Thursday 27 October 2016

ಆ ಎರಡು ಗಂಟೆಯಲ್ಲಿ ಬಯಲಾಗಿತ್ತು `ಅವರ’ ಅಸಲಿಯತ್ತು!


ಭರತ್ ರಾಜ್
ವರದಿಗಾರ, ಬಿಟಿವಿ ನ್ಯೂಸ್, ಮಂಗಳೂರು

ಪತ್ರಕರ್ತನಾಗಿ ಆರು ವರ್ಷಗಳಲ್ಲಿ ಈವರೆಗೆ ಯಾರ ವಿರುದ್ದವೂ ಪೊಲೀಸ್ ಠಾಣೆಗೆ ದೂರು ಕೊಟ್ಟವನಲ್ಲ. ಸುದ್ದಿ ಮಾಡಲು ಹೋದಾಗ ಮತ್ತು ಸುದ್ದಿ ಮಾಡಿದ ನಂತರ ಅಷ್ಟೂ ಆತಂಕಗಳನ್ನು ಸಹಜ ಎಂಬಂತೆ ಎದುರಿಸಿದ್ದೆ. ಆದರೆ ಇವತ್ತು ಮಾತ್ರ ಅಂತಿಮವಾಗಿ `ಅವರ’ ವಿರುದ್ದ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಕೊನೆಗೂ ಪೊಲೀಸರು ಕೂಡ ಪ್ರಕರಣ ದಾಖಲಿಸಿದ್ದಾರೆ. ಮುಂದಿನದ್ದು ಕಾನೂನು ಹೋರಾಟವಷ್ಟೇ. ಹೌದು, ನಿನ್ನೆ ಸೂರಲ್ಪಾಡಿ ಮಸೀದಿಯಲ್ಲಿ ಪತ್ರಕರ್ತರ ಮೇಲೆ ನಡೆದ ಹಲ್ಲೆ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನನಗೆ ಮತ್ತು ನನ್ನ ಮಿತ್ರರಿಗೆ ದೂರು ನೀಡುವುದು ಅನಿವಾರ್ಯವಾಗಿತ್ತು. ಈ ಹಿಂದೆ ಎಲ್ಲಾ ಆತಂಕಗಳನ್ನು ಸಹಜ ಎಂಬಂತೆ ಎದುರಿಸಿದ್ದ ನನ್ನನ್ನು ಸೂರಲ್ಪಾಡಿ ಘಟನೆ ಮಾತ್ರ ಕೊನೆಗೂ ಪೊಲೀಸ್ ದೂರು ನೀಡುವಷ್ಟರ ಮಟ್ಟಿಗೆ ತಂದು ನಿಲ್ಲಿಸಿದೆ.

ಅಷ್ಟರ ಮಟ್ಟಿಗೆ ಘಟನೆಯ ಗಂಭೀರತೆ ನನ್ನನ್ನು ತಟ್ಟಿದೆ ಅಂದುಕೊಳ್ಳುತ್ತೇನೆ. ಅಷ್ಟಕ್ಕೂ ಆ ದಿನ ನಡೆದದ್ದು ಏನು ಅನ್ನೋದನ್ನು ಕೂಡ ವಿವರಿಸೋದು ಈಗ ಅನಿವಾರ್ಯ. ಯಾಕೆಂದರೆ ಈ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಒಂದಷ್ಟು ಜನ ಕೇಸು ಕೊಡೋ ಅನಿವಾರ್ಯತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಅದೆಲ್ಲಾ ಸಹಜ ಅನ್ನುವಂತೆಯೂ ಮಾತನಾಡಿದ್ದಾರೆ. ಆದರೆ ಈ ಹಿಂದೆ ಅದೆಷ್ಟೂ ಸಹಜತೆಗಳನ್ನ ಕಂಡಿದ್ದ ನನಗೆ ಸೂರಲ್ಪಾಡಿಯ ದಾಳಿ ಮಾತ್ರ ಸಹಜತೆಗಳನ್ನು ಮೀರಿ ಆತಂಕವನ್ನು ಹುಟ್ಟುಹಾಕಿದೆ. ಹೀಗಾಗಿ ನನಗೆ ಆ ಘಟನೆ ಅಷ್ಟು ಅಪಾಯಕಾರಿ ಅನಿಸಿದ್ದು ಯಾಕೆ ಅನ್ನೋದನ್ನು ವಿವರಿಸುತ್ತೇನೆ…

ಪತ್ರಕರ್ತ ಅಂದ ಮೇಲೆ ಸುದ್ದಿಗಳು ಹರಸಿ ಬರೋದು ಸಾಮಾನ್ಯ. ಹೀಗೆ ಘಟನೆ ನಡೆದ ಮುನ್ನ ದಿನ ನಮ್ಮ ತಂಡಕ್ಕೂ ಸೂರಲ್ಪಾಡಿಯ ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಿಸಿದ ಸುದ್ದಿ ಬಂದಿತ್ತು. ಸ್ವತಃ ಸಂತ್ರಸ್ಥರೇ ಮಾಧ್ಯಮ ಮಿತ್ರರನ್ನು ಸಂಪರ್ಕಿಸಿ ಅಳಲು ತೋಡಿಕೊಂಡಿದ್ದರು. ಹೀಗಾಗಿ ಅವರಿಂದ ಸಂಪೂರ್ಣ ಮಾಹಿತಿ ಪಡೆದ ನಾವು ಘಟನೆಯ ಗಂಭೀರತೆಯ ಬಗ್ಗೆ ವಿವರಗಳನ್ನು ಪಡೆದುಕೊಂಡೆವು. ಈ ವೇಳೆ ಮೇಲ್ನೋಟಕ್ಕೆ ಅವರಿಗೆ ಅನ್ಯಾಯವಾಗಿರೋದು ಒಂದು ಹಂತಕ್ಕೆ ಸ್ಪಷ್ಟವಾಗಿ ಕಂಡಿತ್ತು. ಹೀಗಾಗಿ ನೊಂದವರ ಪರವಾಗಿ ಸುದ್ದಿ ಮಾಡೋದು ಪತ್ರಕರ್ತರಾಗಿ ನಮ್ಮ ಧರ್ಮ. ಹಾಗಂತ ನೊಂದವರ ಪರವಾಗಿ ನಿಲ್ಲೋ ಭರದಲ್ಲಿ ವಿರೋಧಿ ಬಣವನ್ನು ಆರೋಪಿಗಳೇ ಅಂತ ಪಕ್ಕಾ ಜಡ್ಜ್ ಮೆಂಟ್ ಕೊಡೋ ಪತ್ರಕರ್ತರಂತು ನಾವಲ್ಲ. ಹೀಗಾಗಿ ಸಂತ್ರಸ್ಥರು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸೋ ಎದುರು ಬಣದವರನ್ನು ಕೂಡ ಮಾತನಾಡಿಸಿ ಸುದ್ದಿಗೊಂದು ಸ್ಪಷ್ಟತೆ ಕೊಡೋದು ನಮ್ಮ ಉದ್ದೇಶ. ಈ ಹಿಂದೆಯೂ ನಾನು ಸೇರಿದಂತೆ ನನ್ನ ಜೊತೆಗಿರುವ ಅಷ್ಟೂ ಜನ ಮಾಧ್ಯಮ ಮಿತ್ರರು ಪತ್ರಕರ್ತರಾಗಿ ಒನ್ ಸೈಡ್ ಸುದ್ದಿ ಮಾಡಿಲ್ಲ. ಯಾವುದೇ ಸುದ್ದಿಯಿರಲಿ ಎರಡೂ ಕಡೆಯ ವಿಚಾರಗಳನ್ನು ಆಲಿಸಿ ಅಂತಿಮ ವಿಮರ್ಶೆಯ ನಂತರವೇ ಅಲ್ಲೊಂದು ಸಾಮಾಜಿಕ ಜವಾಬ್ದಾರಿಯ ವರದಿ ತಯಾರಾಗುತ್ತಿತ್ತು.



ಈ ಪ್ರಕರಣದಲ್ಲೂ ನಾವು ಯಥಾವತ್ ವಿರೋಧಿ ಬಣ ಅಂತ ಕರೆಸಿಕೊಳ್ಳೋ ಸೂರಲ್ಪಾಡಿ ಮಸೀದಿ ಆಡಳಿತದ ಸ್ಪಷ್ಟನೆ ಕೇಳಲು ಮುಂದಾದೆವು. ಹೀಗಾಗಿ ನಿನ್ನೆ ಬೆಳಿಗ್ಗೆ ಸರಿಯಾಗಿ 7.55ಕ್ಕೆ ಬಿಟಿವಿ ವರದಿಗಾರನಾದ ನಾನು, ನನ್ನ ಕ್ಯಾಮರಾಮ್ಯಾನ್ ನಾಗೇಶ್ ಪಡು, ಟಿವಿ9 ಕ್ಯಾಮಾರಮ್ಯಾನ್ ವಿಲ್ಫ್ರೆಡ್ ಡಿಸೋಜಾ ಮತ್ತು ಸುದ್ದಿ ಟಿವಿ ಪ್ರತಿನಿಧಿ ಇರ್ಷಾದ್ ಉಪ್ಪಿನಂಗಡಿ ಜೊತೆಗೆ ಸೂರಲ್ಪಾಡಿ ಮಸೀದಿಗೆ ತೆರಳಿದೆವು. ಬೆಳಿಗ್ಗೆ ಎಂಟು ಘಂಟೆಗೆ ಮದರಸ ಬಿಡುವ ಕಾರಣ ಅಷ್ಟು ಬೇಗನೇ ಅಲ್ಲಿಗೆ ತೆರಳೋದು ನಮಗೆ ಅನಿವಾರ್ಯವಾಗಿತ್ತು. ಅದರಲ್ಲೂ ಮದರಸದಲ್ಲಿ ಸಂತ್ರಸ್ಥರ ಮಕ್ಕಳಿಗೆ ಬಹಿಷ್ಕಾರ ಹಾಕಿರೋ ಕಾರಣದಿಂದ ಮಕ್ಕಳ ಹಕ್ಕುಗಳ ವಿಚಾರದಲ್ಲಿ ಸುದ್ದಿ ಪ್ರಾಮುಖ್ಯತೆ ಪಡೆದಿತ್ತು. ಹೀಗಾಗಿ ಎಂಟು ಘಂಟೆಗೆ ಮದರಸ ಬಿಡುವ ದೃಶ್ಯಗಳನ್ನು ರಸ್ತೆಯಲ್ಲಿ ನಿಂತೇ ಚಿತ್ರೀಕರಿಸಿಕೊಂಡೆವು. ನಂತರ ಅಲ್ಲಿಂದ ನೇರವಾಗಿ ಮಸೀದಿ ಆವರಣಕ್ಕೆ ಹೋಗಿ ಅಲ್ಲೇ ಇದ್ದ ಮದರಸದ ಗುರುಗಳಲ್ಲಿ ನಮಗೆ ಬಂದ ಆರೋಪಗಳ ಬಗ್ಗೆ ವಿಚಾರಿಸಿದ್ದೇವೆ. ಈ ವೇಳೆ ಅವರು ಕೂಡ ನಮಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ, ತಾತ್ಕಾಲಿಕವಾಗಿ ದೂರುದಾರರ ಮಕ್ಕಳು ಮದರಸ ಮತ್ತು ಮಸೀದಿಗೆ ಬಾರದಂತೆ ಬಹಿಷ್ಕಾರ ಹಾಕಿರೋದರ ಬಗ್ಗೆ ತಿಳಿಸಿದರು. ಅಲ್ಲದೇ ಈ ಬಗ್ಗೆ ಇರೋ ವಿವಾದಗಳ ಬಗ್ಗೆಯೂ ಬೆಳಕು ಒಂದಷ್ಟು ಬೆಳಕು ಚೆಲ್ಲಿದರು. ಆದರೆ ಅಷ್ಟರಲ್ಲಾಗಲೇ ಸುಮಾರು ಹತ್ತು ಮಂದಿಯ ತಂಡವೊಂದು ಮಸೀದಿ ಆವರಣಕ್ಕೆ ನುಗ್ಗಿ ನಮ್ಮನ್ನ ಮಾತನಾಡೋಕು ಬಿಡದೇ ತೀರಾ ಕೆಳಮಟ್ಟದ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸೋಕೆ ಆರಂಭಿಸಿದ್ದಾರೆ. ಅಲ್ಲದೇ ನಮ್ಮ ಕೈಯ್ಯಲ್ಲಿದ್ದ ಚಾನೆಲ್ ಮೈಕ್ ಕಿತ್ತುಕೊಂಡು ಕ್ಯಾಮಾರದಲ್ಲಿದ್ದ ದೃಶ್ಯಗಳನ್ನು ಡಿಲೀಟ್ ಮಾಡೋದಕ್ಕೆ ಹೇಳಿ ಬೆದರಿಕೆ ಹಾಕಿದ್ದಾರೆ. ನಾವು ಪತ್ರಕರ್ತರು ಅಂತ ಗೊತ್ತಿದ್ದರೂ ನಮ್ಮಲ್ಲಿ ಮಾತನಾಡಲೂ ಬಿಡದೇ ಮಸೀದಿ ಆವರಣದಿಂದ ನಮ್ಮನ್ನು ಹೊರಗೆಳೆದುಕೊಂಡು ಬಂದಿದ್ದಾರೆ.

ನಂತರ ನಮ್ಮ ಬಿಟಿವಿ ಕ್ಯಾಮಾರಮ್ಯಾನ್ ನಾಗೇಶ್ ಮತ್ತು ಸುದ್ದಿ ಟಿವಿಯ ಇರ್ಷಾದ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸುಮಾರು ಐವತ್ತು ಮಂದಿ ನಮ್ಮನ್ನು ಸುತ್ತುವರಿದ ತೀರಾ ಕೆಳಮಟ್ಟದ ಭಾಷೆ ಪ್ರಯೋಗಿಸಿ ನಿಂದಿಸಿದ್ದಲ್ಲೇ ಕ್ಯಾಮಾರ ಕಿತ್ತುಕೊಂಡು ಕ್ಯಾಸೆಟ್ ಮತ್ತು ಮೆಮೋರಿ ಕಾರ್ಡ್‍ಗಳನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ವಿರೋಧಿಸಿದರೂ ಬಿಡದೇ ಹಲ್ಲೆಗೆ ಮುಂದಾಗಿ ಕೊಲೆ ಬೆದರಿಕೆ ಒಡ್ಡಿದ ಆರೋಪಿಗಳು ನಾವು ಬಂದಿದ್ದ ಕಾರಿನ ಕೀಯನ್ನ ಕೂಡ ಕಿತ್ತುಕೊಂಡು ಅಕ್ಷರಶಃ ತಾಲಿಬಾನ್ ಮಾದರಿಯಲ್ಲಿ ನಮ್ಮ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ಅದ್ಯಾಗೋ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನಂತರ ಪಕ್ಕದ ರಸ್ತೆಗೆ ಬಂದು ಬೆಳಿಗ್ಗೆ ಸುಮಾರು 8.20ಕ್ಕೆ ಡಿಸಿಪಿ ಶಾಂತರಾಜು ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದೆ. ಹೀಗಾಗಿ ಘಟನೆಯ ಗಂಭೀರತೆ ಅರಿತ ಅವರು ಬಜಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ ಸುಮಾರು 8.30ರ ವೇಳೆಗೆ ಬಜಪೆ ಠಾಣಾಧಿಕಾರಿ ನಾಗರಾಜ್ ಅವರು ನನ್ನನ್ನು ಸಂಪರ್ಕಿಸಿ ಪೊಲೀಸ್ ಕಳಿಸಿರೋದಾಗಿ ಹೇಳಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ದೂರದಲ್ಲೇ ನಿಂತು ಘಟನೆಯನ್ನು ಗಮನಿಸುತ್ತಿದ್ದ ನಾನು ನಿಜಕ್ಕೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದೆ. ಉಗ್ರರ ಕೈಯ್ಯಲ್ಲಿ ಸಿಲುಕಿದ ಸಂತ್ರಸ್ಥರಂತೆ ನಮ್ಮ ತಂಡದ ಮೂವರು ಪತ್ರಕರ್ತರು ಅವರ ಕೈಯ್ಯಲ್ಲಿ ಅಕ್ಷರಶಃ ನಲುಗಿ ಹೋಗಿದ್ದರು. ಇಷ್ಟಾಗಿದ್ದೇ ತಡ ಯಾರೋ ಮಸೀದಿಯ ಮೈಕ್ ನಲ್ಲಿ ಜಮಾತಿಗೆ ಸೇರಿದ ಎಲ್ಲರೂ ತಕ್ಷಣ ಮಸೀದಿ ಆವರಣಕ್ಕೆ ಬರುವಂತೆ ಘೋಷಣೆ ಮಾಡಿದ್ಧಾರೆ. ದುರಂತ ಅಂದ್ರೆ ಕೇವಲ ಧಾರ್ಮಿಕಪ್ರವಚನ ಮತ್ತು ಬಾಂಗ್ ನೀಡೋಕೆ ಬಳಕೆಯಾಗೋ ಮಸೀದಿಯ ಮೈಕ್ ನಿನ್ನೆಯ ಘಟನೆಯಲ್ಲಿ ನಮ್ಮ ವಿರುದ್ದ ಜನ ಸೇರಿಸಿ ದೌರ್ಜನ್ಯ ಎಸಗೋ ಅಸ್ತ್ರವಾಗಿದ್ದು ಮಾತ್ರ ನಿಜಕ್ಕೂ ದುರಂತ. ಹೀಗಾಗಿ ದೂರದಿಂದಲೇ ಎಲ್ಲವನ್ನು ಗಮನಿಸ್ತಾ ಇದ್ದ ನಾನು ಮಸೀದಿಯ ಮೈಕ್ ನಲ್ಲಿ ಮಾಡಿದ ಘೋಷಣೆಯನ್ನ ಕೇಳಿ ಇನ್ನಷ್ಟು ಆತಂಕಕ್ಕೊಳಗಾದೆ. ಹೀಗಿರೋವಾಗಲೇ ಮಸೀದಿ ಆವರಣಕ್ಕೆ ಜನರ ದಂಡೇ ಆಗಮಿಸ್ತಾ ಇತ್ತು. ನೋಡನೋಡುತ್ತಿದ್ದಂತೆ ನಮ್ಮ ಮೂವರು ಮಾಧ್ಯಮ ಮಿತ್ರರನ್ನು ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿ ಸುತ್ತುವರಿದು ದೌರ್ಜನ್ಯ ಆರಂಭಿಸಿದ್ದರು. ಆದರೆ ಅಷ್ಟು ಜನರ ಮುಂದೆ ನಮ್ಮವರನ್ನ ಉಳಿಸುವಲ್ಲಿ ಅಸಹಾಯಕನಾಗಿದ್ದ ನನಗೆ ಪೊಲೀಸರು ಅಲ್ಲಿಗೆ ಬರುವವರೆಗೆ ಬೇರೆ ದಾರಿ ಕಾಣಲೇ ಇಲ್ಲ. ಹೀಗೆ ಸಮಯ 9 ಕಳೆದರೂ ಪೊಲೀಸರು ಬರಲೇ ಇಲ್ಲ. ಕೊನೆಗೆ ನಮ್ಮವರನ್ನು ಕಾರಿನೊಳಗೆ ನೂಕಿದ ರಾಕ್ಷಸರು ಕಾರಿಗೆ ಗುದ್ದಿ, ನಮ್ಮವರ ಮೇಲೆ ಹಲ್ಲೆ ನಡೆಸುತ್ತಾ, ಕ್ಯಾಮಾರದ ಮೆಮೋರಿ ಕಿತ್ತುಕೊಂಡು ಪುಡಿಗಟ್ಟಿದ್ರು. ಅಲ್ಲದೇ ಕ್ಯಾಮಾರಕ್ಕೂ ಹಾನಿ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಪೊಲೀಸರು ಮಾತ್ರ ಬರಲೇ ಇಲ್ಲ.

ಕೊನೆಗೆ 9.20ರ ವೇಳೆಗೆ ಪಿಸಿಆರ್ ವಾಹನದಲ್ಲಿ ಇಬ್ಬರು ಪೊಲೀಸರು ಆಗಮಿಸಿದ್ರು. ಆದ್ರೆ ಈ ಇಬ್ಬರು ಪೊಲೀಸರ ಮಾತನ್ನೂ ಕೇಳದ ಜನ ಪೊಲೀಸರ ಎದುರೇ ನಮ್ಮವರನ್ನು ಬೆಂಕಿ ಹಾಕಿ ಸುಡೋದಾಗಿ ಬೊಬ್ಬಿಡುತ್ತಿದ್ದರು. ಅಲ್ಲದೇ ಕಟ್ಟಿ ಹಾಕಿ ಥಳಿಸೋದಾಗಿಯೂ ಏರು ಧ್ವನಿಯಲ್ಲೇ ಪೊಲೀಸರ ಎದುರೇ ಗುಡುಗಿದ್ದು ದುರಂತ. ಆದ್ರೆ ಇಷ್ಟಾದ್ರೂ ಪೊಲೀಸರಿಗೆ ಮಾತ್ರ ಅವ್ರನ್ನ ನಿಯಂತ್ರಿಸಿ ನಮ್ಮವರನ್ನು ಬಿಡಿಸೋದಕ್ಕೆ ಸಾಧ್ಯವಾಗಲೇ ಇಲ್ಲ. ಇಷ್ಟಾಗಿ 9.45ರ ವೇಳೆಗೆ ಬಜಪೆ ಎಸ್ಸೈ ಸತೀಶ್ ಕುಮಾರ್ ಸ್ಥಳಕ್ಕೆ ಬಂದ್ರು. ಈ ವೇಳೆ ನಾನು ಕೂಡ ಪೊಲೀಸ್ ಅಧಿಕಾರಿಯ ಆಗಮನದ ನಂತ್ರ ಸ್ಥಳಕ್ಕೆ ಬಂದೆ. ಈ ವೇಳೆ ಕೆಲ ಕಿಡಿಗೇಡಿಗಳು ನನ್ನನ್ನು ಸುತ್ತುವರಿದು ಹಲ್ಲೆಗೆ ಮುಂದಾದ್ರೂ. ಅದಾಗಲೇ ನಮ್ಮವರ ಮೊಬೈಲ್ ಕಿತ್ತುಕೊಂಡಿದ್ದ ರಾಕ್ಷಸರು ನನ್ನ ಮೊಬೈಲ್ ಕೂಡ ಕಿತ್ತುಕೊಳ್ಳೋಕೆ ಆರಂಭಿಸಿದ್ರು. ಆದ್ರೆ ಎಸ್ಸೈ ಸತೀಶ್ ಅವ್ರನ್ನ ತಡೆದು ನಮ್ಮವ್ರನ್ನ ಕೂಡ ಅವ್ರ ಬಂಧನದಿಂದ ಬಿಡಿಸಿದ್ರು. ಹೀಗಾದ್ರೂ ಅಲ್ಲಿದ್ದವ್ರು ಪೊಲೀಸರ ಮುಂದೆಯೇ ನಮ್ಮ ವಿರುದ್ದ ಅಬ್ಬರಿಸಿದ್ರು. ಮಸೀದಿಯ ಒಳಗೆ ಕರೆದುಕೊಂಡು ಹೋಗಿ ಬಹಿರಂಗ ಕ್ಷಮೆಯಾಚಿಸುವಂತೆ ಬೆದರಿಕೆ ಹಾಕಿದ್ರು. ದುರಂತ ಅಂದ್ರೆ ಮಸೀದಿಯಲ್ಲಿ ಬಾಂಗ್ ಕೊಡೋ ಮೈಕ್ ನಲ್ಲೇ ಇಡೀ ಊರಿಗೆ ಕೇಳುವಂತೆ ಪತ್ರಕರ್ತನಾದ ನಾನು ಕ್ಷಮೆ ಕೇಳಬೇಕು ಅನ್ನೋದು ಅವ್ರ ಆಗ್ರಹವಾಗಿತ್ತು. ಅಲ್ಲದೇ ನನ್ನ ಅಷ್ಟೂ ಕ್ಷಮಾಪನ ಹೇಳಿಕೆಯನ್ನ ಪತ್ರದಲ್ಲಿ ದಾಖಲಿಸಿ ಸಹಿ ಹಾಕೋದ್ರ ಜೊತೆಗೆ ಮೊಬೈಲ್ ಮುಂದೆಯೂ ಹೇಳಿಕೆ ನೀಡುವಂತೆ ಅಲ್ಲಿದ್ದ ಅಷ್ಟೂ ಜನ ಬೆದರಿಸಿದ್ರು. ಇಲ್ಲದೇ ಇದ್ರೆ ಇಲ್ಲಿಂದ ಹೊರ ಹೋಗೋದಕ್ಕೆ ಬಿಡೋದಿಲ್ಲ ಅನ್ನೋವಷ್ಟರ ಮಟ್ಟಿಗೆ ಅವ್ರ ದೌರ್ಜನ್ಯ ಬಂದು ನಿಂತಿತ್ತು. ಆದ್ರೆ ಈ ಎಲ್ಲಾ ಘಟನೆಗೆ ಸ್ವತಃ ಪೊಲೀಸ್ ಅಧಿಕಾರಿ ಕೂಡ ಸಾಕ್ಷಿಯಾಗಿದ್ದು ಮಾತ್ರ ದುರಂತ. ಹೀಗಾಗಿ ತಪ್ಪೇ ಮಾಡದ ನಾನು ಕ್ಷಮೆ ಕೇಳೋದಕ್ಕೆ ಒಪ್ಪಲಿಲ್ಲ. ಬೇಕಾದ್ರೆ ಶೂಟ್ ಮಾಡಿರೋ ಅಷ್ಟು ದೃಶ್ಯಗಳನ್ನ ಡಿಲೀಟ್ ಮಾಡಿ ಜೀವ ಉಳಿಸಿಕೊಳ್ಳೋದಕ್ಕೆ ಸಿದ್ದನಾದೆ. ಕೊನೆಗೆ ಪೊಲೀಸರಿಗೂ ನಮ್ಮನ್ನು ಅಲ್ಲಿಂದ ಹೊರಗೆ ಕರೆದುಕೊಂಡು ಹೋಗಲು ಅವ್ರು ಹೇಳೋ ಎಲ್ಲಾ ಮಾತಿಗೂ ತಲೆಯಾಡಿಸೋದು ಅನಿವಾರ್ಯವಾಗಿತ್ತು. ಅಕ್ಷರಶಃ ತಾಲಿಬಾನ್ ಮಾದರಿಯಲ್ಲಿ ಅವರು ಹೇಳಿದ್ದನ್ನು ನಮ್ಮ ಕೈಯ್ಯಲ್ಲಿ ಮಾಡಿಸಿ ನಮ್ಮನ್ನು ಅಲ್ಲಿಂದ ಬಿಟ್ಟು ಕಳಿಸಿದರು. ಆದ್ರೆ ತಪ್ಪೇ ಮಾಡದ ನಾವು ಮಾತ್ರ ಅವ್ರ ಬಳಿ ಕ್ಷಮೆ ಕೇಳದೇ ನಮ್ಮಲ್ಲಿದ್ದ ಶೂಟ್ ಮಾಡಿದ ದೃಶ್ಯಗಳನ್ನು ಡಿಲೀಟ್ ಮಾಡಲು ಒಪ್ಪಿಕೊಂಡೆವು. ಅಲ್ಲದೇ ಮಸೀದಿಯ ಸುದ್ದಿ ಕೂಡ ಟಿವಿಯಲ್ಲಿ ಬರಲೇ ಬಾರದು ಅಂತೆಲ್ಲಾ ಎಚ್ಚರಿಕೆ ನೀಡಿದ ಅವರು ಅದಕ್ಕೆಲ್ಲಾ ಒಪ್ಪಿಗೆ ಸೂಚಿಸಿದ ಮೇಲೆಯೇ ನಮ್ಮನ್ನ ಬಿಟ್ಟು ಕಳುಹಿಸಿದ್ದು…….ನಿಜಕ್ಕೂ ಅಲ್ಲಿ ನಾವು ಕಳೆದ ಆ ಎರಡು ಘಂಟೆಗಳು ಅತ್ಯಂತ ಭಯಾನಕ.

ಉಗ್ರರ ಒತ್ತೆಯಾಳುಗಳಾಗಿ ಸಾವಿನ ಬಾಗಿಲು ತಟ್ಟಿ ಬಂದ ಅನುಭವ ನಮ್ಮದ್ದು. ಯಾಕೆಂದ್ರೆ ಅಲ್ಲಿದ್ದ ಒಬ್ಬೊಬ್ಬರದ್ದು ಒಂದೊಂಥರ ವರ್ತನೆ. ಒಬ್ಬರು ಹಲ್ಲೆ ನಡೆಸೋಕೆ ಬಂದ್ರೆ ಇನ್ನೊಬ್ಬರದ್ದು ಅವಾಚ್ಯ ಶಬ್ದಗಳ ನಿಂದನೆ. ಸುಡ್ತೀವಿ, ಕೊಲ್ತೀವಿ ಅನ್ನೋ ಮೂಲಕವೇ ಅಲ್ಲಿದ್ದ ಅಷ್ಟೂ ಜನ ಮಾನವೀಯತೆಯ ರೇಖೆಯನ್ನೇ ದಾಟಿ ಅತ್ಯುಗ್ರ ರೀತಿಯಲ್ಲಿ ದೌರ್ಜನ್ಯ ಎಸಗಿದ್ರು.

ಹೀಗಾಗಿ ನನ್ನ ಪತ್ರಕರ್ತ ವೃತ್ತಿಯಲ್ಲಿ ನಿನ್ನೆಯ ಘಟನೆ ಅತ್ಯಂತ ಭಯಾನಕ ಅನುಭವ. ಮಾನವೀಯತೆಯ ಅರ್ಥವೇ ಗೊತ್ತಿಲ್ಲದ ಜನರ ನಮ್ಮನ್ನು ತೀರಾ ಕೀಳಾಗಿ ನಡೆಸಿಕೊಂಡರು. ತಮ್ಮ ಅಷ್ಟೂ ಆಗ್ರಹ, ಎಚ್ಚರಿಕೆಗಳನ್ನ ನಮ್ಮ ಮೇಲೇ ಹೇರುವ ಮೂಲಕ ಜೀವ ಭಯವನ್ನ ಒಡ್ಡಿದರು. ಹೀಗಾಗಿ ಇಷ್ಟೆಲ್ಲಾ ಆದ ಮೇಲೆಯೂ ಈ ದಾಳಿಯನ್ನು ಒಬ್ಬ ಪತ್ರಕರ್ತನಾಗಿ ತೀರಾ ಸಹಜ ಅಂತ ಕರೆಸಿಕೊಂಡು ಸುಮ್ಮನಾಗದು ಯಾಕೋ ಸರಿ ಕಾಣಲಿಲ್ಲ. ಅಲ್ಲದೇ ಭವಿಷ್ಯದ ದೃಷ್ಟಿಯಿಂದಲೂ ಅದು ಸರಿಯಲ್ಲ. ಹೀಗಾಗಿ ಪತ್ರಕರ್ತರಾಗಿ ನಾವೆಲ್ಲರೂ ಈ ಘಟನೆಯಲ್ಲಿ ತಪ್ಪಿತಸ್ಥರಲ್ಲ. ಕಾನೂನು ಬದ್ದವಾಗಿಯೇ ಹೇಳಿಕೆ ಪಡೆಯೋ ದೃಷ್ಟಿಯಿಂದ ಮಸೀದಿಗೆ ತೆರಳಿದ್ದೆವಷ್ಟೇ. ಹೀಗಿರುವಾಗ ನಮ್ಮ ಮೇಲೆ ನಡೆದ ದಾಳಿ ಪತ್ರಿಕಾಸ್ವಾತಂತ್ರ್ಯದ ಮೇಲೆ ನಡೆದ ದಾಳಿಯ ಜೊತೆಗೆ ಮಾನವೀಯತೆಯ ರೇಖೆಯನ್ನು ದಾಟಿ ದಾಖಲಾದ ಅಮಾನುಷ ದಾಳಿಯೂ ಹೌದು. ಆದ್ದರಿಂದ ಘಟನೆಯಲ್ಲಿ ಪಾಲುದಾರರು ಅಂತ ಕರೆಸಿಕೊಳ್ಳುವ ಅಷ್ಟೂ ಜನರಿಗೆ ಕಾನೂನಿನ ಪ್ರಕಾರ ಶಿಕ್ಷಯಾಗಲಿ ಅನ್ನೋದಷ್ಟೇ ನನ್ನ ಮತ್ತು ನಮ್ಮ ತಂಡದ ಆಗ್ರಹ. ಸಮಾಜಕ್ಕೆ ಎಲ್ಲವನ್ನ ತಿಳಿಸೋ ನಮ್ಮಂಥ ಪತ್ರಕರ್ತರನ್ನೇ ಈ ರೀತಿಯಾಗಿ ನಡೆಸಿಕೊಳ್ಳೋ ಸೂರಲ್ಪಾಡಿಯ `ಅವರ’ ಈ ಕೃತ್ಯವನ್ನು ನಾನಂತೂ ಒಪ್ಪೋದಕ್ಕೆ ಸಿದ್ದನಿಲ್ಲ. ಹೀಗಾಗಿ ಆತ್ಮಸಾಕ್ಷಿಗೆ ಅನುಗುಣವಾಗಿ ಅಂಥವರ ವಿರುದ್ದ ನಾನು ಪೊಲೀಸ್ ದೂರು ಕೊಟ್ಟಿರೋದು ಸರಿ ಅಂದುಕೊಳ್ಳುತ್ತೇನೆ. ಹೋಂಸ್ಟೇ ದಾಳಿ, ಪಬ್ ದಾಳಿ ಮತ್ತು ಇನ್ನಿತರ ಅನೇಕ ಅಮಾನವೀಯ ದಾಳಿಗಳನ್ನು ಸುದ್ದಿ ಮಾಡಿದ ಪತ್ರಕರ್ತರಾದ ನಮ್ಮ ಮೇಲೆ ನಡೆದ ಈ ದಾಳಿ ನಿಜಕ್ಕೂ ಕರಾವಳಿಯ ಮತಾಂಧರ ಕ್ರೌರ್ಯಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ ಎನ್ನದೇ ಬೇರೆ ವಿಧಿಯಿಲ್ಲ. ಕೊನೆಯದಾಗಿ ನಾವು ಮಾಡಲು ಹೊರಟ ಸುದ್ದಿ ಪೂರ್ಣಗೊಂಡಿಲ್ಲ. ಅಲ್ಲದೇ ನಾವು ಈ ಸಾಮಾಜಿಕ ಬಹಿಷ್ಕಾರದ ಸುದ್ದಿಯ ವಿಚಾರದಲ್ಲಿ ಯಾರ ಮೇಲೂ ತಪ್ಪಿತಸ್ಥ ಅನ್ನೋ ಜಡ್ಜ್ ಮೆಂಟ್ ಕೂಡ ಕೊಟ್ಟಿಲ್ಲ. ಮಾಧ್ಯಮ ಅಂದ್ರೆ ನ್ಯಾಯಾಲಯ ಅಲ್ಲ ಅನ್ನೋ ಸಿದ್ದಾಂತಕ್ಕೆ ಬದ್ಧನಾದ ನನಗೆ ಸೂರಲ್ಪಾಡಿಯ ವರದಿ ಕೂಡ ಸಮಾಜದ ಮುಂದೆ ತೆರೆದಿಡೋ ವಾಸ್ತವತೆಯಷ್ಟೇ ವಿನಃ ನಾವೇ ಕೊಡೋ ತೀರ್ಪುಗಳಲ್ಲ. ಹೀಗಾಗಿ ಎರಡೂ ಕಡೆಯ ವಾದಗಳನ್ನು ಆಲಿಸಿ ಸುದ್ದಿ ಮಾಡುವ ನಮಗೆ ಎರಡೂ ಕಡೆಯ ಹೇಳಿಕೆಗಳೂ ಅತ್ಯಮೂಲ್ಯ. ಹೀಗಾಗಿ ನಮ್ಮ ಮೇಲೆ ನಡೆದ ದಾಳಿಯ ನಂತರವೂ ಸುದ್ದಿಯನ್ನು ಪೂರ್ಣಗೊಳಿಸುತ್ತೇವೆ. ಅದೂ ಮತ್ತೆ ಸೂರಲ್ಪಾಡಿಯ ಮಸೀದಿ ಆಡಳಿತದ ಹೇಳಿಕೆಯನ್ನು ದಾಖಲಿಸಿಯೇ……!

Tuesday 14 April 2015

ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಅಂದಂಗಾಯ್ತು ತಾಳಿ ಕಿತ್ತು ಹಾಕೋ ಚಳುವಳಿ!


ಭಾರತದ ದೇಶದಲ್ಲಿ ಮೂರ್ಖರ ಸಂಖ್ಯೆ ಹೆಚ್ಚಾಗುತ್ತಿದೆಯೋ ಅಥವಾ ಬುದ್ದಿವಂತರು ಅನಿಸಿಕೊಂಡವರು ದೊಡ್ಡ
ಮಟ್ಟದಲ್ಲಿ ಬೆಳೆಯುತ್ತಿದ್ದಾರೋ ಗೊತ್ತಿಲ್ಲ. ಆದ್ರೆ ಪ್ರಗತಿಪರರು, ಬುದ್ದಿಜೀವಿಗಳು ಅನ್ನೋ ಹೆಸ್ರಿನಲ್ಲಿ ದೇಶದಲ್ಲಿ
ಅರಾಜಕತೆ ಸೃಷ್ಟಿಸೋ ಪ್ರಯತ್ನವಂತೂ ಸದ್ದಿಲ್ಲದೇ ನಡೆಯುತ್ತಿದೆ ಅನ್ನೋದಂತೂ ಸ್ಪಷ್ಟ. ಇದರ ಸ್ಯಾಂಪಲ್ ಎಂಬಂತೆ
ತಮಿಳುನಾಡಿನ ಸಂಘಟನೆಯೊಂದು ನೇರವಾಗಿ ಹೆಣ್ಣಿನ ತಾಳಿಗೆ ಕೈ ಹಾಕಿದೆ. ತಾಳಿ ಅನ್ನೋದು ಹೆಣ್ಮಕ್ಕಳ ದಾಸ್ಯದ
ಸಂಕೇತ, ಇದ್ರಲ್ಲಿ ಹೆಣ್ಣನ್ನ ಗುಲಾಮಳಂತೆ ಕಾಣಲಾಗುತ್ತೆ ಅಂತ ವಾದ ಮಂಡಿಸಿದೆ. ಹೀಗಾಗಿಯೇ ತಾಳಿಯನ್ನ ಕಿತ್ತು
ಹಾಕಿಸೋ ಮೂಲಕ ವಿವಾಹಿತ ಮಹಿಳೆಯನ್ನ ದಾಸ್ಯದಿಂದ ಮುಕ್ತವಾಗಿಸೋ ಪ್ರಯತ್ನ ಮುಕ್ತವಾಗಿ ನಡೀತಾ ಇದೆ!
ಇದ್ರ ಮಧ್ಯೆ ಈ ತಾಳಿ ಸಂಸ್ಕೃತಿಯನ್ನ ಬ್ರಾಹ್ಮಣರು ಹೇರಿದ್ದು ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ಇದನ್ನೆಲ್ಲಾ
ನೋಡಿದ್ರೆ ಒಂದಂತೂ ಸತ್ಯ...ತಾಳಿ ಕೀಳೋ ಪ್ರತಿಭಟನೆಯಲ್ಲಿ ಹೆಣ್ಣು ದಾಸ್ಯದಿಂದ ಮುಕ್ತಳಾಗ್ತಾಳೆ ಅನ್ನೋದಕ್ಕಿಂತಲೂ ಹೆಚ್ಚಾಗಿ ಈ ದೇಶದಲ್ಲಿ ಆಳವಾಗಿ ಬೀಡು ಬಿಟ್ಟಿರೋ ಬ್ರಾಹ್ಮಣ್ಯವನ್ನ ವಿರೋಧಿಸೋ ಹಿಡನ್ ಅಜೆಂಡಾ ಅಡಗಿರೋದು ಸ್ಪಷ್ಟ. ಇದಕ್ಕಾಗಿ ಬ್ರಾಹ್ಮಣರನ್ನ ವಿರೋಧಿಸೋ ನೆಪದಲ್ಲಿ ಹೆಣ್ಣಿನ ತಾಳಿಗೆ ಕೈ ಹಾಕೋ ಕೆಲಸಕ್ಕೆ ಈ ಸಂಘಟನೆಗಳು ಇಳಿದು ಬಿಟ್ಟಿವೆ.


ಇನ್ನು ನಾನು ಈ ಹಿಂದೆ ತಾಳಿಯ ಬಗ್ಗೆ ಪತ್ರಿಕೆಗಳಲ್ಲಿ ಓದಿದಂತೆ ಮತ್ತು ಇತರೆ ಮಾಧ್ಯಮಗಳ ಮೂಲಕ ತಿಳಿದು ಕೊಂಡಂತೆ, ಅಧ್ಯಯನಗಳ ಪ್ರಕಾರ, ಹಿಂದೂ ವಿವಾಹದ ವಿಧಿವಿಧಾನಗಳ ಬಗೆಗೆ ಸ್ಥೂಲವಾಗಿ ತಿಳಿಸುವ ವಾಲ್ಮೀಕಿ ರಾಮಾಯಣ, ವ್ಯಾಸ ಭಾರತದಲ್ಲಾಗಲೀ, ಗೃಹಸೂತ್ರ, ಮನುಸ್ಮೃತಿ, ಯಾಜ್ಞವಲ್ಕ ಮೊದಲಾದ ಗ್ರಂಥಗಳಲ್ಲಿ ತಾಳಿಯ ಬಗ್ಗೆ ಉಲ್ಲೇಖವಿಲ್ಲ. ಅಷ್ಟೇ ಏಕೆ, “ಮಾಂಗಲ್ಯಂ ತಂತು ನಾನೇನ ...”ಎಂದು ಹತ್ತು ಜನರ ಸಮಕ್ಷಮದಲ್ಲಿ ತಾಳಿ ಕಟ್ಟುವಾಗ ಹೇಳಲಾಗುವ ಈ ಮಂತ್ರವು ವೈದಿಕ ಮೂಲದ್ದಲ್ಲ! ತಾಳಿಯ ಪರಿಕಲ್ಪನೆ ಹುಟ್ಟಿದ ನಂತರ ಪುರೋಹಿತರಿಂದ ಸೃಷ್ಟಿಸಲ್ಪಟ್ಟ ಮಂತ್ರ ಎನ್ನುತ್ತಾರೆ ಸಂಶೋಧಕರು. ಮಾಂಗಲ್ಯಕ್ಕೆ ಈಗಿರುವ ಸ್ಥಾನ ಪ್ರಾಚೀನ ಕಾಲದಲ್ಲಿಯೂ ಇದ್ದಿದ್ದರೆ ಅಂದಿನ ಕೃತಿಗಳಲ್ಲಿ ಅದು ಪ್ರಸ್ತಾಪವಾಗಿರಬೇಕಿತ್ತು. ಅಲ್ಲವೇ? ಆದ್ರೆ ಅಲ್ಲೆಲ್ಲೂ ತಾಳಿಯ ಬಗ್ಗೆ ಉಲ್ಲೇಖಿಸಿಲ್ಲ ಅನ್ನೋದು ಈ ದೇಶದ ಮಾಧ್ಯಮಗಳು ಸ್ಪಷ್ಟವಾಗಿ ಈ ಹಿಂದೆಯೇ ಅದೆಷ್ಟೋ ಲೇಖನಗಳಲ್ಲಿ ಉಲ್ಲೇಖಿಸಿದೆ. ಹೀಗಿರೋವಾಗ ತಾಳಿ ಬ್ರಾಹ್ಮಣ್ಯದ ಸಂಕೇತ ಅನ್ನೋದು ಎಷ್ಟು ಸರಿ? ಒಂದು ವೇಳೆ ಬ್ರಾಹ್ಮಣ್ಯದ ಸಂಕೇತ ಅನ್ನೋದಾದ್ರೆ ತಾಳಿ ಕೀಳುವ ಮುನ್ನವೇ ಈ ಬಗ್ಗೆ ದಾಖಲೆಗಳನ್ನ ತೋರಿಸಬಹುದಲ್ಲವೇ? ಇನ್ನು ತಾಳಿ ಕೀಳೋ ಸಂಘಟನೆಗಳು ತಾಳಿಯಿಂದ ಹೆಣ್ಣಿನ ಮೇಲೆ ಆಗೋ ದೌರ್ಜನ್ಯಗಳನ್ನಾದ್ರೂ ತಿಳಿಸೋ ಕೆಲಸ ಮಾಡಿದ್ರೆ ಒಳ್ಳೆಯದು. ತಾಳಿ ಈ ದೇಶದ ಸಂಸ್ಕೃತಿ, ಹಿಂದೂ ಪದ್ದತಿ ಅನ್ನೋದಕ್ಕಿಂತಲೂ ಹೆಚ್ಚಾಗಿ ವಿವಾಹಿತ ಮಹಿಳೆಯನ್ನ ಗುರುತಿಸೋ ಒಂದು ವಿಧಿ ಬದ್ದ ವಿಧಾನ ಅಂತಾನೂ ಹೇಳಬಹುದು. ತಾಳಿ ಧರಿಸಿದ ಹೆಣ್ಮಗಳನ್ನ ಗೌರವದಿಂದ ಕಾಣೋ ವ್ಯಕ್ತಿತ್ವವೂ ಈ ದೇಶದಲ್ಲಿ ಬೆಳೆದು ಬಂದಿದೆ. ಆಕೆ ವಿವಾಹಿತೆ ಅನ್ನೋದನ್ನ ತಿಳಿಸೋ ತಾಳಿ ಹೆಣ್ಣಿಗೆ ಈ ದೇಶದಲ್ಲಿ ಗೌರವಯುತ ಬದುಕು ಕಟ್ಟಿಕೊಟ್ಟಿದೆ ಅನ್ನೋದು ನನ್ನ ಭಾವನೆ. ಆದ್ರೆ ಇದನ್ನ ವಿರೋಧಿಸಿ ಅದಕ್ಕೊಂದು ಕೆಟ್ಟ ಅರ್ಥ ಕಲ್ಪಿಸೋ ಈ ಸಂಘಟನೆಗಳಿಗೆ ತಾಳಿ ಕಿತ್ತು ಹಾಕೋ ಹೋರಾಟ ಮಹಾನ್ ಕಾರ್ಯವಾಗಿ ಕಂಡಿದ್ದು ಮಾತ್ರ ದುರಂತ...! ಈ ಸಂಘಟನೆಗಳು ವಿರೋಧಿಸೋ ಭರದಲ್ಲಿ ಹೆಣ್ಣಿನ ಅಪಮಾನ ಮಾಡುತ್ತಿವೆ ಅನ್ನೋದು ನನ್ನ ಅನಿಸಿಕೆ. ಈ ದೇಶದಲ್ಲಿ ಉದ್ದಾರ ಮಾಡೋದಕ್ಕೆ ಅದೆಷ್ಟೋ ಕೆಲಸಗಳಿವೆ. ಹೀಗಿದ್ರೂ ವೈದಿಕ ಸಂಸ್ಕೃತಿಯನ್ನ ವಿರೋಧಿಸೋ ನೆಪದಲ್ಲಿ ತಾಳಿಯನ್ನ ಕಿತ್ತೆಸೆಯೋ ಈ ಸಂಘಟನೆಗಳಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಇನ್ನು ಇವರ ವಿರೋಧಿಯಾಗಿ ಮಾತೆತ್ತಿದರೆ ಬ್ರಾಹ್ಮಣ್ಯದ ಪರ, ಸಂಘದ ಪರ, ಹಿಂದೂ ಪರ ಅನ್ನೋ ಹಣೆಪಟ್ಟಿ ಬೆಳೆಯುತ್ತಲೇ ಹೋಗುತ್ತವೆ. ಆದ್ರೆ ಈ ದೇಶದಲ್ಲಿ ಮಾಡಬೇಕಾಗಿರೋದನ್ನ ಬಿಟ್ಟು, ಅಶಾಂತಿ ಸೃಷ್ಟಿಸೋ ಕೆಲಸಕ್ಕೆ ಕೈ ಹಾಕೋ ಇವ್ರುಗಳನ್ನ ದೇಶದೊಳಗಿನ ಭಯೋತ್ಪಾದಕರು ಅಂದ್ರೂ ತಪ್ಪಿಲ್ಲ......ಇನ್ನು ಹಿಂದೂ ಸಂಸ್ಕೃತಿಯ ಬುಡಕ್ಕೆ ದಿನಕ್ಕೊಂದು ಕೊಡಲಿಯೇಟು ಹಾಕೋ ಇಂಥವ್ರು ಮುಸ್ಲಿಮರಲ್ಲಿ ಬೀಡು ಬಿಟ್ಟಿರೋ ಬುರ್ಖಾ ಸಂಸ್ಕೃತಿಯನ್ನೇಕೆ ವಿರೋಧಿಸ್ತಾ ಇಲ್ಲ? ಇದು ಕೂಡ ಹೆಣ್ಣಿನ ದಾಸ್ಯದ ಸಂಕೇತವಲ್ಲವೇ? ಇಲ್ಲಿ ಹೆಣ್ಣನ್ನ ಗುಲಾಮಳನ್ನಾಗಿಸೋ ಕೆಲಸ ನಡೆಯುತ್ತಿಲ್ಲವೇ? ಹಾಗಿದ್ರೆ ತಾಳಿ ಕಿತ್ತು ಹಾಕೋ ಚಳುವಳಿಯ ರೀತಿಯಲ್ಲಿ ಈ ಸಂಘಟನೆಗಳಿಗೆ ಬುರ್ಖಾ ಕಿತ್ತು ಹಾಕಿ ಅನ್ನೋ ಚಳುವಳಿ ಮಾಡೋ ತಾಕತ್ತಿದೆಯೇ?....ಖಂಡಿತಾ ಇಲ್ಲ. ಕಾರಣ ಇಷ್ಟೇ...ಈ ದೇಶದ ಸಂಸ್ಕೃತಿ ಅಂತ ಕರೆಸಿಕೊಳ್ಳೋ ವಿಚಾರಗಳನ್ನ ಬುಡ ಸಮೇತ ಕಿತ್ತು ಹಾಕೋದೊಂದೇ ಇವ್ರ ಉದ್ದೇಶ.

ನನ್ನ ಪ್ರಕಾರ ಬ್ರಾಹ್ಮಣತ್ವ ಈ ದೇಶಕ್ಕೆ ಅಪಾಯಕಾರಿ ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ಹಾಗಂತ ಈ ದೇಶದಲ್ಲಿ ಆಚರಣೆಯಲ್ಲಿರೋ ಎಲ್ಲಾ ಆಚಾರ-ವಿಚಾರಗಳು ಬ್ರಾಹ್ಮಣರ ಸ್ವತ್ತು ಅಂತ ವಾದಿಸೋದು ಸರಿಯಲ್ಲ. ಅಲ್ಲದೇ ಇದೇ ವಾದ ಮುಂದಿಟ್ಟುಕೊಂಡು ವೈವಾಹಿಕ ಜೀವನದ ಅತ್ಯಮೂಲ್ಯ ಸಂಕೇತ ಅನಿಸಿಕೊಂಡಿರೋ ತಾಳಿ ಕೀಳೋ ಇವ್ರದ್ದು ಮೂರ್ಖತನದ ಪರಮಾವಧಿಯಲ್ಲದೇ ಇನ್ನೇನು? ಇನ್ನು ಇಂದಿಗೂ ಈ ದೇಶದ ಅದೆಷ್ಟೋ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿವಾಹಿತ ಹೆಣ್ಮಕ್ಕಳು ತಾಳಿಯನ್ನ ಕಟ್ಟಿಕೊಳ್ತಾರೆ. ಹಾಗಿದ್ರೆ ಇವ್ರೆಲ್ಲರೂ ಬ್ರಾಹ್ಮಣರಿಂದ ಪ್ರೇರೇಪಣೆಗೆ ಒಳಗಾದ್ರೆ ಅನ್ನೋದನ್ನ ಚಳುವಳಿಗಾರರು ತಿಳಿಸಬೇಕು. ಅದಕ್ಕೂ ಮುಖ್ಯವಾಗಿ ತಾಳಿಯಿಂದ ಹೆಣ್ಣು ದಾಸ್ಯಕ್ಕೆ ಒಳಗಾಗ್ತಿದ್ದಾಳೆ ಅನ್ನೋದ್ರ ಬದಲು ಸಮಾಜದಲ್ಲಿ ಬೀಡು ಬಿಟ್ಟಿರೋ ವರದಕ್ಷಿಣೆ ಪಿಡುಗಿನ ವಿರುದ್ದ ಈ ಸಂಘಟನೆಗಳು ಧ್ವನಿಯೆತ್ತೋದು ಒಳಿತು. ವಿವಾಹಿತ ಹೆಣ್ಣಿನ ಮೇಲೆ ಈ ದೇಶದಲ್ಲಿ ಶೋಷಣೆ ಆಗ್ತಿದೆ ಎಂದಾದ್ರೆ ಅದು ಹೆಚ್ಚಾಗಿ ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ವಿಚಾರವಾಗಿಯೇ ನಡೀತಾ ಇದೆ. ಅದು ಬಿಟ್ಟು ಎಲ್ಲೂ ತಾಳಿ ಕಟ್ಟಿದ ತಕ್ಷಣ ಹೆಣ್ಣು ಗುಲಾಮಳಾಗಿ ಬದಲಾಗೋದಿಲ್ಲ.

ದುರಂತ ಅಂದ್ರೆ ತಾಳಿ ಕಟ್ಟದೇ, ತಮ್ಮದೇ ಆದ ಶೈಲಿಯಲ್ಲಿ ಮದುವೆಯಾಗೋ ಅದೆಷ್ಟೋ ಸಂಸಾರಗಳು ಹಾದಿ ತಪ್ಪಿದ ಉದಾಹರಣೆಗಳಿವೆ. ಹಾಗಂತ ಇಲ್ಲಿ ತಾಳಿ ಕಟ್ಟಿದ್ದರೆ ಸಂಸಾರ ಸರಿಯಾಗಿರ್ತಿತ್ತು ಅನ್ನೋದು ನನ್ನ ವಾದವಲ್ಲ. ಆದ್ರೆ ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಅನ್ನೋ ಎಡಬಿಡಂಗಿಗಳ ವರ್ತನೆ ಬಗ್ಗೆ ಅನಿಸಿಕೆಯಷ್ಟೇ. ಈ ದೇಶದಲ್ಲಿ ಅವ್ರವ್ರ ಆಚಾರ-ವಿಚಾರಗಳು ಅವ್ರವ್ರ ನಂಬಿಕೆಗೆ ಬಿಟ್ಟದ್ದು. ಅದನ್ನ ವಿರೋಧಿಸೋ ನೆಪದಲ್ಲಿ ಭಾವನೆಗಳಿಗೆ ಧಕ್ಕೆ ತರೋದು ಸರಿಯಲ್ಲ. ಬ್ರಾಹ್ಮಣರ ಆಚರಣೆ ಅಂತ ಕರೆಸಿಕೊಳ್ಳೋ ಸಾಕಷ್ಟು ವಿಚಾರಗಳಲ್ಲಿ ಗೊಂದಲಗಳಿವೆ. ಕೆಲವು ವಿಚಾರಗಳಲ್ಲಿ ಮನುಷ್ಯನ ಶೋಷಣೆಯೂ ನಡೀತಾ ಇದೆ. ಇನ್ನು ಕೆಲವು ವಿಚಾರಗಳಲ್ಲಿ ಮೂಢನಂಬಿಕೆಯನ್ನ ತುಂಬಿ ಜನ್ರನ್ನ ಅಜ್ನಾನಿಗಳನ್ನಾಗಿಸೋ ಕೆಲಸವೂ ನಡೀತಾ ಇದೆ. ಆದ್ರೆ ಎಲ್ಲಿ ದೇಶಕ್ಕೆ, ಜನ್ರಿಗೆ ಅಪಾಯ ಇದೆ ಅನ್ನೋದು ಅರಿವಾಗುತ್ತೋ ಅಂಥದ್ದನ್ನ ತಡೆಯೋದ್ರಲ್ಲಿ ಖಂಡಿತಾ ತಪ್ಪಿಲ್ಲ. ಹಾಗಂತ ತಾಳಿ ಕಟ್ಟಿಸಿಕೊಳ್ಳೋದೇ ಅಪಾಯ ಅನ್ನೋದಾದ್ರೆ ಈ ದೇಶದ ನ್ಯಾಯಾಂಗ ವ್ಯವಸ್ಥೆಯೇ ಇಂಥದ್ದಕ್ಕೆ ಸೂಕ್ತ ಉತ್ತರ ನೀಡಬೇಕಿದೆ......

Monday 30 June 2014

ಮನಸ್ಸೆಲ್ಲಾ ಆವರಿಸಿದವನು ಶೂನ್ಯ ಬಿಟ್ಟು ಹೋದಾಗ...!


