ಲೇಖಕನ `ಎದೆಗಾರಿಕೆ ಎಂಬ ಪುಸ್ತಕ ಕೊಟ್ಟಿದ್ರೂ. ಕ್ರೈಂ ಅಂದ್ರೇನೆ ಅಷ್ಟಕ್ಕಷ್ಟೇ ಅಂತಿದ್ದ ನಾನು ಅಂದು ಮಾತ್ರ ಒಂದೇ ಉಸಿರಿಗೆ ಆ ಪುಸ್ತಕ ಓದಿ ಮುಗಿಸಿದೆ. ಯಾಕೆಂದರೆ ಎಲ್ಲೂ ನಿಲ್ಲಿಸೋಕೆ ಅವಕಾಶವೇ ಕೊಡದ ಹಾಗೆ ಅಗ್ನಿ ತಮ್ಮ ಕೈ ಚಳಕವನ್ನು ಈ ಪುಸ್ತಕದ ಪ್ರತೀ ಪುಟದಲ್ಲೂ ತೋರಿಸಿದ್ದಾರೆ. ಮುಂದೆ ಈ ಪುಸ್ತಕ ಸಿನಿಮಾ ಆಗುತ್ತೆ ಅನ್ನೋ ಸುದ್ದಿ ಇದೆ. ಅದೇ ಲಾಸ್ಟ್........ಆನಂತರ ನಾನು ಪಾತಕ ಲೋಕದ ಮಿಸ್ಟರಿಯನ್ನು ಓದಲೇ ಇಲ್ಲ.....
ಪಕ್ಕಾ ಸೆಂಟಿಮೆಂಟಲ್ ಆದ ನಾನು ಓದುವ ಪುಸ್ತಕಗಳು ಕೂಡ ಹಾಗೆ ಇರುತ್ತೆ. ಅಷ್ಟೇ ಯಾಕೆ ನನ್ನ ಮೊಬೈಲ್ನಲ್ಲಿರೋ ಸಾಂಗ್, ನಾನಿಷ್ಟ ಪಡೋ ಫಿಲ್ಮ್ ಎಲ್ಲಾನೂ ಪಕ್ಕಾ ಎಮೋಷನಲ್. ಆದ್ರೆ ಕೆಲವೊಮ್ಮೆ ತೀರಾ ಧೀರ್ಘವಾಗಿ ಯೋಚನೆ ಮಾಡೋದು ಮಾತ್ರ ಕ್ರೈಂ ಘಟನೆಗಳ ಬಗ್ಗೆ. ಅದರಲ್ಲೂ ಕೊಲೆಗಾರನ ಮನಸ್ಥಿತಿಯ ಬಗ್ಗೆ........
ಮನುಷ್ಯ ಹುಟ್ಟೋವಾಗ ಅಳ್ತಾನೆ ಹುಟ್ತಾನೆ....ಹೋಗೋವಾಗ ಬೇರೆಯವರನ್ನು ಅಳಿಸ್ತಾ ಹೋಗ್ತಾನೆ. ಅದರ ಮಧ್ಯೆ ತಾನೂ ನಗ್ತಾ...ತನ್ನ ಸುತ್ತಲಿನವರನ್ನೂ ನಗಿಸ್ತಾ ಇದ್ರೆ ಅದೇ ಜೀವನ ಅನ್ನೋದು ನಾನು ಕಂಡು ಕೊಂಡ ಸತ್ಯ. ಆದರೆ ನಿರಂತರ ಕೊಲೆಗಳಲ್ಲೇ ಕಾಲ ಕಳೆಯುವವರಿಗೆ ನಗು ಅನ್ನೋದೆ ಗೊತ್ತಿಲ್ವಾ? ಇವರ ಮನಸ್ಥಿತಿ ಇಷ್ಟು ಕ್ರೂರವಾಗಲು ಕಾರಣವಾದರೂ ಏನಿರಬಹುದು? ಬಹುಶಃ ಇದೊಂದು ಉತ್ತರವಿಲ್ಲದ ಪ್ರಶ್ನೆ ಅನ್ನಬಹುದೇನೋ?
ಫ್ರೆಂಡ್ಸ್, ಇಷ್ಟೆಲ್ಲಾ ಹೇಳೋದಕ್ಕೂ ಕಾರಣ ಇದೆ....
ಒಮ್ಮೆ ಒಂಟಿಯಾಗಿ ಕೂತ್ಕೊಂಡು ಯೋಚಿಸಿ. ಆಗ ನಿಮಗೆ ಯಾರೂ ಕಾಣಿಸೋದಿಲ್ಲ. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ನೀವೊಬ್ಬರೇ ಉತ್ತರ ಆಗ್ತೀರಾ. ಅಲ್ಲದೇ ಜೀವನದ ಪ್ರತೀ ಹೆಜ್ಜೆಯನ್ನು ಟೈಮ್ ಟು ಟೈಮ್ ವಾಚ್ ಮಾಡುವವನು ಆ ದೇವರು ಒಬ್ಬನೇ. ಅದೂ ಕೂಡ ನಮ್ಮ ನಂಬಿಕೆಯಷ್ಟೇ. ಹೀಗಾದ್ರೂ ನಾವು ಜೀವನದಲ್ಲಿ ಒಂದಲ್ಲ ಒಂದು ತಪ್ಪು ಮಾಡೇ ಮಾಡ್ತೀವಿ.. ಕ್ಷಮಿಸಿ...ಒಂದಲ್ಲ ನೂರಾರು ತಪ್ಪುಗಳು......ನಾವೆಷ್ಟೇ ತಪ್ಪು ಮಾಡಬಾರದು ಅಂದ್ಕೊಂಡಿದ್ರೂ ತಪ್ಪು ಮಾಡೇ ಮಾಡ್ತೀವಿ...ನಮ್ಮ ಮನಸ್ಸಿಗೆ ವಿರುದ್ದವಾಗಿ ಹೋಗ್ತೀವಿ....ಕೆಲವರನ್ನು ವಿರೋಧಿಸ್ತೀವಿ....ಇನ್ನು ಕೆಲವರನ್ನ ಇಷ್ಟ ಪಡ್ತೀವಿ.......ಬಟ್ ಇದಕ್ಕೆಲ್ಲಾ ಫುಲ್ಸ್ಟಾಪ್ ಅನ್ನೋದು ಇಲ್ಲ ಎನ್ನುವುದು ನೆನಪಿರಲಿ.
ಜಸ್ಟ್ ಯೋಚನೆ ಮಾಡಿ...
 ನಮ್ಮ ಮನಸ್ಥಿತಿಗೆ ವಿರುದ್ದವಾಗಿ ನಾವ್ ಏನೆಲ್ಲಾ ಮಾಡಿಲ್ಲ ಅಂತ....
              ಕೆಲವೊಮ್ಮೆ ಎಲ್ಲವೂ ಅನಿವಾರ್ಯ....ಜಸ್ಟ್ ಯೋಚಿಸಿ
ಧ್ವನಿ

1 comment: