ಮನಸಿನಲ್ಲಿದ್ದ ಮೌನ ಮಾತಾದಾಗ.........!
ಹೆಸರು ಗಣೇಶ್......ಹಗಲಿನಲ್ಲಿ ಕೊರಿಯರ್ ಕೆಲಸ, ರಾತ್ರಿಯಾದರೆ ಪತ್ರಿಕಾ ಕಛೇರಿ, ಈ ಮಧ್ಯೆ ದೂರ ಶಿಕ್ಷಣದಲ್ಲಿ ಜರ್ನಲಿಸಂ. ಹೀಗೆ ಮೂರು ದೋಣಿಯ ಮೇಲೆ ಕಾಲಿಟ್ಟಿದ್ದ ನಾನು ಹೆಚ್ಚಿನ ಸಮಯ ಜನರೊಂದಿಗೆ ಬೆರೆಯುತ್ತಿದ್ದದ್ದು ಕೊರಿಯರ್ ಸಂಸ್ಥೆಯಲ್ಲಿ. ಇದೇ ಕೊರಿಯರ್ ಸಂಸ್ಥೆಯ ಪಕ್ಕದಲ್ಲೊಂದು ವಾಟರ್ ಫ್ಯೂರಿಫಯರ್ ಶಾಪ್ ಇತ್ತು. ಇಲ್ಲಿ ಮಾಕರ್ೆಟಿಂಗ್ ಕೆಲಸಕ್ಕೆ ಅಂತ ಪ್ರತೀ ದಿನ ಹುಡುಗಿಯರು ಬರ್ತಾ ಇದ್ದರು. ನಮ್ಮಲ್ಲೂ ಎಂಟತ್ತು ಹುಡುಗರಿದ್ದ ಕಾರಣ ಸಹಜವಾಗಿಯೇ ಅಲ್ಲಿನ ಹುಡುಗಿಯರಿಗೂ ಇಲ್ಲಿನ ಹುಡುಗರಿಗೂ ಮಾತು ಮುಂದುವರೆದಿತ್ತು. ಆದರೆ ನಾನು ಮಾತ್ರ ಯಾರಲ್ಲೂ ಅಷ್ಟಾಗಿ ಮಾತಾಡ್ತಾ ಇರಲಿಲ್ಲ. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಹತ್ತರ ನಂತರ ನಮ್ಮ ಅಫೀಸ್ನಲ್ಲಿ ನಾನೊಬ್ಬನೇ ಇರುತ್ತಿದ್ದೆ. ತೀರಾ ಸೈಲೆಂಟ್ ಆದ ನನಗೆ ಒಂಟಿಯಾದಾಗ ಜೊತೆಯಾಗುತ್ತಿದ್ದದ್ದು ಪುಸ್ತಕಗಳು ಮಾತ್ರ. ಹೀಗೇ ಪುಸ್ತಕ ಓದ್ತಾ ಇದ್ದಾಗ ಪಕ್ಕದ ಸಂಸ್ಥೆಯ ಐದಾರು ಹುಡುಗಿಯರು ಬಂದು ನಮ್ಮ ಕೆಲಸದ ಬಗ್ಗೆ ಕೇಳಿದ್ರೂ....ಇಲ್ಲೇನ್ ಕೆಲಸ? ಏನ್ ಮಾಡ್ತೀರಾ? ಅಂತ ವಿಚಾರಿಸಿದ್ರೂ. ನಾನೂ ಕೂಡ ಅವರ ಕುತೂಹಲಕ್ಕೆ ನಿರಾಶೆ ಮಾಡದೆ ಎಲ್ಲವನ್ನೂ ಒಪ್ಪಿಸಿದೆ. ಇಷ್ಟೆಲ್ಲಾ ಮುಗಿದ ನಂತರ ಇವರಲ್ಲೊಬ್ಬಳು ನಾನು ಓದುತ್ತಿದ್ದ ಪುಸ್ತಕ ಪಡೆದುಕೊಂಡಳು. ಓದಿ ನಾಳೆ ಕೊಡ್ತೀನಿ ಅಂದಳು. ಪುಸ್ತಕವಾದ ಕಾರಣ ನಾನೂ ಕೊಟ್ಟು ಬಿಟ್ಟೆ. ಮರುದಿನ ನನ್ನ ಪುಸ್ತಕ ಹಿಂದಿರುಗಿಸಲು ಆಕೆ ಬಂದಳು. ಅವಳ ಜೊತೆಗೆ ಉಳಿದ ನಾಲ್ವರೂ ಇದ್ದರು. ಯಾಕೊ ಗೊತ್ತಿಲ್ಲ ಈ ಪುಸ್ತಕ ಪಡೆದ ಹುಡುಗಿಯರ ಮಧ್ಯೆ ನಿಂತಿದ್ದ ಗುಳಿ ಕೆನ್ನೆಯ ಹುಡುಗಿ ಮಾತ್ರ ಒಂದೇ ಸಮನೆ ಇಷ್ಟವಾಗಿದ್ದಳು. ಹಾಗಂತ ಅದು ಪ್ರೀತಿ ಅನ್ನುವ ಹಾಗಿರಲಿಲ್ಲ. ಜಸ್ಟ್ ಇಷ್ಟ ಅಷ್ಟೇ....!
ಹೀಗೆ ಪ್ರತಿ ನಿತ್ಯ ಇವರುಗಳ ಜೊತೆ ನನ್ನ ಮಾತುಕತೆ ಸಾಗುತ್ತಿತ್ತು. ಆದರೆ ಆ ಗುಳಿಕೆನ್ನೆಯ ಹುಡುಗಿಯೊಂದಿಗೆ ಮಾತ್ರ ನನ್ನ ಮಾತುಕತೆ ನಡೆದಿರಲಿಲ್ಲ. ಅವಳೊಂದಿಗೇನಿದ್ದರೂ ಜಸ್ಟ್ ನಗುವಷ್ಟೇ. ಹೀಗೇ ಸಾಗುತ್ತಿದ್ದ ದಿನಗಳ ಮಧ್ಯೆ ನನ್ನ ಜೊತೆ ಮಾತನಾಡುತ್ತಿದ್ದ ಹುಡುಗಿಯರಿಗಿಂತ ಸೈಲೆಂಟ್ ಹುಡುಗಿ ತುಂಬಾ ಇಷ್ಟವಾಗಿದ್ದಳು. ಬಹುಶಃ ಈ ವೇಳೆ ಇಷ್ಟ ಅನ್ನುವುದು ಒಂದು ಹಂತಕ್ಕೆ ಪ್ರೀತಿಯಾಗಿ ಬೆಳೆದಿತ್ತು ಅನ್ನಬಹುದೇನೋ? ಜೀವನದಲ್ಲಿ ಒಂದು ಹುಡುಗಿಯ ಮೇಲೆ ಮೂಡಿದ ಮೊದಲ ಪ್ರೀತಿ ಅದಾಗಿತ್ತು....!
ಇಷ್ಟೆಲ್ಲಾ ಅದ್ಮೇಲೆ ಪ್ರೀತಿ ವಿಚಾರ ಅವಳಿಗೆ ಹೇಳಿಬಿಡಬೇಕು ಅನಿಸ್ತು. ಆದರೆ ಅವಳ ಜೊತೆ ಯಾವಾಗಲೂ ಅವಳ ಗೆಳತಿಯರು ಇರ್ತಾ ಇದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ. ಒಂದು ದಿನ ಹೇಗೋ ಅವಳ ಮೊಬೈಲ್ ನಂಬರ್ ಪಡೆದುಕೊಂಡೆ. ನಂಬರ್ ಪಡೆದ ಮೇಲೆ ಫೋನ್ ಮಾಡಿ ಪ್ರೀತಿಯ ಬಗ್ಗೆ ಹೇಳೋಣವೆಂದರೆ ಅದೇನೋ ಭಯ! ಯಾಕೆಂದರೆ ಅದು ನನ್ನ ಮೊದಲ ಪ್ರೀತಿ...ಫಸ್ಟ್ ಪ್ರಫೋಸಲ್ ಆಗಿತ್ತು....! ಅವತ್ತೊಂದಿನ ರಾತ್ರಿ ಗುಂಡಿಗೆ ಗಟ್ಟಿ ಮಾಡಿಕೊಂಡು ಅವಳಿಗೆ ಫೋನ್ ಮಾಡಿದೆ. ಆದರೆ ಭಯದಿಂದ ಬಾಯಲ್ಲಿ ಮಾತೇ ಉದುರಲಿಲ್ಲ. ಆದರೆ ಅದೇ ಮೊದಲ ಬಾರಿಗೆ ಎಂಬಂತೆ ಫೋನ್ ಎತ್ತಿದ ಕಾವ್ಯ...ಗಣೇಶ್ ಅಲ್ವಾ ಅಂತ ಕೇಳಿದ್ದಳು. ಫೋನ್ನಲ್ಲಿ ಇಂಥದ್ದೊಂದು ಮಾತು ಕೇಳಿ ಸಿಡಿಲು ಬಡಿದ ಅನುಭವ....! ಹೌದು...ಅಂತ ಮಾತು ಮುಂದುವರೆಸಿದ ನಾನು ಒಂದೆರಡು ನಿಮಿಷ ಕ್ಯಾಶುವಲ್ ಆಗಿ ಮಾತಿಗಿಳಿದೆ. ಆದ್ಯಾಕೊ ಸಮಯ ಓಡ್ತಾ ಇತ್ತು ಅನಿಸಿದಾಗ ಲವ್ ಪ್ರಪೋಸ್ ಮಾಡಿಯೇ ಬಿಟ್ಟಿದ್ದೆ. ಆದರೆ ಆವಾಗಲೇ ಗೊತ್ತಾಗಿದ್ದು, ಅವಳಿಗೂ ನಾನು ಈ ಹಿಂದೆಯೇ ಇಷ್ಟವಾಗಿದ್ದೆ ಅಂತ. ಅಲ್ಲಿಂದ ಮೌನಿ ಹೃದಯಗಳ ಪ್ರೀತಿಯ ಪಯಣ ಆರಂಭವಾಗಿತ್ತು.......
ಕಾವ್ಯ ಜಾತಿ, ಗುಣ, ಶಿಕ್ಷಣ ಎಲ್ಲದರಲ್ಲೂ ನನಗೆ ಫಫರ್ೆಕ್ಟ್ ಮ್ಯಾಚ್. ಹೀಗಾಗಿಯೋ ಏನೋ ಪ್ರಮಿಯೊಂದಿಗೆ ಒಂದು ಬಾರಿಯೂ ನಾನು ಮಾತು ಮುರಿದಿರಲಿಲ್ಲ, ಜಗಳ ಕಾಯ್ದಿರಲಿಲ್ಲ. ಪ್ರಮಿಯದ್ದು ಮಂಗಳೂರಿನಿಂದ 60ಕಿ.ಮೀ ದೂರದ ಊರು. ನನ್ನಂತೆಯೇ ಶಿಕ್ಷಣ ಮತ್ತು ಕೆಲಸ ಅಂತ ಮಾಡಿಕೊಂಡು ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದಳು. ಬೆಳಿಗ್ಗೆ 7ರಿಂದ 9 ಕಂಪ್ಯೂಟರ್ ಕ್ಲಾಸ್ಗೆ ಹೋದರೆ ಉಳಿದ ಸಮಯ ಅಂದರೆ ಸಂಜೆ ಐದರವರೆಗೆ ವಾಟರ್ ಫ್ಯೂರಿಫಯರ್ ಸಂಸ್ಥೆಯಲ್ಲಿ ಕೆಲಸ. ಈ ಮಧ್ಯೆ ಸಿಗುವ ಭಾನುವಾರದ ಬಿಡುವಿನಲ್ಲಿ ನಾವಿಬ್ಬರೂ ಮಂಗಳೂರಿನ ಪಾಕರ್್ ಬೀಚ್ಗಳಲ್ಲಿ ಸುತ್ತಾಡುತ್ತಿದ್ದೆವು. ಉಳಿದ ದಿನಗಳಲ್ಲಿ ದಿನದ ಮೂರು ಹೊತ್ತು ಫೋನ್ ಕಾಲ್ ಹರಟೆ ಮುಂದುವರೆದಿತ್ತು. ಹಾಗಂತ ನಮ್ಮ ಸುತ್ತಾಟಗಳು ಪಾಕರ್್-ಬೀಚ್ಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ವಾರದಲ್ಲಿ ಎರಡು ದಿನ ಮಂಗಳೂರಿನ ದೇವಸ್ಥಾನವೊಂದಕ್ಕೆ ಖಾಯಂ ಭಕ್ತರಾಗಿದ್ದೆವು. ಇಲ್ಲಿ ಹೋದಾಗ ಇಬ್ಬರ ಹಸರಿನಲ್ಲೂ ಕುಂಕುಮಾರ್ಚನೆ ಮಾಡಿಸುವುದು ವಾಡಿಕೆ. ಹೀಗಾಗಿ ನಮ್ಮಿಬ್ಬರ ಹೆಸರು ನಕ್ಷತ್ರ ಎಲ್ಲವೂ ಇಲ್ಲಿನ ಅರ್ಚಕರ ಮೆದುಳಿನಲ್ಲಿ ಅಪ್ಡೇಟ್ ಆಗಿತ್ತು. ಹೀಗೆ ನಮ್ಮಿಬ್ಬರ ಪ್ರೀತಿ ಯಾವುದೇ ಅಡೆತಡೆ ಇಲ್ಲದೇ ಸಾಗಿತ್ತು. ಕಾವ್ಯಾಳದ್ದು ನನಗಿಂತ ಎರಡು ವರ್ಷ ಸಣ್ಣ ವಯಸ್ಸು. ಹಾಗಾಗಿ ಅವಳದ್ದು ಮಕ್ಕಳಂತ ಸ್ವಭಾವ. ತೀರಾ ಸೆನ್ಸಿಟಿವ್, ಅತೀ ಭಾವುಕ ಜೀವಿ. ತಾನು ಉಡುವ ಉಡುಗೆಯಲ್ಲೂ ಅಷ್ಟೇ, ಫಫರ್ೆಕ್ಟ್ ಮ್ಯಾಚಿಂಗ್ ಆಗಿರಬೇಕು. ನೀಲಿ ಆಕಾಶಕ್ಕೆ ಸಡ್ಡು ಹೊಡೆಯುವ ಬಣ್ಣದ ಚೂಡಿದಾರ ಹಾಕಿ, ತನ್ನ ನೀಲಕಾಯದ ಕೂದಲುಗಳಿಗೆ ಹೂ ಮುಡಿದು ಗುಳಿ ಕೆನ್ನೆಯ ನಗು ನಕ್ಕಳೆಂದರೆ ಸಾಕು ಕಾವ್ಯ ಸಖತ್ ಇಷ್ಟವಾಗುತ್ತಿದ್ದಳು. ಹೊಟೇಲ್ನಲ್ಲಿ ತಿಂಡಿ ತಿನ್ನುವಾಗಲೂ ಅವಳ ಮಕ್ಕಳಾಟಿಕೆಗೆ ಬ್ರೇಕ್ ಬೀಳುವುದಿಲ್ಲ. ಒಟ್ಟಿನಲ್ಲಿ ಸ್ವಭಾವತ ಕಾವ್ಯ ನನಗೆ ತುಂಬಾ ಇಷ್ಟವಾಗಿದ್ದಳು. ಹೀಗಾಗಿ ಜೀವನಕ್ಕೆ ಇವಳೇ ಸೂಕ್ತ ಅಂದುಕೊಂಡು ಆ ಜೀವಕ್ಕೆ ಒಂದಷ್ಟೂ ನೋವು ಕೊಡದೇ ಪ್ರೀತಿಸುತ್ತಿದ್ದೆ.
ಹೀಗೆ ಯಾವುದೆ ಅಡೆತಡೆ ಇಲ್ಲದ ನಮ್ಮ ಪ್ರೀತಿಗೆ ಸಣ್ಣದೊಂದು ಏಟು ಬಿದ್ದಿದ್ದು ಕಾವ್ಯ ಕೆಲಸ ಬಿಟ್ಟಾಗ. ಸರಿಯಾಗಿ ಸಂಬಳ ಕೊಡಲಿಲ್ಲ ಅನ್ನೋ ಕಾರಣಕ್ಕೆ ಕಾವ್ಯ ತನ್ನ ಕೆಲಸ ಬಿಟ್ಟಿದ್ದಳು. ಅದೇ ನೋವಿನಲ್ಲಿ ನನ್ನ ಜೊತೆಗಿನ ಮಾತಿಗೂ ಸಣ್ಣ ಮಟ್ಟಿನ ವಿರಾಮ ಕೊಟ್ಟಿದ್ದಳು. ಆದರೆ ಇವಳನ್ನು ತೀರಾ ಹೆಚ್ಚಾಗಿ ಹಚ್ಚಿಕೊಂಡಿದ್ದ ನನಗೆ ಇವಳೊಂದಿಗೆ ಒಂದು ದಿನ ಮಾತಿಗಿಳಿಯದಿದ್ದರೂ ಆಗುತ್ತಿರಲಿಲ್ಲ. ಹಾಗಾಗಿ ಅಂದು ಅವಳಿಗೆ ಒಂದೇ ಸಮನೆ ಕಾಲ್ ಮಾಡಿದ್ದೆ. ತುಂಬಾ ಹೊತ್ತಿನ ಬಳಿಕ ಫೋನ್ ಎತ್ತಿದ ಕಾವ್ಯಳನ್ನು ಸಮಾಧಾನಪಡಿಸಿ, ಪಾಕರ್್ಗೆ ಕರೆದುಕೊಂಡು ಹೋದೆ. ಅಂದು ಮಾತ್ರ ಕಾವ್ಯಳಲ್ಲಿ ಎಂದಿಗಿಂತಲೂ ಹೆಚ್ಚಿನ ಬದಲಾವಣೆ ಕಂಡಿತ್ತು. ಅದೇಗೋ ಅವಳ ಸಮಸ್ಯೆಯನ್ನು ತಿಳಿದುಕೊಂಡೆ. ಆಗಲೇ ಗೊತ್ತಾಗಿದ್ದು, ಕೆಲಸ ಬಿಟ್ಟ ನಂತರ ಕಾವ್ಯಗೆ ಇಲ್ಲಿ ಹಣದ ಸಮಸ್ಯೆಯಾಗಿದೆ ಅನ್ನೋದು. ಹೀಗಿದ್ದರೂ ನನ್ನ ಬಳಿ ತನ್ನ ಸಮಸ್ಯೆಯನ್ನು ಮಾತ್ರ ಕಾವ್ಯ ಅಲ್ಲಿಯತನಕ ಹೇಳಿಕೊಂಡಿರಲಿಲ್ಲ. ಈ ಎಲ್ಲಾ ವಿಚಾರ ಗೊತ್ತಾದ ನಂತರ ನಾನೇ ಕಾವ್ಯಾಗೆ ಹಣ ಕೊಟ್ಟು ಬೇಸರ ಕಳೆಯಲಿ ಅಂತ ಒಂದೆರೆಡು ದಿನ ಊರಿಗೆ ಹೋಗಿ ಬಾ ಅಂತ ಕಳಿಸಿದೆ. ಮತ್ತೆ ಬಂದ ನಂತರ ಇಲ್ಲೊಂದು ಕೆಲಸ ಹುಡುಕಿದರಾಯಿತು ಅಂತ ಸಮಾಧಾನಿಸಿದೆ. ಹೀಗೆ ಮನಸ್ಸಿಲ್ಲದ ಮನಸ್ಸಿನಲಿ ಕಾವ್ಯಳನ್ನು ಬಸ್ ಹತ್ತಿಸಿ ಬಿಟ್ಟೆ. ಊರಿಗೆ ಹೋದ ಕಾವ್ಯ ಎರಡು ದಿನ ಮನೆಯವರೊಂದಿಗೆ ಕಳೆದು ಮರಳಿ ಮಂಗಳೂರಿಗೆ ಬಂದಿದ್ದಳು. ಆಗ ಅವಳ ಗೆಳತಿಯೊಬ್ಬಳು ಇಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಕಾವ್ಯಗೆ ಕೆಲಸ ಹುಡುಕಿದ್ದಳು. ಊರಿಂದ ಬಂದವಳೇ ನನ್ನ ಬಳಿ ಅನುಮತಿ ಕೇಳಿ ಬಟ್ಟೆ ಅಂಗಡಿಗೆ ಕೆಲಸಕ್ಕೆ ಸೇರಿದಳು. ಬಟ್ಟೆ ಅಂಗಡಿ ಕೆಲಸ ನನಗೆ ಇಷ್ಟವಿಲ್ಲದಿದ್ದರೂ ಮತ್ತೆ ಕಾವ್ಯ ಕೊರಗುವುದು ಬೇಡ ಎಂದು ಒಪ್ಪಿದ್ದೆ. ಮತ್ತೆ ಬೇಕಾದರೆ ಅವಳಿಗೆ ಹೊಂದಾಣಿಕೆಯಾಗುವ ಕೆಲಸವನ್ನು ನಾನೇ ಹುಡುಕುತ್ತೇನೆ ಅಂದುಕೊಂಡು ಸುಮ್ಮನಾಗಿದ್ದೆ. ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಕಾವ್ಯಳಲ್ಲಿ ಮತ್ತೆ ಹಿಂದಿನ ಉತ್ಸಾಹ ಮರುಕಳಿಸಿತ್ತು. ನನ್ನ ಪ್ರೀತಿಯ ಕಾವ್ಯ ಈ ಈ ಹಿಂದಿನಂತೆ ಮತ್ತೆ ನನ್ನ ಜೊತೆ ಬೆರೆತಿದ್ದಳು. ಬಟ್ಟೆ ಅಂಗಡಿಯಲ್ಲೂ ಕೆಲಸ ಸಾಗುತ್ತಿತ್ತು. ಹೀಗಿರುವಾಗ ಅದೊಂದು ಭಾನುವಾರ ನಾವಿಬ್ಬರೂ ಪಾಕರ್್ನಲ್ಲಿ ಜೊತೆಯಾಗಿದ್ದೆವು. ಈ ವೇಳೆ ತೀರಾ ಸೈಲೆಂಟಾಗಿದ್ದಳು ಕಾವ್ಯ. ಮತ್ತೆ ಇವಳಿಗೇನಾಯ್ತಪ್ಪ ಅಂದುಕೊಂಡು ಕೇಳಿಯೇ ಬಿಟ್ಟೆ. ಬಾಯಿ ಬಿಡದ ಕಾವ್ಯ ನಾನು ಸಾಕಷ್ಟು ಒತ್ತಾಯಪಡಿಸಿದ ನಂತರ ಹೇಳಿದಳು. ಇವಳು ನನಗೆ ಸಿಗುವ ಮುನ್ನ ನಗರದ ಕಾಫಿ ಡೇ ಒಂದರಲ್ಲಿ ಕೆಲಸಕ್ಕಿದ್ದಳು. ಆಗ ಅಲ್ಲಿನ ಸಿಬ್ಬಂದಿಯೋರ್ವ ತಂಗಿ ಮದುವೆಯ ಕಾರಣ ನೀಡಿ ಇವಳ 12 ಸಾವಿರದ ಚಿನ್ನದ ಸರ ಪಡೆದಿದ್ದ. ತೀರಾ ಪಾಪ-ಪುಣ್ಯದ ಲೆಕ್ಕಾಚಾರ ಹಾಕುವ ಕಾವ್ಯ ಸ್ವಲ್ಪವೂ ಯೋಚಿಸದೆ ಸರವನ್ನು ಆತನ ಕೈಗಿಟ್ಟಿದ್ದಳು. ಆದರೆ ಈಗ ಆತ ನಾಪತ್ತೆಯಾಗಿದ್ದಾನೆ. ಕಾವ್ಯ ಮನೆಯಲ್ಲಿ ಪ್ರತೀ ಬಾರಿ ಹೋದಾಗಲೂ ಚಿನ್ನದ ಸರ ಕೇಳ್ತಾರೆ. ಹೋದಾಗಲೆಲ್ಲಾ ಸರ ಹಾಸ್ಟೆಲ್ನಲ್ಲಿದೆ ಎಂದು ಹೇಳುತ್ತಿದ್ದ ಕಾವ್ಯಗೆ ಇನ್ನೊಮ್ಮೆ ಬರುವಾಗ ತರಲೇ ಬೇಕು ಎಂದು ಮನೆಯಲ್ಲಿ ಹೇಳಿದ್ದಾರೆ. ಫೋನ್ ಮಾಡಿದಾಗಲೂ ಮನೆಯಲ್ಲಿ ಸರದ ವಿಚಾರ ತೆಗೆಯುತ್ತಿದ್ದರು. ಹಾಗಾಗಿ ಇನ್ನು ನಾನು ಮನೆಗೆ ಹೋಗುವುದೇ ಇಲ್ಲ ಅಂತ ನನ್ನ ಬಳಿ ನೋವು ತೋಡಿಕೊಂಡಿದ್ದಳು. ಈ ವೇಳೆ ನನಗೆ ಏನು ಮಾಡುವುದೆಂದೇ ತೋಚಲಿಲ್ಲ. ಆದರೂ ಕಾವ್ಯಾಳನ್ನು ಸಮಾಧಾನಿಸಿ, ಸರ ಪಡೆದವನನ್ನು ಹುಡುಕುವ ಭರವಸೆ ನೀಡಿದೆ. ಅವನ ನಂಬರ್ ಪಡೆದು ಹುಡುಕುವ ಪ್ರಯತ್ನವನ್ನೂ ಮಾಡಿದೆ. ಆದರೆ ನಂಬರ್ ಸ್ವಿಚ್ ಆಫ್ ಆಗಿತ್ತು, ವಿಳಾಸ ಹುಡುಕೋಣವೆಂದರೆ ಸಿಮ್ ಕಾಡರ್್ಗೆ ಕೊಟ್ಟ ಅಡ್ರೆಸ್ ಕೂಡ ನಕಲಿಯಾಗಿತ್ತು. ಹಾಗಾಗಿ ನನ್ನ ಎಲ್ಲಾ ಪ್ರಯತ್ನವೂ ವಿಫಲವಾಯಿತು. ಹೀಗಾಗಿ ನಾನೇ ಒಂದೆರೆಡು ತಿಂಗಳು ಬಿಟ್ಟು ಸರ ತೆಗೆದುಕೊಡುವುದಾಗಿ ಹೇಳಿದೆ. ಆದರೆ ಕಾವ್ಯ ನನ್ನ ವಿಚಾರದಲ್ಲಿ, ಅದರಲ್ಲೂ ಹಣದ ವಿಚಾರದಲ್ಲಿ ತುಂಬಾ ರಿಸವರ್್ ಆಗಿದ್ದವಳು. ಹಾಗಾಗಿ ನನ್ನ ಬಳಿ ಸರ ಪಡೆಯುವುದು ಅವಳಿಗೆ ಇಷ್ಟವಿರಲಿಲ್ಲ. ಕೊನೆಗೆ ಅವಳೇ, ಪರವಾಗಿಲ್ಲ...ಅವನ ಫೋನ್ ಆನ್ ಆದ ನಂತರ ನೋಡಿದರಾಯಿತು ಅಂದಳು. ಮನೆಗೆ ಹೋಗ್ಬೇಕು ಅಂದಿದ್ದಕ್ಕೆ ಆಯ್ತು ಅಂದವಳೇ,,,,,ತನ್ನ ಗುಳಿ ಕೆನ್ನೆಯ ನಗು ಚೆಲ್ಲಿದಳು. ಆ ನಂತರ ತಿಂಗಳು ಕಳೆದರೂ ಕಾವ್ಯ ನನ್ನ ಬಳಿ ಸರದ ವಿಚಾರ ತೆಗೆಯಲೇ ಇಲ್ಲ. ಹಿಂದಿನಂತೆ ನಮ್ಮಿಬ್ಬರ ಪ್ರೀತಿ ಯಾವುದೆ ಅಡೆತಡೆ ಇಲ್ಲದೇ ಸಾಗಿತ್ತು. ದಿನಕಳೆದಂತೆ ನಾವಿಬ್ಬರೂ ತೀರಾ ಹತ್ತಿರವಾಗಿದ್ದೆವು. ಕಾವ್ಯ ನನ್ನನ್ನು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದಳು.