...............ಕಣ್ಣೀರ ಕೊಳದಲ್ಲಿ
ಹುಟ್ಟಿರದ ದೋಣಿಯಲಿ
ಏಕಾಂಗಿ ಕುಳಿತಿರಲು
ನಕ್ಷತ್ರ ಅಳುತಿರಲು
ಇರುಳಿನ ಗಾಳಿ ನರಳಿ
ಗಾನದ ಗಾಯಕೆ ಮಾಯದ ನೋವಿದೆ
ಪ್ರೀತಿಯ ಹೂವಿಗೆ ಆಳದ ಅಳಲಿದೆ..................!
..................................ಇದು ಎಚ್.ಎಸ್.ವೆಂಕಟೇಶ್ ಮೂರ್ತಿಯವರ ಸಾಹಿತ್ಯದಲ್ಲಿ ಮೂಡಿಬಂದಿರೋ ಸಿ.ಅಶ್ವಥ್ ಕಂಠದಲ್ಲಿ ಹೊರಹೊಮ್ಮಿರೋ ಪ್ರೇಯಸಿ ಪ್ರೀತಿಸಿ ಮರೆತೆಯಾ? ಎಂಬ ಹಾಡಿನ ಸಾಲುಗಳು. ಹಾಡುಗಳು ಅನ್ನೋದೇ ಹಾಗೆ ಬದುಕಿನ ಪ್ರತೀ ಹೆಜ್ಜೆಗಳನ್ನ ಅದ್ಯಾಗೋ ಕಣ್ಣಿಗೆ ಕಟ್ಟೋವಂತೆ ಕಟ್ಟಿ ಕೊಡುತ್ತೆ. ಇನ್ನು ಹಾಡುಗಳನ್ನ ಕೇಳೋವಾಗಲೂ ಅಷ್ಟೇ....ಬೇಜಾರಾಗಿದ್ದಾಗ ಸಾಹಿತ್ಯ ಇಷ್ಟ ಆದ್ರೆ, ಖುಷಿಯಾಗಿದ್ದಾಗ ಸಂಗೀತ ಇಷ್ಟ ಆಗುತ್ತೆ.....ಬದುಕಲ್ಲೂ ಅಷ್ಟೇ ಖುಷಿಯಲ್ಲಿದ್ದಾಗ ಎಲ್ರೂ ಇಷ್ಟ ಆಗ್ತಾರೆ...ಆದ್ರೆ ನೋವಾದಾಗ ಜಸ್ಟ್ ಹತ್ತಿರ ಅಂತ ಅನಿಸಿಕೊಂಡವ್ರು ಮಾತ್ರ ಇಷ್ಟ ಆಗ್ತಾರೆ. ನಾನಿವತ್ತು ಬರೀತಾ ಇರೋ ಲೇಖನ ನನ್ನ ಇಷ್ಟ-ಕಷ್ಟಗಳಿಗೆ ಸಂಬಂಧಪಟ್ಟದ್ದಲ್ಲ. ಬದಲಾಗಿ ನನ್ನನ್ನ ಇಷ್ಟ ಪಟ್ಟವರಿಗೆ ಸಂಬಂಧಿಸಿರೋದು.
ಅವಳ ಹೆಸ್ರು ಕಾವ್ಯ(ಅನಿವಾರ್ಯ ಕಾರಣಗಳಿಂದ ಹೆಸರನ್ನ ಬದಲಿಸಿದ್ದೇನೆ). ಈ ಹುಡುಗಿ ನನ್ನ ಜೊತೆ ಹುಟ್ಟದೇ ಇದ್ರೂ ಬಾಯ್ತುಂಬ ಅಣ್ಣ ಅಂತ ಕರೀತ ತನ್ನ ಜೀವನದ ಬಗ್ಗೆ ಹೇಳ್ತಾ ಇದ್ಳು. ಸಂತೋಷ, ದುಃಖ, ನೋವು-ನಲಿವು ಎಲ್ಲವನ್ನೂ ಇಂಚಿಂಚೂ ನನ್ನ ಜೊತೆ ಅಪ್ಡೇಟ್ ಮಾಡ್ತಿದ್ಳು. ಹೀಗಿರೋವಾಗಲೇ ಮೊನ್ನೆ ಅದ್ಯಾಕೋ ಗೊತ್ತಿಲ್ಲ, ಈ ಪ್ರೀತಿ ಹಿಂಗ್ಯಾಕೆ ಮಾಡುತ್ತೆ? ಅಣ್ಣ ಅಂತ ಸಣ್ಣ ದನಿಯಲ್ಲಿ ಕೇಳಿ ಬಿಟ್ಟಿದ್ದಳು ಕಾವ್ಯ. ದುರಂತ ಅಂದ್ರೆ ಚೆಲ್ಲು ಚೆಲ್ಲು ಸ್ವಭಾವದ ನನ್ನ ತಂಗಿ ಪ್ರೀತಿ ಬಗ್ಗೆ ನನ್ನ ಜೊತೆ ಮಾತನಾಡಿದ್ದು ಆವತ್ತೆ ಮೊದಲು ಅಂದ್ಕೋತಿನಿ. ಹೀಗೆ ತನ್ನ ಪ್ರೀತಿ ಬಗ್ಗೆ, ತನಗೆ ಕೈಕೊಟ್ಟ ಹುಡುಗನ ಬಗ್ಗೆ ಎಲ್ಲವನ್ನೂ ಹೇಳಿಕೊಂಡು ಅತ್ತು ಬಿಟ್ಟಳು ಅವಳು.....! ಹುಡುಗೀರಾ ಕಣ್ಣೀರಿಗೆ ಕರಗಬಾರದು ಅಂತಾರೆ...ಹಾಗಾಗಿ Full alert ಆಗಿದ್ದ ನಾನು ಎಲ್ಲವನ್ನ ಸಾವಕಾಶವಾಗಿ ಕೇಳಿ ಒಂಚೂರು ಸಮಾಧಾನ ಮಾಡಿ ತಂಗಿಯ ಮನಸ್ಸಿನ ನೋವಿಗೆ ಒಂದು ಹಂತದ ಸಾಂತ್ವಾನ ನೀಡಿ ಬಿಟ್ಟೆ. ಆದ್ರೆ ಅದ್ಯಾಕೋ ಅವಳ ನೋವಿಗೆ ಪೂರ್ಣ ಪ್ರಮಾಣದ ಸಂತ್ವಾನ ನೀಡೋಕಂತೂ ನನ್ನಿಂದ ಆಗಲೇ ಇಲ್ಲ. ಹೀಗಾಗಿ ಇವತ್ತು ನಾನು ಒಂದು ಮುಗ್ಧ ಹೆಣ್ಣಿನ(?) ಮನಸ್ಸಿನಲ್ಲಿ ಪರಕಾಯ ಪ್ರವೇಶ ಮಾಡ್ತಾ ಇದೀನಿ...ಒಂದು ಮುಗ್ಧ ಪ್ರೀತಿ, ಶುದ್ದ ಪ್ರೀತಿ...ಹೇಗೆಲ್ಲಾ ಕಾಡುತ್ತೆ ಅನ್ನೋದನ್ನ ನನಗೆ ತಿಳಿದಂತೆ ಹೇಳ್ತೀನಿ.


"Love can't be explained but it can be expressed..!
"ಅನ್ನೋ ಮಾತು ನೂರಕ್ಕೆ ಸತ್ಯ. ಇನ್ನು ಹುಡುಗೀರಾ ವಿಚಾರಕ್ಕೆ ಬಂದ್ರಂತೂ ಅವ್ರಲ್ಲಿ ಮುಗ್ಧತೆ ತುಂಬಿರೋ ಪ್ರೀತಿನೂ ಇರುತ್ತೆ..ಮೋಸ ಮಾಡೋ ನೂರೆಂಟು ಪ್ರೀತಿಗಳೂ ಇರುತ್ತೆ. ಆದ್ರೆ ಮುಗ್ಧತೆಯ ಪ್ರೀತಿ ಅದ್ರಲ್ಲೂ first time love ಅಂತಾರಲ್ಲ..ಅದಂತೂ ಹುಡುಗೀರಾ ಜೀವನದಲ್ಲಿ ಸಖತ್ ನೋವು ಕೊಡುತ್ತೆ.  ಈ ಹುಡುಗೀರಿದಾರಲ್ಲ...ಅವ್ರು ತುಂಬಾನೆ ಪ್ರೀತಿ ಮಾಡೋದು ಅವ್ರ ಫಸ್ಟ್ ಲವ್ವನ್ನ...ಅದೊಂಥರಾ Innocent love ಕಣ್ರೀ...ಆದ್ರೆ ವಿಪರ್ಯಾಸ ಅಂದ್ರೆ ಈ First love ಇದ್ಯಲ್ಲ....ಅದು ಅವರಿಗೆ ಸಿಗೋದೇ ಇಲ್ಲ. ಸಿಕ್ಕೋ ಪ್ರೀತಿ ಮನಸಿನ ಪುಟಗಳಿಗೆ ಭಾರೀ ದೊಡ್ಡ ಗಾಯ ಮಾಡಿ ಹೋಗಿ ಬಿಡುತ್ತೆ. ಆದ್ರೆ ಈ ಪ್ರೀತಿ ಮಾತ್ರ ಜೀವನದ ಕೊನೆ ವರೆಗೆ ಉಳಿಯೋ ಒಂಥರಾ sweet pain...ಅದನ್ನ ಉಳಿಸಿಕೊಂಡು...ನೆನಪಿಸಿಕೊಂಡು ಬದುಕೋದಿದ್ಯಲ್ಲ...really super.....ಇನ್ನು ತನ್ನ first love ಕಳ್ಕೊಂಡ ಹುಡುಗಿ ಮತ್ತೆ ಲವ್ವೇ ಮಾಡೋದಿಲ್ಲ ಅಂತಲ್ಲ. second love ಮಾಡೋದ್ರಲ್ಲಿ ಹುಡುಗ್ರಿಗಿಂತ Fast ಈ ಹುಡುಗೀರು.....ಆದ್ರೂ ತನ್ನ ಫಸ್ಟ್
ಲವರ್ ಅನಿಸಿಕೊಂಡ ಮಹಾನುಭಾವನನ್ನ ಮರೆಯೋದೇ ಇಲ್ಲ. ಅದೊಂಥರ First experience ಅಲ್ವಾ...? ಹಾಗಾಗಿ ಅದನ್ನ ಐತಿಹಾಸಿಕ ಹೆಜ್ಜೆ ಅನ್ನೋ ಥರ ಮನದ ಮರೆಯಲ್ಲಿ ಬಚ್ಚಿಟ್ಟಿರ್ತಾರೆ. ಇದಾಗಿ ಇವ್ರ ಲೈಫಲ್ಲಿ ಎಂಟ್ರಿ ಕೊಡೋ ಮತ್ತೊಬ್ಬ ಕೂಡ ಕೈಕೊಟ್ಟ ಅಂದ್ಕೊಳ್ಳಿ.....ಬೇಜಾರೇ ಇಲ್ಲ...ಅವನಿಲ್ದೇ ಇದ್ರೆ ಮತ್ತೊಬ್ಬ ಅಂತ ಹೋಗೋರೇ ಹೆಚ್ಚು......ಆದ್ರೆ ಫಸ್ಟ್ ಲವ್ ಮಾತ್ರ ಬೆಸ್ಟ್ ಲವ್ ಅಂತಾನೆ ಇರ್ತಾರೆ....
ಅವನ ಜೊತೆ ಆಡಿರೋ ಜಗಳ, ಕಣ್ಣಂಚಿನ ನೋಟ, ಹಿತವಾದ ಸ್ಪರ್ಶ, ಒಟ್ಟಿಗೆ ಕೂತು ಹೆಣೆದ ಕನಸುಗಳು, ಒಟ್ಟಿಗೆ ಕೂತು ಕೇಳಿದ ಹಾಡುಗಳು, ನೋಡಿದ ಸಿನೆಮಾಗಳು, ಚೆಂದನೆಯ giftsಗಳು, ಒಟ್ಟಿಗೆ ಹೆಜ್ಜೆ ಹಾಕಿದ ಹಾದಿ, ಕೂತು ಹರಟಿದ ಹುಲ್ಲುಹಾಸಿನ ಪಾರ್ಕು..... ಅಥವಾ ಯಾವುದೋ ಒಂದು ಮಾಮೂಲಿ ಜಾಗ.....ಚಾಕೋಲೇಟ್ ತಿನ್ನೋವಾಗ ಮಾಡಿದ ಜಗಳ....ಸಮುದ್ರದ ದಂಡೆಯಲ್ಲಿ ಬೆನ್ನಿಗೆ ಬೆನ್ನಿಟ್ಟು ಕೂತ ಕ್ಷಣಗಳು...ಹೀಗೆ ಇಂಥಹ ಅದ್ಭುತ ಕ್ಷಣಗಳು ಅವ್ರನ್ನ ಕಾಡಿಸದೇ ಇರುತ್ತಾ...? ಎಸ್..... ನಾನು ಮೇಲೆ ಹೇಳಿರೋ ಕಾವ್ಯಾಳಿಗೂ ಆಗಿದ್ದು ಇದೆ...FIRST LOVE....BEST LOVE ಅನ್ನೋ ಹಾಗೆ.....ಅವೆಲ್ಲವನ್ನ ನೆನಪಿಸಿಕೊಂಡು ಕಣ್ಣೀರು ಹಾಕ್ತಾಳೆ.....ಬದುಕೇ ಬೇಡ ಅಂಥ ಸಣ್ಣ ವಯಸ್ಸಲ್ಲೇ ಫಿಲಾಸಫಿಯ ಮಾತುಗಳು....ಸಾಯ್ತೇನೆ ಅನ್ನೋ ಕ್ಷಣಿಕ ಡೈಲಾಗ್ ಗಳು......ಆದ್ರೆ ಏನ್ ಮಾಡೋದು ತಂಗಿ ಅಂತ ಸಾಂತ್ವಾನ ಹೇಳ್ಕೋಬೇಕಷ್ಟೇ.......ಆದ್ರೆ ಹುಡುಗೀರು ಸಖತ್ Fast ಅನ್ನೋದನ್ನ ನನ್ನ ತಂಗಿ ಕಾವ್ಯಾ ಕೂಡ ಸಾಬೀತು ಪಡಿಸಿದ್ದಾಳೆ ಅನ್ನೋದೇ ಖುಷಿ ಕೊಡೋ ವಿಚಾರ.....ಮೊದಲ ಪ್ರೀತಿ ಕೈಕೊಟ್ಟ ನಂತ್ರ ಒದ್ದೆಯಾಗಿದ್ದ ಕಣ್ಣಂಚಿನಲ್ಲಿ ಮತ್ತೊಂದು ಪ್ರೀತಿ ಮೂಡಿದೆ. ಕೈಕೊಟ್ಟವನ ನೆನಪುಗಳನ್ನ ಮೆಲುಕು ಹಾಕುತ್ತಳೇ ಲವ್ ಎಕ್ಸ್ ಪೀರಿಯನ್ಸ್ ಅನ್ನೋ ಅನುಭವದ ಮೇಲೆ ಮತ್ತೊಂದು ಪ್ರೀತಿಯತ್ತ ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾವ್ಯ ಹೊರಳಿದ್ದಾಳೆ. ಹಾಗಂತ ಇದು ಕೂಡ ಶಾಶ್ವತ ಅಂತ ಹೇಳೋದಿಲ್ಲ. ಯಾಕೆಂದ್ರೆ ಕಾಲೇಜು ಜೀವನದಲ್ಲಿ ಎಲ್ಲರೂ ಹುಚ್ಚರೇ....ಹತ್ತಾರು ಕನಸಿನ ಹುಚ್ಚು ಹುಡುಗೀರು ಒಂದು ಕಡೆಯಾದ್ರೆ.........ದಿನಕ್ಕೊಂದು ಕನಸು ಕಾಣೋ ತಲೆ ಕೆಟ್ಟ ಹುಡುಗ್ರು ಇನ್ನೊಂದು ಕಡೆ....ಹಾಗಾಗಿ ನನ್ನ ತಂಗಿ ಕಾವ್ಯಾ ಕೂಡ ಮತ್ತೊಮ್ಮೆ ನನ್ನೆದುರಿಗೆ ಕಣ್ಣೀರು ಹಾಕ್ತಾಳೆ ಅನ್ನೋ ದೃಢವಾದ ನಂಬಿಕೆ ನನಗಂತೂ ಇದ್ದೇ ಇದೆ...! ದೇವರಾಣೆ ಹೇಳ್ತೀನಿ ನನ್ನ ನಂಬಿಕೆಯನ್ನ ನನ್ನ ತಂಗಿ ಯಾವತ್ತೂ ಸುಳ್ಳು ಮಾಡೋದೇ ಇಲ್ಲ ಬಿಡಿ......! ಆದ್ರೆ ಮುಂದಿನ ಸಲ ಅವಳ ಮನಸ್ಸು ಪ್ರೀತಿ ಕಳೆದುಕೊಂಡು ಅಳೋದಿಲ್ಲ.....ಅಳು ಏನಿದ್ರೂ ಕಣ್ಣಂಚಿನಲ್ಲಿ ನೀರಾಗಿ ಹರಿದು ಕ್ಷಣಿಕ ಅನಿಸಿ ಬಿಡುತ್ತೆ....ಹೀಗಾಗಿ ಈ ಪ್ರೀತಿ ಹಿಂಗ್ಯಾಕೆ ಅಂತ ಕಾವ್ಯಾ ಕೇಳಿದಾಗ ದೊಡ್ಡ ದೊಡ್ಡ ಫಿಲಾಸಫಿಯ ಮಾತುಗಳು ನನ್ನ ಬಾಯಿಯಿಂದ ಬರಲೇ ಇಲ್ಲ. ಅನುಭವ ಸಾಕಷ್ಟು ಕಲಿಸಿಕೊಟ್ಟಿರೋ ಕಾರಣ ಮೊದಲ ಪ್ರೀತಿ ಕಳೆದುಕೊಂಡ ನನ್ನ ತಂಗಿಯನ್ನ ಅಂದು ಹಾಗೇ ಸುಮ್ಮನೇ ಸಂತೈಸಿದ್ದೆ.............

OK.......ಹುಡುಗೀಯರ ಮನಸ್ಸಿಗೆ ಪರಕಾಯ ಪ್ರವೇಶ ಮಾಡೋದು ನಿಜಕ್ಕೂ ಸಖತ್ ಕಷ್ಟದ ಕೆಲ್ಸ ಕಣ್ರೀ......

ವಿ.ಸೂ: ಇಲ್ಲಿ ಪರಕಾಯ ಪ್ರವೇಶ ಮಾಡಿರೋ ಮನಸುಗಳು ಚೆಲ್ಲು ಚೆಲ್ಲು ಸ್ವಭಾವದ ಹುಡುಗಿಯರದ್ದು ಅನ್ನೋದು ನೆನಪಿರಲಿ....!

ಎಚ್ಚರ: ಸೂಕ್ಷ್ಮ ಸ್ವಭಾವದ ಹುಡುಗೀರು ಮೊದಲ ಪ್ರೀತಿ ಕಳೆದು ಕೊಂಡಾಗ ಸಾಯಲೂ ಬಹುದು....ಸತ್ತವರೂ ಇದ್ದಾರೆ.....!


Sunday 18 May 2014


ಮೋದಿ ಗೆಲುವು ಬಿಜೆಪಿ ಧ್ವಜದ ಜೊತೆ ಭಗವಾಧ್ವಜವನ್ನೂ ಬಲಗೊಳಿಸಿದೆಯೇ?

ನರೇಂದ್ರ ಮೋದಿಯೆಂಬ ವ್ಯ(ಶ)ಕ್ತಿಯನ್ನು ಬಿಜೆಪಿ ಚೆನ್ನಾಗಿಯೇ ಪ್ರಮೋಟ್ ಮಾಡಿದೆ. ಕಳೆದ ಸಪ್ಟೆಂಬರ್ ನಿಂದ ಚುನಾವಣೆ ಮುಗಿಯೋ ತನಕ ಬರೋಬ್ಬರಿ 250ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಮೋದಿಯೆಂಬ ಬಿಜೆಪಿಯ ಅಸ್ತ್ರವನ್ನ ಸಖತ್ತಾಗಿಯೇ ಬಳಸಿಕೊಳ್ಳಲಾಗಿದೆ. ವೇದಿಕೆ ಹತ್ತಿದರೆ ಸಾಕು ಮೇರಾ ಬಾಯಿಯೋ ಆರ್ ಬೆಹನೋ ಅನ್ನೋ ಮೋದಿಯ ಮಾತಿಗೆ ಇಡೀ ದೇಶವೇ ತಲೆ ದೂಗಿದೆ ಅನ್ನೋದನ್ನ ಫಲಿತಾಂಶ ಸಾಬೀತು ಪಡಿಸಿದೆ. ನರೇಂದ್ರ ಮೋದಿಯ ಈ ಗೆಲುವಿನಿಂದ ಈ ದೇಶ ಗುಜರಾತ್ ಆಗುತ್ತದೆ, ವೇಗವಾಗಿ ಅಭಿವೃದ್ದಿ ಹೊಂದುತ್ತೆ ಅನ್ನುವ ಕಲ್ಪನೆಗಿಂತಲೂ ಮಿಗಿಲಾಗಿ ಈ ದೇಶದಲ್ಲಿ ಮತ್ತೊಮ್ಮೆ ಸಂಘಪರಿವಾರ ಗಟ್ಟಿಯಾಗಿ ನೆಲೆ ಕಂಡು ಕೊಳ್ಳಲಿದೆ ಅನ್ನೋದನ್ನ ಸ್ಪಷ್ಟವಾಗಿ ಹೇಳಿ ಬಿಡಬಹುದು. ಹಿಂದುತ್ವದ ಪ್ರಯೋಗ ಶಾಲೆ ಅಂತಾನೆ ಕರೆಸಿಕೊಳ್ಳೋ ದಕ್ಷಿಣ ಕನ್ನಡದಲ್ಲಿ ಚುನಾವಣಾ ಮತ ಎಣಿಕೆ ಮುಗಿದ ತಕ್ಷಣ ಕೌಂಟಿಂಗ್ ಸೆಂಟರ್ ನ ಹೊರ ಭಾಗದಲ್ಲಿ ಮೊದಲಾಗಿ ರಾರಾಜಿಸಿದ್ದು ಇದೇ ಸಂಘಪರಿವಾರದ ಭಗವಾಧ್ವಜಗಳು! ಒಂದು ರಾಜಕೀಯ ಪಕ್ಷ ಗೆದ್ದರೆ ಸಾಕು ಅಲ್ಲಿ ರಾಜಕೀಯ ಪಕ್ಷದ ಬಾವುಟಗಳೇ ಕಾಣ ಸಿಗುತ್ತವೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಮೋದಿ ಗೆಲುವಿನ ಖುಷಿಯನ್ನ ಹೆಚ್ಚಾಗಿ ಹಂಚಿಕೊಂಢಿದ್ದು ಇದೇ ಸಂಘಪರಿವಾರದ ಕಾರ್ಯಕರ್ತರು ಅನ್ನೋದನ್ನ ಮತ್ತೆ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕೂಡ ಇದೇ ಭಗವಾಧ್ವಜವನ್ನು ಹಿಡಿದು ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಪಟ್ಟದ್ದು ಕೂಡ ಗಮನಾರ್ಹ. ಅದರಲ್ಲೂ ಬಿಜೆಪಿ ನಮಗೆ ಮುಖ್ಯವಲ್ಲ, ಮೋದಿ ಗೆದ್ರೆ ಸಾಕು ಅಂತ ಸ್ವತಃ ಅದೆಷ್ಟೋ ಸಂಘದ ಹುಡುಗರು ಮಂಗಳೂರಿನ ಬೀದಿಗಳಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರು. ಇನ್ನು ಆರ್ ಎಸ್ ಎಸ್, ಬಜರಂಗದಳ, ವಿಎಚ್ ಪಿಯಂತಹ ಹಿಂದೂ ಸಂಘಟನೆಗಳು ಜಿಲ್ಲೆಯಾದ್ಯಂತ ಬಿಜೆಪಿ ಪರವಾಗಿ ಸಾಕಷ್ಟು ಪ್ರಚಾರ ಕೂಡ ನಡಸಿದ್ದವು. ಹಾಗಂತ ಈ ಪ್ರಚಾರದ ಉದ್ದೇಶ  ಬಿಜೆಪಿ ಗೆಲ್ಲಬೇಕು, ನಳಿನ್ ಕುಮಾರ್ ಜಯಭೇರಿ ಬಾರಿಸಬೇಕು ಅನ್ನೋದಲ್ಲ. ಬದಲಾಗಿ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು ಅನ್ನೋದಾಗಿತ್ತು. ಅದರಂತೆ ಮೋದಿ ಗೆದ್ದಿದ್ದಾರೆ. ಈ ಗೆಲುವಿನ ಖುಷಿಯನ್ನ ಬಿಜೆಪಿ ಬಾವುಟದ ಜೊತೆಗೆ ಸಂಘದ ಭಗವಾಧ್ವಜವೂ ಹಂಚಿಕೊಂಡಿದೆ ಅಂದ್ರೆ ತಪ್ಪಿಲ್ಲ.

ಭಗವಾಧ್ವಜ ಹಾರಿಸಿ ಬಿಜೆಪಿ ಕಚೇರಿಯಲ್ಲಿ ಗೆಲುವನ್ನ ಸಂಭ್ರಮಿಸಿದ ನಳಿನ್ ಕುಮಾರ್ ಕಟೀಲ್


ಅಷ್ಟಕ್ಕೂ ಮೋದಿ ಗೆಲುವಿನಿಂದ ಸಂಘಕ್ಕೇನು ಲಾಭ?

ಹೌದು, ನರೇಂದ್ರ ಮೋದಿ ಪ್ರಧಾನಿಯಾದ್ರೆ ಸಂಘ ಪರಿವಾರಕ್ಕೇನು ಲಾಭ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದ್ರೆ ಮೋದಿ ಬಿಜೆಪಿಯ ಕಾರ್ಯಕರ್ತ ಅಥವಾ ಸದಸ್ಯ ಅನ್ನೋದಕ್ಕಿಂತಲೂ ಹೆಚ್ಚಾಗಿ ಈ ಹಿಂದೆ ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿದ ಒಬ್ಬ ಕಟ್ಟರ್ ಹಿಂದುತ್ವವಾದಿ ಅನ್ನೋದನ್ನ ಒಪ್ಪಲೇ ಬೇಕು. ಇದೇ ಕಾರಣಕ್ಕೆ ನರೇಂದ್ರ ಮೋದಿಗೆ ಹಿಂದುತ್ವದ ಬಗ್ಗೆ, ಹಿಂದೂ ಸಂಸ್ಕೃತಿಯ ಬಗ್ಗೆ ಇತರೆ ರಾಜಕಾರಣಿಗಳಿಗಿಂತ ಸ್ವಲ್ಪ ಹೆಚ್ಚೇ ಗೊತ್ತು. ಹಾಗಾಗಿ ಹಿಂದೂ ಸಂಘಟನೆಗಳ, ಸಂಘಪರಿವಾರದ ಯುವಕರ ಉದ್ದೇಶಗಳನ್ನ ಮೋದಿ ಈಡೇರಿಸುತ್ತಾರೆ ಅನ್ನೋದು ಹಿಂದೂ ಸಂಘಟನೆಗಳಲ್ಲಿರೋ ಕಾರ್ಯಕರ್ತರ ಭಾವನೆ. ಇದೇ ಕಾರಣಕ್ಕೆ ಈ ದೇಶಕ್ಕೆ ಸೂಕ್ತವಾದ ಪ್ರಧಾನಿ ಬೇಕು ಅನ್ನೋದಕ್ಕಿಂತಲೂ ಹೆಚ್ಚಾಗಿ ಹಿಂದುತ್ವದ ರಕ್ಷಣೆಗೆ ಒಬ್ಬ ಕಟ್ಟರ್ ಹಿಂದೂವಾದಿ ಬೇಕಾಗಿದೆ ಅನ್ನೋ ಕಾರಣಕ್ಕೆ ಹಿಂದೂ ಸಂಘಟನೆಗಳು ಬೀದಿಗಿಳಿದು ಮೋದಿ ಪರವಾಗಿ ಕೆಲಸ ಮಾಡಿವೆ. ಹಾಗಾಗಿಯೇ ಮೋದಿ ಗೆದ್ದಾಗ ಬಿಜೆಪಿ ಬಾವುಟದ ಜೊತೆಗೆ ಧೈರ್ಯವಾಗಿ ಭಗವಾದ್ವಜವೂ ರಾರಾಜಿಸಿದೆ.
ಬೊಂದೆಲ್ ನ ಕೌಂಟಿಂಗ್ ಸೆಂಟರ್ ಬಳಿ ಬಿಜೆಪಿ ಗೆಲುವಿನ ನಂತರ ಬಿಜೆಪಿ ಧ್ವಜದೊಂದಿಗೆ ರಾರಾಜಿಸಿದ ಭಗವಾಧ್ವಜ

ನಮಕ್ ಮೋದಿ ಬತ್ತ್ಂಡ ಯಾವು ಮಾರ್ರೆ....!(ನಮಗೆ ಮೋದಿ ಬಂದರೆ ಸಾಕು ಮಾರಾಯಾ..!)

ಈ ದೇಶದಲ್ಲಿ ಮೋದಿಯನ್ನ ಬಿಜೆಪಿ ಪ್ರಮೋಟ್ ಮಾಡಿದ ಕೆಲವೇ ತಿಂಗಳಲ್ಲಿ ಇಂಥದ್ದೊಂದು ಮಾತು ಮಂಗಳೂರಿನಲ್ಲಿ ಕೇಳಿ ಬರ ತೊಡಗಿತ್ತು. ನರೇಂದ್ರ ಮೋದಿ ಆರ್ ಎಸ್ ಎಸ್ ನ ಕಟ್ಟರ್ ಹಿಂಬಾಲಕ ಅನ್ನೋದು ಸಂಘದ ತಳಮಟ್ಟದ ಕಾರ್ಯಕರ್ತರಿಗೆ ತಿಳಿದದ್ದೇ ತಡ ಸಂಘದ ಶಾಖೆಗಳಲ್ಲೂ ಮೋದಿ ಪರವಾದ ಮಾತುಗಳು ಆರಂಭಗೊಂಡವು. ಮೋದಿಯನ್ನ ಗೆಲ್ಲಿಸಿದರೆ ಈ ದೇಶದಲ್ಲಿ ಹಿಂದುತ್ವವನ್ನ ಯಾವ ರೀತಿ ಬೆಳೆಸಬಹುದು ಅನ್ನೋ ಚರ್ಚೆಗಳು ಆರಂಭಗೊಂಡವು. ಈ ಎಲ್ಲಾ ಲೆಕ್ಕಾಚಾರಗಳಿಗೆ ಸಾಥ್ ನೀಡುವಂತೆ ನರೇಂದ್ರ ಮೋದಿಯವರ ಪ್ರತೀ ಭಾಷಣದಲ್ಲೂ ಹಿಂದುತ್ವ, ಹಿಂದೂ ಶಕ್ತಿ ಅನ್ನೋ ಮಾತುಗಳು ಕೂಡ ಜೋರಾಗಿಯೇ ಕೇಳಿ ಬಂದವು. ಹೀಗಾಗಿ ನಮ್ಮ ಯುವಕರಿಗೂ ಹಿಂದುತ್ವದ ರಕ್ಷಣೆಗೆ ಮೋದಿಯೇ ಸೂಕ್ತ ಅನ್ನೋದು ಸ್ಪಷ್ಟವಾಗಿ ಅರ್ಥವಾಗಿತ್ತು. ಹೀಗಾಗಿಯೇ ನರೇಂದ್ರ ಮೋದಿಯ ಗೆಲುವಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ಶ್ರಮಿಸಿದೆ ಅನ್ನೋದಕ್ಕಿಂತ ಜಿಲ್ಲೆಯ ಸಂಘದ ಹುಡುಗರು ಎಷ್ಟರ ಮಟ್ಟಿಗೆ ಶ್ರಮಿಸಿದ್ದಾರೆ ಅನ್ನೋದೆ ಮುಖ್ಯ. ಇನ್ನು ಜಿಲ್ಲೆಯ ಮೂಲೆ ಮೂಲೆಯಲ್ಲಿ ನಡೆದ ಹಿಂದೂ ಸಮಾಜೋತ್ಸವಗಳು ಕೂಡ ನರೇಂದ್ರ ಮೋದಿಯನ್ನ ಪರೋಕ್ಷವಾಗಿ ಪ್ರಧಾನಿ ಮಾಡಿ ಅನ್ನೋದನ್ನೇ ಸಾರಿ ಸಾರಿ ಹೇಳುತ್ತಿದ್ದವು. ಈ ದೇಶದಲ್ಲಿ ಈತನಕ ಯಾವ ಬಿಜೆಪಿ ಅಭ್ಯರ್ಥಿಗೂ ನೀಡದ ಭಾರೀ ಬೆಂಬಲವನ್ನ ಸಂಘದ ಹುಡುಗರು ಮೋದಿಗೆ ನೀಡಿದ್ದರು. ಹೋಂಸ್ಟೇ ಮತ್ತು ಪಬ್ ದಾಳಿಯ ವೇಳೆ ದ.ಕ ಜಿಲ್ಲೆಯ ಬಿಜೆಪಿ ಸಂಸದರು ಹಿಂದೂ ಯುವಕರ ಪರವಾಗಿ ನಿಲ್ಲಲಿಲ್ಲ. ಈ ಬಗ್ಗೆ ಸ್ವತಃ ಅದೆಷ್ಟೋ ಸಂಘಟನೆಯ ಕಾರ್ಯಕರ್ತರು ಅಸಮಾಧಾನ ತೋಡಿಕೊಂಡಿದ್ದಾರೆ. ಹೀಗಿದ್ದರೂ ಈ ಬಾರಿ ಅದೇ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದ್ದಾರೆ. ಆದ್ರೆ ಎಲ್ಲೂ ಕೂಡ ನಳಿನ್ ಗಾಗಲೀ ಬಿಜೆಪಿಗಾಗಲೀ ಮತ ನೀಡಿ ಅನ್ನೋ ಮಾತುಗಳು ಇರಲೇ ಇಲ್ಲ. ಬದಲಾಗಿ ಅಲ್ಲೆಲ್ಲಾ ಗೋಚರಿಸಿದ್ದ ಜಸ್ಟ್ ನರೇಂದ್ರ ಮೋದಿ!

ಮೋದಿ ಗೆಲುವು ಜಿಲ್ಲೆಯಲ್ಲಿ ಶಾಂತಿ ಕದಡಬಹುದೇ?

ಹೇಳಿ ಕೇಳಿ ಈಗ ಎಲ್ಲರ ಬಾಯಲ್ಲೂ ನಮೋ ನಮೋ. ಅದರಲ್ಲೂ ಮೊದಲೇ ಹೇಳಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರಂತೂ ಮೋದಿ ಗೆದ್ದಿದ್ದೇ ನಮ್ಮಿಂದ ಅನ್ನೋ ಅತ್ಯುತ್ಸಾಹದಲ್ಲಿದ್ದಾರೆ. ಆದ್ರೆ ಇದೇ ಉತ್ಸಾಹ ಮುಂದಿನ ದಿನಗಳಲ್ಲಿ ಜಿಲ್ಲೆಯ ಮಟ್ಟಿಗೆ ಬಹುದೊಡ್ಡ ಏಟು ಕೊಟ್ಟರೂ ಅಚ್ಚರಿಯಿಲ್ಲ. ಹಾಗಂತ ಇಲ್ಲಿ ಸಂಘದ ಹುಡುಗರೇ ಆಶಾಂತಿಯನ್ನ ಸೃಷ್ಟಿಸುತ್ತಾರೆ ಅಂತಾನೂ ಹೇಳೋಕಾಗೋಲ್ಲ. ಬದಲಾಗಿ ಸಂಘಟನೆಯ ಯುವಕರನ್ನ ಕೆಣಕಲು ಕಿಡಿಗೇಡಿಗಳು ಕೂಡ ಜಿಲ್ಲೆಯ ಶಾಂತಿಯನ್ನ ಕದಡಬಹುದು. ಇನ್ನು ಕೆಲ ಬಿಸಿ ರಕ್ತದ ಹಿಂದೂ ಸಂಘಟನೆಯ ಯುವಕರು ಕೂಡ ಮೋದಿ ಬೆನ್ನಿಗಿದ್ದಾರೆ ಎಂಬ ಹುಂಬ ಧೈರ್ಯದಲ್ಲಿ ಸುಖಾಸುಮ್ಮನೆ ತಗಾದೆ ತೆಗೆದರೂ ಅಚ್ಚರಿಯಿಲ್ಲ. ಇದೇ ಕಾರಣಕ್ಕೆ ಬಿಜೆಪಿಯ ಜೊತೆಗೆ ಸಂಘಪರಿವಾರವೂ ಇನ್ನಷ್ಟು ಗಟ್ಟಿಗೊಂಡಿದೆ ಅನ್ನೋದರಲ್ಲಿ ಯಾವುದೇ ತಪ್ಪಿಲ್ಲ ಬಿಡಿ. ಈ ಮಧ್ಯೆ ನರೇಂದ್ರ ಮೋದಿಗೂ ಕೂಡ ತನ್ನ ಆಡಳಿತದ ಮಧ್ಯೆ ಸಂಘಪರಿವಾರವನ್ನ ಎದುರು ಹಾಕಿಕೊಳ್ಳೋದಕ್ಕೆ ಆಗೋಲ್ಲ. ಇದಕ್ಕೆ ಕಾರಣ ಆರ್ ಎಸ್ ಎಸ್ ಮೋದಿಯ ಮಾತೃ ಸಂಘಟನೆ. ಅಷ್ಟೇ ಅಲ್ಲದೇ ಈ ಮೊದಲೇ ಹೇಳಿದಂತೆ ನರೇಂದ್ರ ಮೋದಿಯ ಗೆಲುವಿನಲ್ಲಿ ಹೆಚ್ಚಿನ ಪಾತ್ರವನ್ನ ಸಂಘದ ಹುಡುಗರು ವಹಿಸಿಕೊಂಡಿದ್ದಾರೆ. ಹೀಗಿರೋವಾಗ ಹಿಂದೂಗಳಿಗಾಗಿ ನರೇಂದ್ರ ಮೋದಿ ಕೊಟ್ಟಿರೋ ಆಶ್ವಾಸನೆಗಳನ್ನ ಈಡೇರಿಸಲೇ ಬೇಕಿದೆ. ಅದರಲ್ಲೂ ಮುಖ್ಯವಾಗಿ ರಾಮ ಮಂದಿರ ಕಟ್ಟಿಯೇ ಸಿದ್ದ ಅಂದಿದ್ದ ಮೋದಿಗೆ ಇದು ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ, ಅಸಲಿಗೆ ರಾಮ ಮಂದಿರ ವಿವಾದ ನ್ಯಾಯಾಲಯದ ಮೆಟ್ಟಿಲೇರಿರೋದ್ರಿಂದ ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ ನರೇಂದ್ರ ಮೋದಿಯಾಗಲೀ ಕೈ ಯಾಡಿಸೋದು ಸಾಧ್ಯವಿಲ್ಲ. ಹೀಗಿದ್ದರೂ ಓಟ್ ಬ್ಯಾಂಕ್ ಗಾಗಿ ಮತ್ತದೇ ವಾಜಪೇಯಿ ಶೈಲಿಯನ್ನ ಯಥಾವತ್ ಅನುಕರಣೆ ಮಾಡಿರೋ ನರೇಂದ್ರ ಮೋದಿಯವರು ಈ ಭರವಸೆಯಲ್ಲಿ ಎಡವೋದು ಖಂಡಿತಾ. ಹೀಗಾಗಿ ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯ ನಡೆ ಸಂಘದ ಹುಡುಗರ ಅಸಮಾಧಾನಕ್ಕೆ ಕಾರಣವಾದರೂ ಆಚ್ಚರಿಯಿಲ್ಲ. ಯಾಕೆಂದರೆ ಆಡಳಿತ ವ್ಯವಸ್ಥೆಯಲ್ಲಿ ಧರ್ಮವನ್ನ ತಂದರೆ ಈ ದೇಶದ ಕಾನೂನು ಸುವ್ಯವಸ್ಥೆಯೇ ಬುಡಮೇಲಾಗಬಹುದು. ಹಾಗಾಗಿ ಎಲ್ಲವನ್ನೂ ಬಲ್ಲವರಾಗಿರೋ ಮೋದಿ ಈ ವಿಚಾರದಲ್ಲಿ ಸೂಕ್ಷ್ಮವಾಗಿಯೇ ನಡೆದುಕೊಳ್ಳುತ್ತಾರೆ. ಆದರೆ ಇದು ಸಂಘದ ಹುಡುಗರಲ್ಲಿ ಮೋದಿ ಬಗ್ಗೆ ಆಕ್ರೋಶ ಹೆಚ್ಚಿಸಬಹುದು. ಹೀಗಾಗಿ ದೇಶದಲ್ಲಿ ದೊಡ್ಡ ಮಟ್ಟದ ಅಲೆ ಸೃಷ್ಟಿಸಿ ಮೋದಿ ಗೆದ್ದಿದ್ದರೂ ಎಲ್ಲರನ್ನೂ ಸಂತೃಪ್ತ ಪಡಿಸಿ ಆಡಳಿತ ನಡೆಸೋದು ನರೇಂದ್ರ ಮೋದಿಯವರಿಗೆ ಅಷ್ಟು ಸುಲಭದ ಮಾತಂತು ಅಲ್ಲವೇ ಅಲ್ಲ.