ಒಂದು ತಿಂಗಳ ನಂತರ ಅದೊಂದು ದಿನ ಶನಿವಾರ. ಎಂದಿನಂತೆ ಕಾವ್ಯ ರಾತ್ರಿ ಕರೆ ಮಾಡಿದ್ದಳು. ಕರೆ ಮಾಡಿದವಳೇ ನಾಳೆ ಭಾನುವಾರ ದೇವಸ್ಥಾನಕ್ಕೆ ಹೋಗೋಣವಾ ಅಂದಿದ್ದಳು. ಪ್ರತೀ ಬಾರಿ ನಾನೇ ಕಾವ್ಯಳನ್ನು ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದೆ. ಆದರೆ ಇದೇ ಮೊದಲ ಬಾರಿಗೆ ಕಾವ್ಯ ನನ್ನ ಬಳಿ ದೇವಸ್ಥಾನಕ್ಕೆ ಹೋಗೋಣವಾ ಅಂದಿದ್ದಳು. ನನಗೆ ಆಶ್ಚರ್ಯವಾದರೂ, ಕಾವ್ಯಳಿಗೆ ನಿರಾಶೆ ಮಾಡದ ನಾನು ಒಪ್ಪಿದ್ದೆ. ಮರುದಿನ ಭಾನುವಾರ ಬೆಳಿಗ್ಗೆ 8.30ಕ್ಕೆ ಅವಳ ಹಾಸ್ಟೆಲ್ ಬಳಿಗೆ ಹೋದೆ. ನಾನು ಕೊಟ್ಟ ನೀಲಿ ಕೆಂಪು ಬಣ್ಣದ ಚೂಡಿದಾರ ತೊಟ್ಟ ಕಾವ್ಯ ನನಗಾಗಿ ಕಾಯುತ್ತಿದ್ದಳು. ಆವತ್ತು ಎಂದಿಗಿಂತಲೂ ನನ್ನ ಕಣ್ಣಿಗೆ ಅಂದವಾಗಿ ಕಂಡಿದ್ದಳು ಕಾವ್ಯ. ಅಲ್ಲಿಂದ ನನ್ನ ಬೈಕ್ನಲ್ಲಿ ಕೂರಿಸಿ ನಮ್ಮಿಬ್ಬರ ಫೇವರೇಟ್ ದೇವಸ್ಥಾನದತ್ತ ಸಾಗಿದೆವು. ಇಲ್ಲೂ ಯಥಾವತ್ತಾಗಿ ಎಂದಿನಂತೆ ಇಬ್ಬರ ಹೆಸರಿನಲ್ಲೂ ಕುಂಕುಮಾರ್ಚನೆ ಮಾಡಿಕೊಂಡೆವು. ಹೀಗಿರುವಾಗಲೇ ಕಾವ್ಯಾಳ ವರ್ತನೆಯಲ್ಲಾದ ಸಣ್ಣದೊಂದು ಬದಲಾವಣೆ ನನಗೆ ಸಾಕಷ್ಟು ಆಶ್ಚರ್ಯ ತರಿಸಿತ್ತು. ಯಾವತ್ತೂ ನಾನು ಹೇಳಿದಂತೆ ದೇವಸ್ಥಾನದಲ್ಲಿ ವತರ್ಿಸುತ್ತಿದ್ದ ಕಾವ್ಯ ಅಂದು ಮಾತ್ರ ಸಾಕಷ್ಟು ಬದಲಾದಂತೆ ಕಂಡಳು. ದೇವರ ಮುಂದೆ ನಿಂತು ನೀವೇ ನನಗೆ ಕುಂಕುಮ ಇಡಿ ಅಂದಿದ್ದಳು ಕಾವ್ಯ! ನಿಜಕ್ಕೂ ಅಂದು ಆಶ್ಚರ್ಯ ಪಡುವ ಸರದಿ ನನ್ನದು. ಅಲ್ಲಿಯ ತನಕ ಕಾವ್ಯಾಳಿಂದ ಇಂಥದ್ದೊಂದು ಕೋರಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೆ ಕಾವ್ಯಾಳನ್ನು ತುಂಬಾ ಇಷ್ಟ ಪಡುವ ನಾನು, ಬಾಳ ಸಂಗಾತಿ ಎಂದೇ ಅಂದುಕೊಂಡಿದ್ದ ಕಾರಣ ಕುಂಕುಮ ಪಡೆದು ಅವಳ ಹಣೆಗಿಟ್ಟಿದ್ದೆ. ಆಗಲೂ ಅಷ್ಟೇ, ಭಾವುಕತೆ ತುಂಬಿದ ಗುಳಿಕೆನ್ನೆಯ ನಗುವೊಂದು ಅವಳಿಂದ ಹೊರಹೊಮ್ಮಿತ್ತು. ನಂತರ ಅಲ್ಲಿಂದ ಹೊರ ಬಂದವನೇ ಎಂದಿನಂತೆ ಕಾವ್ಯಾಳ ಬಳಿ ಹೊಟೇಲ್ಗೆ ಹೋಗೋಣವಾ ಅಂದೆ. ಪ್ರತೀ ಬಾರಿ ಇವಳಲ್ಲಿ ಈ ರೀತಿ ಕೇಳಿದರೆ ಬರುತ್ತಿದ್ದ ಉತ್ತರ ಬೇಡ ಎನ್ನುವುದು. ತುಂಬಾ ಸ್ವಾಭಿಮಾನಿಯಾದ ಕಾವ್ಯಾ ನನ್ನಲ್ಲಿ ಹಣ ಖಚರ್ು ಮಾಡಿಸುತ್ತಿರಲಿಲ್ಲ. ಆಗೆಲ್ಲಾ ನಾನೇ ಬಲವಂತದಿಂದ ಕರೆದೊಯ್ಯುತ್ತಿದ್ದೆ. ಆದರೆ ಅಂದು ಮಾತ್ರ ಸ್ವತಃ ಅವಳೇ ನನಗೆ ಜ್ಯೂಸ್ ಬೇಕು ಅಂತ ಕೇಳಿದ್ದಳು. ಅಲ್ಲಿಗೆ ಕಾವ್ಯಾಳ ವರ್ತನೆಯಲ್ಲಾದ ಎರಡನೆಯ ಬದಲಾವಣೆಯ ಅರಿವು ನನಗಾಯಿತು. ಹಾಗಾಗಿ ಅವಳೊಂದಿಗೆ ಅಲ್ಲೇ ಇದ್ದ ಹೊಟೇಲ್ಗೆ ಹೋದೆ. ಅಲ್ಲಿಯ ತನಕ ಕಾವ್ಯಾ ಯಾವತ್ತೂ ತನಗೆ ಇಷ್ಟವಾದ ತಿಂಡಿ ಕೇಳಿದವಳಲ್ಲ. ಆದರೆ ಅಂದು ಮಾತ್ರ ತನಗಿಷ್ಟದ ತಿಂಡಿ ಕೇಳಿದ್ದಳು. ತಿಂಡಿ ಬಂದ ತಕ್ಷಣ ಮೊದಲ ತುತ್ತು ನನ್ನ ಬಾಯಿಗಿಟ್ಟವಳೇ ತನ್ನ ಮಕ್ಕಳಾಟದ ನಗು ಚೆಲ್ಲಿದಳು. ಈ ತುತ್ತು ಇವಳಿಂದ ಪಡೆದ ಮೊದಲ ತುತ್ತಾಗಿತ್ತು. ನನ್ನಲ್ಲೂ ಒಂದು ಹಂತಕ್ಕೆ ಪ್ರೀತಿ ತುಂಬಿದ ನಗು ಹೊರ ಹೊಮ್ಮಿತ್ತು. ಇನ್ನು ಜ್ಯೂಸ್ ಬಂದಾಗಲೂ ಅರ್ಧ ಕುಡಿದು ಉಳಿದರ್ಧ ನೀವು ಕುಡಿಯಿರಿ ಅಂದಳು. ಅಂದು ಯಾಕೋ ಗೊತ್ತಿಲ್ಲ, ಹೆಚ್ಚು ಮಾತನಾಡುವ ನಾನು ಮಾತ್ರ ಸುಮ್ಮನಾಗಿದ್ದೆ. ಕಾವ್ಯಾಳ ಪ್ರೀತಿ ಕಂಡು ಅತೀ ಭಾವುಕನಾಗಿದ್ದೆ. ಅವಳ ಪ್ರತಿಯೊಂದು ಅಜ್ಞೆಗಳನ್ನೂ ಚಾಚೂ ತಪ್ಪದೇ ಪಾಲಿಸುತ್ತಿದ್ದೆ. ಹೀಗೆ ತಿಂಡಿ ತಿಂದ ನಂತರ ಕಾವ್ಯಾಳನ್ನು ಅವಳ ಕೆಲಸಕ್ಕೆ ಬಿಟ್ಟು ಮನೆಗೆ ತೆರಳಿದೆ (ಬಟ್ಟೆ ಅಂಗಡಿಯಲ್ಲಿದ್ದ ಕಾರಣ ಕಾವ್ಯಾಗೆ ಭಾನುವಾರವೂ ಕೆಲಸವಿತ್ತು. ಎಲ್ಲೋ ಕೆಲವೊಮ್ಮೆ ರಜೆ ಹಾಕುತಿದ್ದಳು) ಅಂದು ಮಾತ್ರ ನಾನು ಸಾಕಷ್ಟು ಮೌನಿಯಾಗಿದ್ದೆ. ಯಾವತ್ತೂ ಅಷ್ಟು ಚಟುವಟಿಕೆಯಿಂದಿರದ ಕಾವ್ಯಾ ಮಾತ್ರ ಅಂದು ನನ್ನನ್ನು ಸ್ವಲ್ಪ ಹೆಚ್ಚೇ ಎನ್ನುವಂತೆ ಪ್ರೀತಿಸಿದ್ದಳು.
ಅಂದು ಮಧ್ಯಾಹ್ನವೂ ಅವಳ ಕಾಲ್ ಎಂದಿನಂತೆ ಬಂದಿತ್ತು. ರಾತ್ರಿಯೂ ಕಾಲ್ ಮಾಡಿ ಮುಕ್ಕಾಲು ಘಂಟೆ ಹರಟೆ ಹೊಡೆದಿದ್ದಳು. ಆವಾಗೆಲ್ಲಾ ಕಾವ್ಯಾಳ ವರ್ತನೆಯಲ್ಲಿ ಏನೋ ಒಂದು ಬದಲಾವಣೆಯಿತ್ತು. ಆದರೆ ತುಂಬಾ ಖುಷಿಯಾಗಿದ್ದ ಕಾರಣ ನಾನೂ ಪ್ರಶ್ನಿಸುವ ಗೋಜಿಗೆ ಕೈ ಹಾಕಲಿಲ್ಲ. ಅಲ್ಲಿಗೆ ಅದೊಂದು ಭಾನುವಾರ ನನ್ನ ಪಾಲಿಗೆ ವಿಶೇಷ ದಿನವಾಗಿ ಮುಗಿದು ಹೋಗಿತ್ತು.
ಮರುದಿನ ಸೋಮವಾರ ಸಮಯ ಸುಮಾರು 7.35. ನಾನಿನ್ನೂ ಎದ್ದಿರಲಿಲ್ಲ. ಅದಾಗಲೇ ಕಾವ್ಯಾಳ ಕರೆಗೆ ನನ್ನ ಫೋನ್ ರಿಂಗಣಿಸುತ್ತಿತ್ತು. ಅವಳಿಗಾಗಿಯೇ ಬೇರೊಂದು ರಿಂಗ್ಟೋನ್ ಇಟ್ಟಿದ್ದ ನಾನು ಅದನ್ನು ಕೇಳಿಯೇ ಎಚ್ಚರವಾಗಿದ್ದೆ. ಆಗಳೂ ನನಗೊಂದು ಆಶ್ಚರ್ಯ ಕಾದಿತ್ತು. ನಾವಿಬ್ಬರೂ ಪ್ರೀತಿಸಿದ ಇದೇ ಮೊದಲ ಬಾರಿಗೆ ಕಾವ್ಯ ಅಷ್ಟು ಬೆಳಿಗ್ಗೆ ಕಾಲ್ ಮಾಡಿದ್ದು. ಯಾಕೆಂದರೆ ಏಳರಿಂದ ಓಂಭತ್ತು ಗಂಟೆ ಅವಳ ಕಂಪ್ಯೂಟರ್ ಕ್ಲಾಸ್ ಸಮಯ. ಆಗೆಲ್ಲಾ ಕಾವ್ಯ ಯಾರಿಗೂ ಕಾಲ್ ಮಾಡೋದಿಲ್ಲ. ಆದರೆ ಅಂದು ಮಾತ್ರ ಅದು ಕಾವ್ಯಳದ್ದೇ ಕಾಲ್!