ಧ್ವನಿ......


Thursday 24 October 2013


ಸೌಜನ್ಯ ಪ್ರಕರಣದಲ್ಲಿ ಮಾಧ್ಯಮಗಳ ನಡೆ ಸ್ಪಷ್ಟಗೊಳ್ಳಬೇಕಿದೆ...!

ಸೌಜನ್ಯ


ಸೌಜನ್ಯ.....ಈಗ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಡೀ ಕನರ್ಾಟಕದಲ್ಲಿ ಈ ಹುಡುಗಿ ಮನೆ ಮಾತಾಗಿ ಹೋಗಿದ್ದಾಳೆ. ಸತ್ತ ನಂತರ ಅದರಲ್ಲೂ ಮಣ್ಣು ಸೇರಿ ಒಂದು ವರ್ಷವಾದ ನಂತರ ಈಕೆ ಈ ಮಟ್ಟಿನ ಕ್ರಾಂತಿಗೆ ಕಾರಣಕತರ್ೆಯಾಗುತ್ತಾಳೆಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಆದರೆ ಇದೀಗ ಎಲ್ಲವೂ ಅಂದುಕೊಂಡದ್ದನ್ನು ಮೀರಿ ನಡೆಯುತ್ತಿದೆ. ಒಂದು ವಾರದ ಹಿಂದೆ ಅಂದರೆ ಅಕ್ಟೋಬರ್ 11, 2013ರ ಶುಕ್ರವಾರ ಸಂಜೆ 4.45ರವರೆಗೆ ಸೌಜನ್ಯ ಬಗ್ಗೆ ಯೋಚಿಸುವುದು ಬಿಡಿ, ರಾಜ್ಯದ ಮುಕ್ಕಾಲು ಪಾಲು ಜನತೆಗೆ ಆಕೆ ಯಾರೆಂದೇ ಗೊತ್ತಿರಲಿಲ್ಲ. ಆದರೆ ನಂತರ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಆಕೆಯ ಸಾವಿನ ಹಿಂದೆ ತಳುಕು ಹಾಕಿಕೊಂಡ ಘಟಾನುಘಟಿಗಳ ಹೆಸರು ಕೇಳಿ ಇಡೀ ರಾಜ್ಯವೇ ನಡುಗಿ ಹೋಯಿತು. ಯಾರಪ್ಪ ಈ ಹುಡುಗಿ ಆಂತ ಎಲ್ಲರೂ ವಿಚಾರಿಸ ತೊಡಗಿದರು. ಒಂದು ವರ್ಷದ ಹಿಂದೆ ನಡೆದ ಪ್ರಕರಣ ಈಗ್ಯಾಕೆ ಸದ್ದು ಮಾಡುತ್ತಿದೆ ಅಂತ ಅಶ್ಚರ್ಯಪಟ್ಟರು. ಈ ಮೂಲಕ ಸೌಜನ್ಯ ಮತ್ತೆ ಬಂದಿದ್ದಾಳೆ....ತನ್ನ ಸಾವಿನ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲು ಯತ್ನಿಸುತ್ತಿದ್ದಾಳೆ...........................!

ಆಕೆಯ ಸಾವಿಗೆ ನ್ಯಾಯ ಸಿಗಬೇಕೆಂದು ಒಂದಷ್ಟು ಸಂಘಟನೆಗಳು ಬೀದಿಗಿಳಿದಿವೆ. ರಾಜ್ಯದ ಒಂದೇ ಒಂದು ಖಾಸಗಿ ವಾಹಿನಿ ಸೌಜನ್ಯ ಪರವಾಗಿ ಧ್ವನಿಯೆತ್ತಿದೆ. (ಈ ವಿಚಾರದಲ್ಲಿ ಉಳಿದೆಲ್ಲಾ ಮಾಧ್ಯಮಗಳು ಸತ್ತು ಮಲಗಿರಬೇಕು). ಈ ಒಂದು ಪ್ರಕರಣ ಸಾಕು, ರಾಜ್ಯದ ಸುದ್ದಿ ವಾಹಿನಿಗಳ ನಿಷ್ಪಕ್ಷಪಾತ ನಡೆಯನ್ನು ಜಗಜ್ಜಾಹಿರುಗೊಳಿಸಲು.....!
ವಿಶೇಷ ವರದಿಗಾರನೊಬ್ಬನನ್ನು ಕಳಿಸಿ ಇಲ್ಲಸಲ್ಲದ ವರದಿ ಬೇರೆ ಮಾಡಿದೆ...!

ಯಾರದ್ದೋ ಮನೆಯಲ್ಲಿ ಗಂಡ-ಹೆಂಡತಿ ಜಗಳವಾಡಿದರೆ ಮರುದಿನವೇ ಸ್ಟುಡಿಯೋಗೆ ತಂದು ಕೂರಿಸಿ ಜಗಳವನ್ನು ಇನ್ನಷ್ಟು ದೊಡ್ಡದು ಮಾಡಿ ಟಿಆರ್ಪಿ ಹೆಚ್ಚಿಸಿಕೊಳ್ಳುವ ಮಾಧ್ಯಮಗಳಿಗೆ ಸೌಜನ್ಯ ಪ್ರಕರಣ ಕಣ್ಣಿಗೆ ಬಿದ್ದಿಲ್ಲವೇ? ಅಥವಾ ಘಟಾನುಘಟಿಗಳಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಿದೆಯೇ? ಬಹುಶಃ ದುರಂತ ಅಂದರೆ ಇದೇ ಇರಬೇಕು. ಅದರಲ್ಲೂ ಸೌಜನ್ಯ ಪರವಾಗಿ ಒಂದೇ ಒಂದು ಸುದ್ದಿಪ್ರಸಾರ ಮಾಡದ ಈ ವಾಹಿನಿಗಳು ಅದ್ಯಾರೋ ಈ ಬಗ್ಗೆ `ನಾವು ತಪ್ಪೇ ಮಾಡಿಲ್ಲ' ಅಂದ ತಕ್ಷಣ ಲೈವ್ ಕೊಟ್ಟು ಘಂಟೆಘಟ್ಟಲೇ ಕಿರುಚಾಡಿದ್ದು ಯಾಕೆ ಎನ್ನುವುದೇ ತಿಳಿಯುತ್ತಿಲ್ಲ. ಈ ಪ್ರಕರಣದಲ್ಲಿ ಆರೋಪ ಕೇಳಿ ಬರುತ್ತಿರುವ ವ್ಯಕ್ತಿಗಳ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ ನಿಜ. ಇಂದಿಗೂ ಅದೆಷ್ಟೋ ಮನೆಯ ದೇವರ ಫೋಟೋ ಇಡುವ ಜಾಗದಲ್ಲಿ `ಅವರ' ಫೋಟೋ ಇಟ್ಟು ಪೂಜಿಸುವವರಿದ್ದಾರೆ. ಅಷ್ಟೇ ಯಾಕೆ? ಸತ್ತು ಮಣ್ಣು ಸೇರಿದ ಸೌಜನ್ಯಳ ಮನೆಯಲ್ಲೂ ಆ ವ್ಯಕ್ತಿಯನ್ನು ಆರಾಧಿಸುತ್ತಿದ್ದರು. ಹೀಗಿರುವಾಗ ಏಕಾಏಕಿ ಬಂದು ಅಂಥವರ ಮೇಲೆ ಆರೋಪ ಹೊರಿಸುವ ಹಕೀಕತ್ತು ಯಾರಿಗೂ ಇರೋದಿಲ್ಲ ಎನ್ನುವುದನ್ನು ಪೇಯ್ಡ್ ಮೀಡಿಯಾಗಲು ಅರಿತುಕೊಳ್ಳಲಿ. ಸೌಜನ್ಯಳ ಕುಟುಂಬಿಕರು ಮಾಡುವ ಆರೋಪಗಳನ್ನು ಇಲ್ಲವೇ ಆರೋಪಿಗಳು ಎನ್ನುವ ವ್ಯಕ್ತಿಗಳನ್ನು ನಿಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಲು ಸಾದ್ಯವಿಲ್ಲ ಅಂದುಕೊಳ್ಳೋಣ. ಆದರೆ ಆ ಮನೆಯವರ ನೈಜ ಯಾತನೆಗೆ ಸ್ಪಂದಿಸುವ ಮನಸ್ಸು ಕೂಡ ನಿಮ್ಮಲ್ಲಿಲ್ಲವೇ? ಈ ಮಧ್ಯೆ ನೇರ, ದಿಟ್ಟ, ನಿರಂತರ ಎನ್ನುವ ವಾಹಿನಿಯೊಂದು ಧರ್ಮಸ್ಥಳಕ್ಕೆ ವಿಶೇಷ ವರದಿಗಾರನೊಬ್ಬನನ್ನು ಕಳಿಸಿ ಇಲ್ಲಸಲ್ಲದ ವರದಿ ಬೇರೆ ಮಾಡಿದೆ. ಈ ವರದಿ ಗಮನಿಸಿದರೆ ಈ ವಾಹಿನಿಯನ್ನು ಧರ್ಮಸ್ಥಳದ ಘಟಾನುಘಟಿಗಳು ಕೊಂಡುಕೊಂಡಿದ್ದಾರೆಯೇ ಎಂಬ ಅನುಮಾನ ಕೂಡ ಕಾಡುತ್ತದೆ. ಉಪಕಾರ ಮಾಡಲು ಸಾದ್ಯವಾಗದಿದ್ದರೂ ಒಂಚೂರು ಅಪಕಾರವಾದರೂ ಮಾಡಿ ಬಿಡೋಣ ಅನ್ನೋದು ಇವರ ಉದ್ದೇಶವಿರಬೇಕು, ಪ್ರಸ್ತುತ ಕೇಳಿ ಬರುತ್ತಿರುವ ಸುದ್ದಿಯ ವಿಚಾರದಲ್ಲಿ ಎಲ್ಲಾ ವಾಹಿನಿಗಳ ವಾದ ಒಂದೇ `ಸೌಜನ್ಯ ಮನೆಯವರದ್ದು ಕೇವಲ ಆರೋಪ ಮಾತ್ರ' ಎನ್ನುವುದು. ಹಾಗಾದರೆ ನೊಂದವರ ಆರೋಪಗಳನ್ನು ಇಟ್ಟುಕೊಂಡು ಈ ವಾಹಿನಿಗಳು ಸುದ್ದಿ ಪ್ರಕಟಿಸಲೇ ಇಲ್ಲವೇ? ಸ್ಟುಡಿಯೋದಲ್ಲಿ ಕೂರಿಸಿ ಇನ್ನೊಬ್ಬರ ಮಾನ ಹಾನಿ ಮಾಡಿದ ಉದಾಹರಣೆಗಳೇ ಇಲ್ಲವೇ? ಖಂಡಿತಾ ಇದೆ. ಆದರೆ ಈ ವಿಚಾರದಲ್ಲಿ ಮಾತ್ರ ಇವರುಗಳಿಗೆ ಸೌಜನ್ಯ ಮನೆಯವರ ಆರೋಪಗಳನ್ನು ಕೇಳುವಷ್ಟು ತಾಳ್ಮೆಯಿಲ್ಲ. ಇದ್ದರೂ ಒತ್ತಡ ಎಂಬ ಅಸ್ತ್ರ ಚೆನ್ನಾಗಿಯೇ ಕೆಲಸ ಮಾಡುತ್ತಿದೆ ಅನ್ನಬಹುದು. ಸುದ್ದಿ ಮಾಧ್ಯಮಗಳು ನಿಷ್ಪಕ್ಷಪಾತವಾಗಿರಬೇಕು. ಇದೇ ಕಾರಣಕ್ಕೆ ಚಾನೆಲ್ಗಳನ್ನು ಸ್ಥಾಪಿಸುವ ಅದರ ಹೆಸರಿನ ಅಡಿಗೆ ಒಂದಷ್ಟು  ಘೋಷ ವಾಕ್ಯಗಳನ್ನು ಕೂಡ ಇಟ್ಟುಕೊಂಡು ತಮ್ಮ ಸ್ವಾಮಿನಿಷ್ಟೆ ಪ್ರದಶರ್ಿಸುತ್ತಾರೆ. ಆದರೆ ಈ ರೀತಿಯ ವಿಚಾರಗಳಲ್ಲಿ ಇವರುಗಳ ಘೋಷವಾಕ್ಯಗಳು ಗಾಳಿಯಲ್ಲಿ ತೂರಿ ಹೋಗಿದ್ದೇ ಹೆಚ್ಚು. ಅಸಲಿಗೆ ಸೌಜನ್ಯ ಪ್ರಕರಣದಲ್ಲಿ ಸುದ್ದಿ ವಾಹಿನಿಗಳಷ್ಟೇ ಸುದ್ದಿ ಪತ್ರಿಕೆಗಳು ಕೂಡ ಸಮಾನ ತಪ್ಪಿತಸ್ಥರು. ಅದರಲ್ಲೂ ಮಂಗಳೂರಿನಲ್ಲಿ ಅತೀ ಹೆಚ್ಚು ಸಕ್ಯರ್ೂಲೇಶನ್ ಹೊಂದಿರುವ ಪತ್ರಿಕೆಯೊಂದು ಸೌಜನ್ಯ ಮನೆಯವರು ನಡೆಸಿದ ಪತ್ರಿಕಾಗೋಷ್ಠಿಯನ್ನೂ ಪ್ರಕಟಿಸದೆ ಅದ್ಯಾರದ್ದೋ ಕೈಯಲ್ಲಿ `ಭೇಷ್' ಅನಿಸಿಕೊಂಡಿದೆಯಂತೆ...! ಇದೇ ಪರಿಸ್ಥಿತಿ ರಾಜ್ಯದ ಬಹುತೇಕ ಪತ್ರಿಕೆಗಳದ್ದು.

ಇನ್ನು ಈ ಎಲ್ಲಾ ಆರೋಪಗಳನ್ನು ಯಥಾವಥ್ ಸುದ್ದಿ ಮಾಡಿದ ಟಿವಿ9 ವಾಹಿನಿಗೆ ಕೋಟರ್್ನಿಂದ ತಡೆಯಾಜ್ಷೆ ಬೇರೆ ತಂದಿದ್ದಾರೆ. ಈ ಮೂಲಕ ನಾವು ಕೂಡ ನಿತ್ಯಾನಂದ ಸ್ವಾಮಿಯ ಪಾಟರ್ಿ ಅನ್ನೋದನ್ನು ನಿರೂಪಿಸಿದ್ದಾರೆ(ಕಾಮಿ ಸ್ವಾಮಿ ನಿತ್ಯಾನಂದ ಕೂಡ ತನ್ನ ವಿರುದ್ದ ವರದಿ ಮಾಡದಂತೆ ತಡೆಯಾಜ್ಷೆ ತಂದಿದ್ದ). ಇನ್ನು ಟಿವಿ9 ಈ ಬಗ್ಗೆ ವರದಿ ಮಾಡಿದರೆ ಜಿಲ್ಲೆಯ ಮೂಲೆಮೂಲೆಯಲ್ಲಿ ಕರೆಂಟ್ ಕಟ್. ಬಹುಶಃ ದುರಂತ ಅಂದ್ರೆ ಇದೇ ಇರಬೇಕು. ಈಗೀಗ ಟಿವಿ ನೋಡದಂತೆ ಕರೆಂಟ್ ಕಟ್, ಕೇಬಲ್ ಕಟ್ ಎಂಬ ಕಸರತ್ತಿನ ಕೆಲಸಗಳು ಕೂಡ ಎಗ್ಗಿಲ್ಲದೇ ನಡೆಯುತ್ತಿದೆ. ಜನಾರ್ದನ ರೆಡ್ಡಿಯ ವಿಚಾರದಲ್ಲಿ ಹೀಗಾಗಿದ್ದನ್ನು ನೋಡಿದ್ದೆ. ಆದರೆ ನಮ್ಮ ಸೌಜನ್ಯ ವಿಚಾರದಲ್ಲೂ ಹೀಗಾಗ್ತಿರೋದು.......ಒಟ್ಟಿನಲ್ಲಿ ಎಲ್ಲರೂ ಅವರಿಗೆ `ಅಡ್ಡ' ಬೀಳುವವರೇ...! ಈ ಮಧ್ಯೆ ನಾವು-ನೀವು ಏನ್ ತಾನೇ ಮಾಡೋದಕ್ಕೆ ಸಾಧ್ಯ...? ಏನೇ ಆಗಲಿ...ಟಿವಿ9 ನವರ ಕೆಲಸಕ್ಕೆ ಶಹಭಾಸ್ ಗಿರಿ ಹೇಳಲೇ ಬೇಕು..ಬಿಡಿ....

ಅಪ್ಪಟ ಹಳ್ಳಿ ಸೊಗಡಿನ ಕುಟುಂಬ!
ಸೌಜನ್ಯ ಉಡುತ್ತಿದ್ದ ಬಟ್ಟೆ, ತೊಡುತ್ತಿದ್ದ ಬಲೆಗಳು...ಆಟವಾಡುತ್ತಿದ್ದ ಗೊಂಬೆ

ಪ್ರಕರಣ ಗಂಭೀರ ಸ್ವರೂಪಕ್ಕೆ ಹೋದ ನಂತರ ಅಂದರೆ ಮೊನ್ನೆ ಮೊನ್ನೆ ಆಕೆಯ ಮನೆಗೆ ಹೋಗಿದ್ದೆ. ಹಳ್ಳಿಗಾಡಿನ ಸೊಗಡನ್ನು ಉಳಿಸಿಕೊಂಡು ಬಾಳುತ್ತಿರುವ ಅಪ್ಪಟ ಗೌಡ ಮನೆತನ ಅವರದ್ದು. ಇಂದಿಗೂ ಅವರ ಮಗಳ ಪ್ರತಿಯೊಂದು ವಸ್ತುವನ್ನೂ ಜೋಪಾನವಾಗಿಟ್ಟಿದ್ದಾರೆ. ಅವಳು ಉಡುತ್ತಿದ್ದ ಬಟ್ಟೆ, ತೊಡುತ್ತಿದ್ದ ಬಲೆಗಳು...ಆಟವಾಡುತ್ತಿದ್ದ ಗೊಂಬೆಗಳು....ಹೀಗೆ ಎಲ್ಲವೂ ಸೌಜನ್ಯಳನ್ನು ಮತ್ತೆ ನೆನಪಿಸುವ ಹಾಗಿದೆ. ಈ ಮಧ್ಯೆ  ಮಗಳು ಮನೆಯವರಿಗೆ ಕೊನೆಯದಾಗಿ ಕೊಟ್ಟು ಹೋದ ಕಣ್ಣೀರು ಕೂಡ ಒಂಚೂರು ಬತ್ತಿಲ್ಲ....! ಬಿಟ್ಟು ಹೋದ ಮನೆ ಮಗಳ ಬಗ್ಗೆ ಮನೆಯ ಪ್ರತಿಯೊಬ್ಬರು ಹೇಳುವುದು ಒಂದೇ......ಚಿನ್ನದಂಥ ಹುಡುಗಿ ಕಣ್ರೀ ಆಕೆ. ಹೌದು, ಮನೆಯ ಪ್ರತಿಯೊಬ್ಬರೂ ಆಕೆಯ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗ ಒಂದು ಕ್ಷಣ ಕಣ್ಣಾಲಿಗಳು ಒದ್ದೆಯಾದವು. ಮಾಡದ ತಪ್ಪಿಗೆ ಬಲಿಯಾದ ಆ ಹೆಣ್ಣುಮಗಳ ಸಾವಿನಲ್ಲಿ ಕೇಕೆ ಹಾಕಿದ ವಿಧಿಯಾಟದ ಬಗ್ಗೆಯೇ ಇನ್ನಿಲ್ಲದ ಆಕ್ರೋಶ ವ್ಯಕ್ತವಾಯಿತು. ಆದರೆ ಆ ಮನೆಯವರ ದುಃಖದ ಮಧ್ಯೆ ನನ್ನದು ಕ್ಷಣಿಕ ಎಂದು ಸುಮ್ಮನಾದೆ.
ಅಪ್ಪಟ ಹಳ್ಳಿ ಸೊಗಡಿನ ಸೌಜನ್ಯ ಕುಟುಂಬ

ಸರಿ ಸುಮಾರು ಒಂದು ವರ್ಷದ ಹಿಂದೆ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ನಡೆಸಿದಾಗ ಹತ್ತರಲ್ಲಿ ಹನ್ನೊಂದು ಎಂಬಂತೆ ಒಂದೆರೆಡು ದಿನ ಸದ್ದು ಮಾಡಿ ಮಾನಸಿಕ ಅಸ್ವಸ್ಥನೊಬ್ಬ ಜೈಲು ಸೇರುವುದರೊಂದಿಗೆ ಪ್ರಕರಣ ಮುಚ್ಚಿ ಹೋಗಿತ್ತು.

ಈ ಮಧ್ಯೆ ಒಂದೆರೆಡು ಸಂಘಟನೆಗಳ ಹೋರಾಟಕ್ಕೆ ಮಣಿದು ಸಕರ್ಾರ ಯಾವುದಕ್ಕೂ ಇರಲಿ ಅಂತ ಸಿಐಡಿಗೂ ಒಪ್ಪಿಸಿತ್ತು. ಆದರೆ ನಮ್ಮದೇ ರಾಜ್ಯದ ಸಿಐಡಿಯಿಂದ ಯಾವ ಮಟ್ಟದ ನ್ಯಾಯ ನಿರೀಕ್ಷಿಸಲು ಸಾಧ್ಯ? ಒಟ್ಟಿನಲ್ಲಿ ಸೌಜನ್ಯ ಸಾವಿನ ಹಿಂದೆಯೇ ಪ್ರಕರಣ ಮುಚ್ಚಿ ಹೋದಾಗ, ಧರ್ಮಸ್ಥಳ-ಉಜಿರೆಯಲ್ಲಿ ನೆಲಕ್ಕುರುಳಿದ ಅಷ್ಟೋ ಹೆಣಗಳಲ್ಲಿ ಈಕೆಯದ್ದು ಕೂಡ ಒಂದು ಅಂತ ಒಂದಷ್ಟು ಪ್ರಜ್ಞಾವಂತರು ಸುಮ್ಮನಾಗಿದ್ದರು. ಆದರೆ ಇದೀಗ ಮತ್ತೆ ಸೌಜನ್ಯ ಪ್ರಕರಣ ಸದ್ದು ಮಾಡುತ್ತಿದೆ. ಅದರಲ್ಲೂ ಧರ್ಮಸ್ಥಳದ ಘಟಾನುಘಟಿಗಳ ಬಗ್ಗೆಯೇ ಆರೋಪಗಳು ಕೇಳಿ ಬಂದಿದೆ. ಇದಕ್ಕೆಲ್ಲಾ ಸ್ಪಷ್ಟ ಉತ್ತರ ಅವರಿಂದ ಬಯಸಲು ಸಾದ್ಯವೇ?


Tuesday 6 August 2013


ಗೋಸಾಗಾಟ ಮತ್ತೆ ಗಲಭೆಗೆ ಹೇತುವಾಗಬೇಕೇ?
ಹಿಂದೂ-ಮುಸ್ಲಿಮರ ಮನಸ್ಥಿತಿ ಬದಲಾಗಬೇಕಿದೆ!


ಇಡೀ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಕೋಮು ಸಂಘರ್ಷಕ್ಕೆ ಕುಖ್ಯಾತಿ ಪಡೆದ ಪ್ರದೇಶ. ಇಲ್ಲಿ ನೀರಿಗಾಗಿ, ಭಾಷೆಗಾಗಿ ಹೋರಾಟ ಮಾಡುವವರಿಗಿಂತ ಧರ್ಮದ ವಿಚಾರದಲ್ಲಿ ಬೀದಿಗಿಳಿಯುವ ಬಹುದೊಡ್ಡ ವರ್ಗವೇ ಇದೆ. ಇಲ್ಲಿನ ಜನರು ತಮ್ಮ ತಮ್ಮ ಧರ್ಮಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಕೊಡುವ ಕಾರಣ ಧರ್ಮ ನಿಂದನೆಯಂತಹ ವಿಚಾರಗಳು ಕೋಮು ಸಂಘರ್ಷಗಳಾಗಿ ಬದಲಾಗುತ್ತಿವೆ. ಈ ಹಿಂದೆ ಇಡೀ ಜಿಲ್ಲೆಯನ್ನೇ ಹೊತ್ತಿ ಉರಿಸುವ ಮೂಲಕ ಇತಿಹಾಸದ ಪುಟ ಸೇರಿರುವ ಪ್ರತೀ ಗಲಭೆಯಲ್ಲೂ ಇಲ್ಲಿನ ಜನರ ಜಾತಿ ಪ್ರೀತಿಯ ಛಾಯೆ ಎದ್ದು ಕಾಣುತ್ತದೆ. ಅದರಲ್ಲೂ ಮುಖ್ಯವಾಗಿ ಹಿಂದೂಗಳ ಪಾಲಿಗೆ ಪವಿತ್ರವೆನಿಸಿರುವ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವುದೇ ಜಿಲ್ಲೆಯಲ್ಲಿ ನಡೆಯುವ ಕೋಮು ಸಂಘರ್ಷಗಳಿಗೆ ಹೇತುವಾಗುತ್ತಿದೆ ಎನ್ನುವುದು ದುರಂತ.
ಅದರಲ್ಲೋ ಇತ್ತೀಚಿನ ದಿನಗಳಲ್ಲಿ ಗೋವುಗಳ ಅಕ್ರಮ ಸಾಗಾಟ ಮಿತಿಮೀರಿದೆ. ತಲವಾರು ತೋರಿಸಿ ದನ ಕಳವು ಮಾಡುವ ಹಂತಕ್ಕೆ ದುಷ್ಕಮರ್ಿಗಳು ಇಳಿದಿರುವುದು ನಿಜಕ್ಕೂ ದುರಂತ. ಮುಂದೊಂದು ದಿನ ಇಂತದ್ದೇ ಘಟನೆ ಮತ್ತೊಂದು ಗಲಭೆಗೆ ಮುನ್ನುಡಿ ಬರೆದರೆ ಆಶ್ಚರ್ಯವಿಲ್ಲ ಬಿಡಿ.

ಹಿಂದೂಗಳ ಪಾಲಿಗೆ ಅತೀ ಪವಿತ್ರವೆನಿಸಿರುವ ಗೋವುಗಳ ರಕ್ಷಣೆಗೆ ಹಿಂದೂ ಸಂಘಟನೆಗಳು ಟೊಂಕಕಟ್ಟಿ ನಿಲ್ಲುತ್ತವೆ. ಧಾಮರ್ಿಕ ನಂಬಿಕೆಯ ಪ್ರತೀಕವೆನಿಸಿದ ಗೋವುಗಳ ರಕ್ಷಣೆಗೆ ನಿಲ್ಲುವುದು ಸಹಜವೇ ಅನ್ನೋಣ. ಆದರೆ ಮುಂದಾಗುವ ಅನಾಹುತಗಳು ಮಾತ್ರ ಅಸಹಜ ಎನ್ನುವುದು ಅರಿಯಬೇಕಾದ ವಿಚಾರ. ಒಂದು ಧರ್ಮಕ್ಕೆ ಪವಿತ್ರವೆನಿಸಿರುವ ಗೋವು ಇನ್ನೊಂದು ಧರ್ಮದ ಕೆಲವರಿಗೆ ಆಹಾರ ಪದ್ದತಿ ಎನಿಸಿಕೊಂಡಿದೆ. ಪರ-ವಿರೋಧಗಳ ನಡುವೆಯೂ ತಿಂಗಳಿಗೆ ಹೆಚ್ಚೆಂದರೂ ಆರೇಳು ಗೋಸಾಗಾಟದ ವಿದ್ಯಮಾನಗಳು ಬೆಳಕಿಗೆ ಬರುತ್ತಲೇ ಇವೆ. ಇಷ್ಟೆಲ್ಲಾ ಆದರೂ ನಮ್ಮ ಪೊಲೀಸ್ ಇಲಾಖೆ ಮಾತ್ರ ಬೆಚ್ಚಗೆ ಕೂತು ಚೆಂದ ನೋಡುತ್ತಿರುವುದು ವಿಪಯರ್ಾಸ. ಬೆಂಕಿ ಬಿದ್ದಾಗ ಬಾವಿ ತೋಡುವ ಬದಲು ಇದರ ವಿರುದ್ದ ಮೊದಲಾಗಿಯೇ ಕ್ರಮ ಕೈಗೊಂಡು ಗಲಭೆಗೆ ಆಸ್ಪದ ನೀಡುವುದನ್ನು ತಪ್ಪಿಸಬಹುದು ಎಂಬ ಮಾತು ಶಾಂತಿಪ್ರಿಯರದ್ದು.
ಗೋವು ಹಿಂದೂಗಳ ಧಾಮರ್ಿಕ ನಂಬಿಕೆ, ಮುಸ್ಲಿಮರ ಆಹಾರ ವಸ್ತು ಎನ್ನುವುದಕ್ಕಿಂತಲೂ ಹೆಚ್ಚಾಗಿ ಕಳೆದ ಕೆಲ ದಿನಗಳಿಂದ ಕೋಮು ದಳ್ಳುರಿಗೆ ಕಾರಣವಾಗಬಹುದಾದ ಒಂದು ವಿಚಾರವಾಗಿ ಹೋಗಿದೆ. ಸಾಗಾಟಗಾರರ ಮತ್ತು ಹಿಂದೂ ಸಂಘಟನೆಗಳ ಮಧ್ಯೆ ನಡೆಯುವ ಸಣ್ಣಪುಟ್ಟ ಗಲಾಟೆಗಳಿಗೆ ಲೆಕ್ಕವಿಲ್ಲದಂತಾಗಿದೆ. ಕೆಲವೊಂದು ಕಡೆಗಳಲ್ಲಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಪ್ರಕರಣದ ಫೈಲ್ ಕ್ಲೋಸ್ ಆಗುವಲ್ಲಿ ಮುಕ್ತಾಯವಾದರೆ ಇನ್ನು ಕೆಲವು ಕಡೆ ಎರಡು ಧರ್ಮಗಳ ಸಂಘರ್ಷಕ್ಕೆ ದಾರಿ ಮಾಡಿ ಕೊಡುತ್ತಿದೆ. ಇಷ್ಟೆಲ್ಲಾ ಆದರೂ ಕರಾವಳಿಯ ಎರಡು ಧರ್ಮಗಳು ಈ ವಿಚಾರದ ಬಗ್ಗೆ ಅಷ್ಟು ಗಂಭೀರವಾಗಿ ಚಿಂತಿಸಿದಂತೆ ತೋರುತ್ತಿಲ್ಲ. ಇಲ್ಲಿ ಧಾಮರ್ಿಕ ನಂಬಿಕೆ, ಆಹಾರ ವಸ್ತು ಎನ್ನುವುದಕ್ಕಿಂತಲೂ ಕಲಹಕ್ಕೆ ಕಾರಣವಗುವ ವಿಚಾರ ಎನ್ನುವುದನ್ನಾದರೂ ಜಿಲ್ಲೆಯ ಜನತೆ ಗ್ರ್ಪ್ರಹಿಸಿಕೊಳ್ಳುವ ಅಗತ್ಯತೆ ಇದೆ.

ಎಲ್ಲಾ ಧರ್ಮದಲ್ಲೂ ದುರುಳರು ಇದ್ದೇ ಇರುತ್ತಾರೆ. ಅದರಲ್ಲೂ ಕೋಮು ದಳ್ಳುರಿಯ ಕಿಡಿ ಹಚ್ಚಿ ವಿಕೃತ ಆನಂದ ಪಡೆಯುವವರ ಸಂಖ್ಯೆ ಸ್ವಲ್ಪ ಹೆಚ್ಚೇ ಎನ್ನಬಹುದು. ಆದರೆ ಇಂಥವರ ಮಧ್ಯೆ ಶಾಂತಿಪ್ರಿಯ ಹಿಂದೂ-ಮುಸ್ಲಿಮರ ಮನಸ್ಥಿತಿಯಲ್ಲಿ ಕೊಂಚ ಬದಲಾವಣೆ ಬೇಕಿದೆ. ಗೋಸಾಗಾಟದ ವಿಚಾರ ಬಂದಾಗ ಅದನ್ನು ತಡೆಯುವ ಸಣ್ಣ ಪ್ರಯತ್ನವನ್ನು ಜಿಲ್ಲೆಯ ಸಹೃದಯಿ ಮುಸಲ್ಮಾನ ಬಾಂಧವರು ಮಾಡಬೇಕಿದೆ. ಗೋವು ಆಹಾರ ವಸ್ತು ಎನ್ನುವುದಕ್ಕಿಂತಲೂ ಗಲಭೆಯ ವಸ್ತುವಾಗಿ ಹೋಗುತ್ತಿರುವಾಗ ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಮನಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ತರಬೇಕಾದ ಅಗತ್ಯತೆ ಖಂಡಿತಾ ಇದೆ. ಯಾಕೆಂದರೆ ಇಲ್ಲಿ ಪ್ರತಿಷ್ಟೆಯ ವಿಚಾರಕ್ಕಿಂತ, ಆಹಾರ ಪದ್ದತಿಯ ವಿವಾದಕ್ಕಿಂತ ಮುಖ್ಯವಾಗಿ ಶಾಂತಿ-ಸುವ್ಯವಸ್ಥೆಯ ಪಾತ್ರ ಪ್ರಮುಖವಾದದ್ದು. ನಮ್ಮಿಂದಲೇ ಇದನ್ನೆಲ್ಲಾ ತಡೆಯಲು ಸಾಕಷ್ಟು ಅವಕಾಶಗಳಿರುವಾಗ ಪೊಲೀಸರ ತಲೆಗೆ ಕಟ್ಟಿ ಕೂರುವುದು ಅಷ್ಟು ಸಮಂಜಸವಲ್ಲ.

ಉಳಿದಂತೆ ಈ ವಿಚಾರದಲ್ಲಿ ಹಿಂದೂಗಳ ಮನಸ್ಥಿತಿಯಲ್ಲೂ ಕೊಂಚ ಬದಲಾವಣೆಯಾಗಬೇಕು. ಗೋಸಾಗಾಟ ನಡೆಯುತ್ತಿದೆ ಎಂದ ತಕ್ಷಣ ಮುಗಿಬಿದ್ದು ವಾಹನಗಳ ಬೆನ್ನುಬೀಳುವ ಬದಲು ಇಲಾಖೆಯ ಸಹಕಾರ ಪಡೆಯುವುದು ಉತ್ತಮ. ಕೆಲದಿನಗಳಲ್ಲಿ ಸಂಘಟನೆಯವರು ಇಲಾಖೆಗೆ ಸುದ್ದಿ ಮುಟ್ಟಿಸಿಯೇ ಮುಂದಡಿಯಿಡುತ್ತಿರುವುದು ಶ್ಲಾಘನೀಯವಾದರೂ ಒಂದೆರೆಡು ಕಡೆ ಆಕ್ರೋಶದ ಹಲ್ಲೆಗಳು ನಡೆದಿದೆ. ಪ್ರತೀ ಬಾರಿ ದಾಳಿಯೊಂದೇ ಪರಿಹಾರವಲ್ಲ. ದಾಳಿಗಳೇ ಮುಂದೆ ಗಲಭೆಗೆ ಕಾರಣವಾದ ಅದೆಷ್ಟೋ ಉದಾಹರಣೆಗಳು ನಮ್ಮಲ್ಲಿವೆ. ಹೀಗಾಗಿ ಬೆನ್ನಟ್ಟಿ ದಾಳಿ ನಡೆಸಿ ಹಲ್ಲೆ ನಡೆಸುವುದು ಸಮಂಜಸವಲ್ಲ. ಅಲ್ಲದೇ ಶಾಂತಿಪ್ರಿಯ ಹಿಂದೂ ಧರ್ಮಕ್ಕೆ ಇಂತಹ ಘಟನೆಗಳು ತಕ್ಕುದಲ್ಲ ಎನ್ನುವುದು ನನ್ನ ಅಭಿಪ್ರಾಯ.
ನೆನಪಿರಲಿ, ಜಿಲ್ಲೆ ಕಂಡ ಪ್ರತೀ ಕೋಮುಗಲಭೆಯಲ್ಲೂ ಅಪಾರ ಸಾವು-ನೋವು ಸಂಭವಿಸಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದರ ಜೊತೆಗೆ ಒಂದಷ್ಟೂ ಹಾನಿಯೂ ಆಗಿದೆ. ಇವೆಲ್ಲವಕ್ಕೂ ಸಾಕ್ಷಿಯಾಗಿದ್ದ ಕಡಲತಡಿ ಇಂದು ಒಂದು ಹಂತಕ್ಕೆ ಶಾಂತವಾಗಿದೆ ಎನ್ನುವುದೇ ನಿಟ್ಟುಸಿರು ಬಿಡುವ ವಿಚಾರ. ಇದೀಗ ಮತ್ತೆ ಗೋಸಾಗಾಟ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುವುದು ಬೇಡ ಎನ್ನುವುದೇ ಎಲ್ಲರ ಆಶಯ.

Tuesday 30 July 2013

ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡೋನಾ..? 

ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡೋನಾ....!


ನಿನ್ನೆ ಅದ್ಯಾವುದೋ ಕೆಲಸದ ನಿಮಿತ್ತ ಮಂಗಳೂರಿನ ಜನನಿಬಿಡ ರಸ್ತೆಯಲ್ಲಿ ಅಡ್ಡಾಡುತ್ತಿದ್ದೆ. ಈ ವೇಳೆ ಕೇಸರಿ ಪಂಚೆಯುಟ್ಟ, ಬಿಳಿ ಬಣ್ಣದ ಶರ್ಟ್ ತೊಟ್ಟ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ನನ್ನನ್ನು ಕಂಡು ಮಾತಿಗಿಳಿದರು. `ನನ್ನ ಪರಿಚಯ ಇದಿಯಾ ಸಾರ್? ಅಂತ ಆ ವ್ಯಕ್ತಿ ಕೇಳಿದಾಗ `ಯಾರಪ್ಪ ಇದು? ಅಂದುಕೊಂಡು ಅವರನ್ನು ತಿರಸ್ಕರಿಸಿ ಮುಂದೆ ಹೋಗಲು ಯತ್ನಿಸಿದೆ. ಆದರೆ ಆ ಆಸಾಮಿ ನನ್ನನ್ನು ಅಲ್ಲಿಂದ ಕಾಲ್ಕೀಲಲು ಬಿಡಲೇ ಇಲ್ಲ. ಮತ್ತದೇ ಪ್ರಶ್ನೆ `ನನ್ನ ಪರಿಚಯ ಇದೆಯಾ ಸಾರ್? ಎನ್ನುವುದು. ಈ ವೇಳೆ ಯಾರಪ್ಪ ಇವರು ಆಂತ ಸ್ವಲ್ಪ ಯೋಚನೆ ಮಾಡಲು ಆರಂಭಿಸಿದೆ. ಆದರೆ ಆ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಗಲೇ ಇಲ್ಲ. ಆದರೂ ಆ ವ್ಯಕ್ತಿಯನ್ನು ಎಲ್ಲೋ ನೋಡಿದ, ಒಂದಷ್ಟು ಹೊತ್ತು ಮಾತನಾಡಿದ ನೆನಪುಗಳು ಮಾತ್ರ ಒಂದು ಹಂತಕ್ಕೆ ನನ್ನಲ್ಲಿತ್ತು....
ನಾನು ತಡವರಿಸಿದ್ದನ್ನು ಕಂಡ ಅವರು `ನಾನು ಸಾರ್ ಲಕ್ಷ್ಮಣ್...ಆವತ್ತು ನಿಮ್ಮ ಭವಿಷ್ಯ ಹೇಳಿದ್ನಲ್ಲಾ...! ಅಂತ ತನ್ನ ಪರಿಚಯ ಮಾಡಿಕೊಂಡರು. ಆಗಲೇ ಗೊತ್ತಾಗಿದ್ದು ನೋಡಿ....ಸರಿಸುಮಾರು ಒಂದು ವರ್ಷದ ಹಿಂದೆ ಈ ವ್ಯಕ್ತಿ ನನ್ನ ಒಂದಷ್ಟು ಭವಿಷ್ಯ ಹೇಳಿದ್ರು ಅನ್ನೋದು. ಇವರದ್ದು ಬೀದಿ ಸುತ್ತಿ ಮನೆ-ಮನೆಗೆ ಹೋಗಿ ಭವಿಷ್ಯ ಹೇಳುವ ಕಾಯಕ. ಹೀಗೇ ಒಂದು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಒಂದು ಹಣ ಕೊಡದಿದ್ರೂ ಪರವಾಗಿಲ್ಲ, ನಿಮ್ಮ ಭವಿಷ್ಯ ಹೇಳ್ತೀನಿ ಅಂದಿದ್ದ ಈ ಆಸಾಮಿ. ಕೊನೆಗೆ ಕಾಟ ತಡೆಯಲಾಗದೆ `ಆಯ್ತಪ್ಪ ಹೇಳು' ಅಂತ ಒಂದತ್ತು ನಿಮಿಷ ಅವರ ಜೊತೆ ಮಾತನಾಡಿದ್ದೆ (ಭವಿಷ್ಯ ಕೇಳಿದ್ದೆ)...!
ವರ್ತಮಾನದ ಮೇಲೆ ಮಾತ್ರ ಒಂದಷ್ಟು ನಂಬಿಕೆಯಿಟ್ಟ ನನಗೆ ಭವಿಷ್ಯದ ಬಗ್ಗೆಯಾಗಲೀ ಜ್ಯೋತಿಷ್ಯದ ಬಗ್ಗೆಯಾಗಲೀ ಅಷ್ಟಾಗಿ ನಂಬಿಕೆಯಿಲ್ಲ. ಆದರೂ ಆ ವ್ಯಕ್ತಿಯ ಕಿರಿಕಿರಿ ತಾಳದೆ ಅಂದು ಭವಿಷ್ಯ ಕೇಳಿದೆ. ಅದು ಸುಮಾರು ಒಂದು ವರ್ಷಗಳ ಹಿಂದಿನ ಕಥೆ. ಕೈ ನೋಡಿ ಭವಿಷ್ಯ ಹೇಳಲು ಆರಂಭಿಸಿದ ಅವರು, ನಿಮ್ಮ ಭವಿಷ್ಯ ತುಂಬಾ ಚೆನ್ನಾಗಿದೆ. ನಿಮಗೆ ರಾಜಯೋಗ ಇದೆ. ನೀವು ಕೈಯಿಟ್ಟ ಎಲ್ಲಾ ಕೆಲಸಗಳೂ ಥಟ್ ಅಂತ ಮುಗಿದು ಹೋಗುತ್ತೆ....ಅಂತ ಹೇಳಿ ಐದೇ ನಿಮಿಷದಲ್ಲಿ ನನ್ನನ್ನು ರೈಲು ಹತ್ತಿಸಿಬಿಟ್ಟಿದ್ದ. ಆದರೆ ನನ್ನದು ಮಾತ್ರ ಒಮ್ಮೊಮ್ಮೆ ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಡುವ ಜಾಯಮಾನ. ಹಾಗಾಗಿ ಆ ಕೂಡಲೇ ಆತನ ಮಾತಿಗೆಲ್ಲಾ ಒಂದಷ್ಟು ಖಡಕ್ ಉತ್ತರ ಕೊಟ್ಟಿದ್ದೆ....ಸುಮ್ಮನೆ ರೈಲು ಹತ್ತಿಸುವ ಕೆಲಸ ಬೇಡ ಅಂತ ಒಂದು ರೇಂಜಿಗೆ ಆ ಜ್ಯೋತಿಷಿಗೆ ಬೈದು ಬಿಟ್ಟಿದ್ದೆ. ಸಾಕಪ್ಪ ನಿನ್ನ ಜ್ಯೋತಿಷ್ಯ ಇಲ್ಲಿಂದ ಜಾಗ ಖಾಲಿ ಮಾಡು ಅಂತಾನೂ ಹೇಳಿದ್ದೆ. ಆದರೆ ಅವರು ಮಾತ್ರ ಜಾಗ ಖಾಲಿ ಮಾಡುವ ಹಾಗೆ ಕಾಣಲಿಲ್ಲ. `ಸಾರ್, ಇಲ್ಲಿಯ ತನಕ ನಾನು ಹೇಳಿದ್ದು ನಿಮ್ಮ ಅದೃಷ್ಟದ ಬಗ್ಗೆ...ಮುಂದೆ ನಿಮ್ಮ ಜೀವನದಲ್ಲಿ ಆಗಬಹುದಾದ ದುರಾದೃಷ್ಟದ ಬಗ್ಗೆಯೂ ಹೇಳ್ತೀನಿ ಅಂದ......ಮಾತು ಮುಂದುವರೆಸಿದವನೇ.....ಮುಂದೆ ನಿಮ್ಮ ಜೀವನದಲ್ಲಿ ದೊಡ್ಡದೊಂದು ಅನಾಹುತ ಕಾದಿದೆ ಅಂದು ಬಿಟ್ಟ...ಮೊದಲನೆಯದು ಅಪಘಾತವಾದರೆ, ಎರಡನೆಯದು ನೀವು ಮಾಡುವ ವೃತ್ತಿಯದ್ದು ಎಂದು ಹೇಳಿದೆ..ಮೂರನೆಯದ್ದು ಏನಪ್ಪ? ಎಂದು ನಾನು ಕೂಡ ಕೇಳಿಯೇ ಬಿಟ್ಟೆ..ಆಗ ಆತ `ನಿಮ್ಮ ಜೀವನದಲ್ಲಿ ಪ್ರೀತಿಯ ವಿಚಾರದಲ್ಲಿ ಒಂದು ಸೋಲು ನಿಮ್ಮ ಬೆನ್ನು ಬೀಳಿಲಿದೆ. ಬದುಕಿನಲ್ಲಿ ನಿಮ್ಮ ಮೇಲೊಂದು ಬಹುದೊಡ್ಡ ಏಟು ಬೀಳಲಿದೆ. ಹಣ್ಣು ಮಗಳೊಬ್ಬಳ ವಿಚಾರದಲ್ಲಿ ಒಂದಷ್ಟು ದಿನ ನಿಮಗೆ ತೊಂದರೆ ಕಟ್ಟಿಟ್ಟ ಬುತ್ತಿ' ಅಂದು ಬಿಟ್ಟ. ಒಂದು ಮತ್ತು ಎರಡನೆಯದು ಓಕೆ....ಆದರೆ ಮೂರನೆಯದು ನನ್ನ ಜೀವನದಲ್ಲಿ ಸಾದ್ಯವೇ ಇಲ್ಲ ಅಂತ ಹೇಳಿಬಿಟ್ಟೆ. ಯಾಕೆಂದರೆ ಅಲ್ಲಿಯತನಕ ಪ್ರೀತಿ-ಪ್ರೇಮ, ಲವ್-ಗಿವ್ ಅಂತ ನನಗೆ ಏನೂ ಇರಲಿಲ್ಲ. ನನ್ನದೇನಿದ್ದರೂ ಒಬ್ಬಂಟಿ ಜೀವನ...ಹಾಗಾಗಿ ಈ ಬೀದಿ ಜ್ಯೋತಿಷಿಯ ಮಾತಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿಯೋ ಏನೋ ನಿನ್ನೆ ಮಂಗಳೂರಿನ ರಸ್ತೆಯಲ್ಲಿ ಮುಗಿಬಿದ್ದು ಆತನೇ ಮಾತಿಗಿಳಿದರೂ `ಅವನ್ಯಾರು? ಎನ್ನುವುದು ನನ್ನ ಅರಿವಿಗೆ ಬರಲು ಒಂದಷ್ಟು ಹೊತ್ತು ಬೇಕಾದದ್ದು...!
ಹೀಗೆ ಮಂಗಳೂರಿನಲ್ಲಿ ಮಾತಿಗೆ ಸಿಕ್ಕ ಜ್ಯೋತಿಷಿ ಲಕ್ಷಣನ ಬಗ್ಗೆ ಅಷ್ಟೊತ್ತಿಗಾಗಲೇ ಎಲ್ಲವೂ ನೆನಪಾಗಿತ್ತು. ಆತ ಒಂದು ವರ್ಷದ ಹಿಂದೆ ಹೇಳಿದ್ದು, ಆನಂತರ ನನ್ನ ಜೀವನದಲ್ಲಿ ನಡೆದದ್ದು ಎಲ್ಲವೂ ಕಣ್ಣ ಮುಂದಿತ್ತು. ಹಾಗಾಗಿ ಇನ್ನು ಭವಿಷ್ಯದ ಪ್ರಶ್ನೆ ಬೇಡ ಅಂದುಕೊಂಡು ಜ್ಯೋತಿಷಿಯನ್ನೇ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ನನ್ನ ಜೀವನದಲ್ಲಿ ಆಗಿ ಹೋದ ಘಟನೆಯ ಬಗ್ಗೆ ಕೇಳಿದೆ. ಈಗ ಆತನ ಜೊತೆ ಮಾತನಾಡುವ ಸರದಿ ನನ್ನದು ಅಂದು ಕೊಂಡು `ಈಗ ನೀವು ನನ್ನ ಭವಿಷ್ಯ ಹೇಳುವುದು ಬೇಡ...ಸರಿಯಾಗಿ ಮೂರು ತಿಂಗಳ ಹಿಂದೆ ನನ್ನ ಜೀವನದಲ್ಲಿ ಏನಾಯಿತು? ಅಂತ ಹೇಳಿ ಅಂದು ಬಿಟ್ಟೆ. ಆಗ ತನ್ನ ಇನ್ನಿಲ್ಲದ ಕವಡೆ, ಜ್ಯೋತಿಷ್ಯದ ಒಂದಷ್ಟು ಪುಸ್ತಕ, ಅಸ್ತ್ರ ಎಲ್ಲವನ್ನೂ ನನ್ನೆದುರಿಗಿಟ್ಟವನೇ ಭೂತಕಾಲದ ವಿವರ ಬಹಿರಂಗಕ್ಕೆ ಇಳಿದುಬಿಟ್ಟ. `ಏನ್ ಸಾರ್, ನಿಮ್ಮ ಜೀವನದಲ್ಲಿ ಹೀಗೆಲ್ಲಾ ಆಗಿ ಹೋಯ್ತು! ನಾನವತ್ತು ಹೇಳಿದ ಹಾಗೆಯೇ ಆಯ್ತಲ್ಲ. ಹೆಣ್ಣು ಮಗಳ ವಿಚಾರದಲ್ಲಿ ನೀವು ಸುಖಾಸುಮ್ಮನೆ ತೊಂದರೆ ಅನುಭವಿಸುತ್ತೀರಿ ಅಂದಿದ್ದೆ. ಅದು ಸರಿಯಾಗಿಯೇ ಆಗಿದೆ ಅಲ್ವಾ ಸಾರ್. ಮೊದಲು ಎಲ್ಲರೂ ನಿಮ್ಮದೇ ತಪ್ಪು ಅಂದುಕೊಂಡಿದ್ರೂ ಆದ್ರೆ ಈಗ ಎಲ್ಲರಿಗೂ ನಿಮ್ಮ ಬಗ್ಗೆ ಗೊತ್ತಾಗಿದೆ ಅಲ್ವಾ? ಮೊದಲ ಪ್ರೀತಿ ನಿಮ್ಮ ವಿಚಾರದಲ್ಲಿ ಸೋತು ಹೋಯ್ತಲ್ಲ ಸಾರ್...! ಅಂದು ಬಿಟ್ಟ.....ಈ ಮಧ್ಯೆ ನಿಮಗೆ ಒಂದು ವಾಹನಪಘಾತವಾಗಿದೆ...ಮೊದಲು ಮಾಡ್ತಾ ಇದ್ದ ಕೆಲಸ ಕೂಡ ಈಗ ಇಲ್ವಲ್ಲಾ? ಬೇರೆ ಕಲಸದಲ್ಲಿದ್ದೀರಲ್ಲಾ.....ಅಂದ ಲಕ್ಷ್ಮಣ ಜ್ಯೋತಿಷಿ....
ಆಗ ನಾನು ನಿಜಕ್ಕೂ ಶಾಕ್ ಆದೆ....!ಜ್ಯೋತಿಷ್ಯ, ಭವಿಷ್ಯ ಯಾವುದನ್ನೂ ನಂಬದ ನಾನು ಕೂಡ ಆತನ ಮಾತಿಗೆ ಸೋತು ಶರಣಾಗಬೇಕಾಯಿತು. ಕಾರಣ ಇಷ್ಟೇ....ಆತ ತನ್ನ ಭೂತಕಾಲದ ಬಗ್ಗೆ ಹೇಳಿದ ಇಂಚಿಂಚೂ ವಿಷಯಗಳು ಕಳೆದ ಒಂದು ವರ್ಷ ನಡೆದ ಘಟನೆಗಳ ಜೆರಾಕ್ಸ್ ಕಾಪಿಯಂತಿದ್ದವು......! ಅದರಲ್ಲೂ ನಾನು ಯಾರಲ್ಲಿಯೂ ಹೇಳದ ವಿಚಾರಗಳೂ ಲಕ್ಷ್ಮಣದ ಬಾಯಿಯಿಂದ ಹಾಗೇ ಉದುರುತ್ತಿದ್ದವು.
ಆಗ ನನಗೆ ಒಂದಂತೂ ಸ್ಪಷ್ಟವಾಗಿತ್ತು. ಹೈ-ಫೈ ಜೀವನ ನಡೆಸುವ ಸೋಕಾಲ್ಡ್ ಜ್ಯೋತಿಷಿಗಳ ಮಧ್ಯೆ ಲಕ್ಷ್ಮಣ್ನಂತಹ ಬೀದಿ ಸುತ್ತುವ ಜ್ಯೋತಿಷಿಗಳ ಭವಿಷ್ಯ ಎಷ್ಟು ಪವರ್ಫುಲ್ ಅನ್ನೋದು. ಕೆಲವೊಮ್ಮೆ ನಾವು ಇಂಥವರ ವೇಷ-ಭೂಷಣ, ಬದುಕುವ ರೀತಿಯನ್ನು ಕಂಡು ತಾತ್ಸರದಿಂದ ಕಾಣುತ್ತೇವೆ. ಆದರೆ ಬೀದಿ ಸುತ್ತಿ ಇವರು ಗಳಿಸಿಕೊಂಡ ಅತ್ಯಮೂಲ್ಯ ಜ್ಞಾಪಕಶಕ್ತಿ, ಇದ್ದಬದ್ದ ಪುಸ್ತಕ ಓದದೇ ಪಡೆದ ಒಂದಷ್ಟು ಭವಿಷ್ಯ ಹೇಳುವ ಗುಣ ನಿಜಕ್ಕೂ ಗ್ರೇಟ್ ಅನಿಸದೇ ಇರದು. ಅದರಲ್ಲೂ ಜ್ಯೋತಿಷ್ಯ ಬೇಕಾದ್ರೆ ಹೇಳ್ತೀನಿ...ಆದ್ರೆ ನಿಮ್ಮತ್ರ ಹಣ ಇಲ್ದೇ ಇದ್ರೆ ಪರ್ವಾಗಿಲ್ಲ ಎನ್ನುವ ಇವರ ಸ್ವಾಭಾವ....ಒಂದು ಹಂತಕ್ಕೆ ಅದಾಗಲೇ ನನ್ನಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿತ್ತು. ನನ್ನ ಜೀವನವನ್ನು ಇದ್ದಿದ್ದನ್ನು ಇದ್ದ ಹಾಗೆ ಕಟ್ಟಿಕೊಟ್ಟ ಲಕ್ಷ್ಮಣ್ರಂತಹ ಜ್ಯೋತಿಷಿಗಳ ಬಗ್ಗೆ ಅದ್ಯಾಕೋ ಒಂದಷ್ಟು ಗೌರವ ನನ್ನಲ್ಲೂ ಮೂಡಿದೆ. ಏನೇ ಆಗಲಿ ಭೂತ-ವರ್ತಮಾನ-ಭವಿಷ್ಯದ ನಡುವಿನ ಹಾದಿಯಲ್ಲಿ ಜ್ಯೋತಿಷ್ಯ ಎನ್ನುವುದು ಹೆಸರಿಗಷ್ಟೇ....ಬದುಕಿನಲ್ಲಿ ಇಂತದ್ದೇ ಆಗಬೇಕು ಅನ್ನುವುದಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಬಿಡಿ...ಅದಕ್ಕೆ ಇರಬೇಕು ಯೋಗರಾಜ್ ಭಟ್ಟರು `ಡ್ರಾಮಾ' ಚಿತ್ರದಲ್ಲಿ ಹೀಗೆ ಹೇಳಿದ್ದು......
ಪರ್ಪಂಚದಲ್ಲಿ ಮನುಷ್ಯ ತುಂಬಾ ಸಣ್ಣ ಆಸಾಮಿ...ಅವನಿರದೇ ಹೋದರೂನೂ ತಿರುಗುತ್ತಪ್ಪ ಈ ಭೂಮಿ....
ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡೋನಾ..? ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡೋನಾ....!
ಕೊನೆಗೆ ಲಕ್ಷ್ಮಣ್ ಜ್ಯೋತಿಷಿಯ ಮೊಬೈಲ್ ನಂಬರ್ ಪಡೆದು ಹೊರಟು ಬಿಟ್ಟೆ......ಆಗಲೂ ಅಷ್ಟೇ ಯಾವುದೇ ಪ್ರತಿಫಲ ಬಯಸದೇ `ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ, ಬದುಕಲ್ಲಿ ನೀವು ಗೆಲ್ತೀರಾ..! ಅಂದು ಬಿಟ್ಟ.......