ಎದ್ದವನೇ ಫೋನ್ ಎತ್ತಿದೆ. ಗುಡ್ಮಾನರ್ಿಂಗ್ ಅಂದವಳೇ ಮಾತಿಗಿಳಿದಳು ಕಾವ್ಯ. ಏನಮ್ಮಾ ಇವತ್ತು ಕ್ಲಾಸ್ ಇಲ್ವಾ? ಅಂತ ಕೇಳಿದೆ. ಇವತ್ತು ನಾನು ಕ್ಲಾಸ್ ಮತ್ತು ಕೆಲಸಕ್ಕೆ ರಜೆ. ಗುರುವಾರ ನನ್ನ ಕಸೀನ್ ಮದುವೆ ಇದೆ, ಅದಕ್ಕೆ ಸೀರೆ ಖರೀದಿಸಲಿಕ್ಕೆ ಇದೆ ಅಂದಳು. ಗುರುವಾರ ಕಸೀನ್ ಮದುವೆ ಇದೆ ಎನ್ನುವುದನ್ನು ಈ ಮೊದಲೇ ನನಗೆ ತಿಳಿಸಿದ್ದ ಕಾರಣ ನಾನೂ ಆಗಿರಬಹುದು ಅಂದುಕೊಂಡೆ. ಸೀರೆ ಖರೀದಿಗೆ ನಾನೂ ಬರ್ತೀನಿ ಅಂದೆ. ಆಗ ಅವಳು, ಬೇಡ....ನೀವು ಮಧ್ಯಾಹ್ನ 1.30ಕ್ಕೆ ಹಾಸ್ಟೆಲ್ ಹತ್ತಿರ ಬನ್ನಿ ಸಿಗ್ತೀನಿ ಅಂದಳು. ಆಗಲೀ ಅಂದವನೇ ಯಾವ ಬಣ್ಣದ ಸೀರೆ ತೆಗಿತೀಯಾ ಅಂತ ಕೇಳಿದೆ. ಆಗ ಅವಳು ಕೊಟ್ಟ ಉತ್ತರ ನಿಜಕ್ಕೂ ನನಗೆ ಮತ್ತೊಂದು ಆಘಾತ ತಂದಿತ್ತು...! ಬಿಳಿ ಬಣ್ಣದ ಸೀರೆ ಅಂತ ಹೇಳಿದ್ದ ಪ್ರಮಿಯ ಉತ್ತರ ಕೇಳಿ ನನಗೆ ದಂಗು ಬಡಿದಿತ್ತು. ಬೇಡಮ್ಮಾ ಬಿಳಿ ಬಣ್ಣದ ಸೀರೆ ಒಳ್ಳೆಯದಲ್ಲ, ಬೇರೆ ತೆಗಿ ಅಂದೆ. ಓಕೆ ಆಯ್ತು, ಬೇರ ತೆಗೀತೀನಿ, ನಿಮ್ಮ ಇಷ್ಟಕ್ಕೆ ಯಾವತ್ತೂ ವಿರುದ್ದವಾಗಿ ಹೋಗೋಲ್ಲ ಅಂದಳು. ಎಲ್ಲದಕ್ಕೂ ಆಯಿತು ಅಂದ ನಾನು ಮಧ್ಯಾಹ್ನ ಸಿಗೋದಾಗಿ ಹೇಳಿದೆ.
ಹೀಗೆ ಅಂದಿನ ನನ್ನೆಲ್ಲಾ ನಿತ್ಯ ಕರ್ಮಗಳನ್ನು ಮುಗಿಸಿ 12 ಗಂಟೆಗೆ ಮನೆಯಿಂದ ಹೊರಟೆ. ಸುಮಾರು ಒಂದು ಗಂಟೆಯ ಹೊತ್ತಿಗೆಲ್ಲಾ ಕಾವ್ಯಾಳ ಹಾಸ್ಟೆಲ್ ತಲುಪಿದ್ದೆ. ತಲುಪಿದವನೇ ಅವಳಿಗೊಂದು ಕಾಲ್ ಕೊಟ್ಟೆ. ಆದರೆ ಕಾವ್ಯಾಳ ನಂಬರ್ ಸ್ವಿಚ್ ಆಫ್ ಆಗಿತ್ತು. ಎಲ್ಲೋ ಬ್ಯಾಟರಿ ಚಾಜರ್್ ಖಾಲಿಯಾಗರಬೇಕು ಅಂದುಕೊಂಡು ಸರಿಸುಮಾರು ಒಂದು ಘಂಟೆ ಅಲ್ಲೇ ಕಾದೆ. ಆದರೂ ಕಾವ್ಯ ಕಾಣಿಸಲಿಲ್ಲ. ಮತ್ತೆ ಕಾಲ್ ಮಾಡಿದಾಗಳೂ ಫೋನ್ ಸ್ವಿಚ್ ಆಫ್ ಆಗಿತ್ತು. ಆ ವೇಳೆಗಾಗಲೇ ಒಂದಷ್ಟು ಆತಂಕ ನನ್ನಲ್ಲಿ ಮನೆ ಮಾಡಿತ್ತು. ಯಾಕೆಂದರೆ ಅಲ್ಲಿಯವರೆಗೆ ಕಾವ್ಯ ಬರ ಹೇಳಿ ಕಾಯಿಸಿದವಲಲ್ಲ, ಫೋನ್ ಸ್ವಿಚ್ ಆಫ್ ಮಾಡಿಕೊಂಡವಳೂ ಅಲ್ಲ. ಹಾಗಾಗಿ 2.30ರ ವೇಳೆಗೆ ನೇರವಾಗಿ ಅವಳ ಹಾಸ್ಟೆಲ್ಗೆ ಹೋಗಿ ವಾರ್ಡನ್ ಬಳಿ ವಿಚಾರಿಸಿದೆ. ಆದರೆ ವಾರ್ಡನ್ ಕೊಟ್ಟ ಉತ್ತರ ನನ್ನನ್ನು ಇನ್ನಷ್ಟು ಆತಂಕಿತನನ್ನಾಗಿ ಮಾಡಿತ್ತು. ಬೆಳಿಗ್ಗೆ ಹೋದ ಕಾವ್ಯ ಇನ್ನೂ ಹಾಸ್ಟೆಲ್ಗೆ ಬಂದಿಲ್ಲ ಅಂದಿದ್ದರು ಅವರು. ಅಲ್ಲಿಂದ ಹೊರಟವನೇ ಕಾವ್ಯಳ ಎಲ್ಲಾ ಗೆಳೆತಿಯರಿಗೆ ಫೋನ್ ಮಾಡಿದೆ. ಆದರೆ ಯಾರಿಂದಲೂ ಇವಳ ಬಗ್ಗೆ ಸಮರ್ಪಕ ಉತ್ತರ ಮಾತ್ರ ದೊರೆಯಲಿಲ್ಲ. ಕಾವ್ಯ ಕೆಲಸ ಮಾಡುವಲ್ಲಿಗೆ ಹೋಗೋಣವೆಂದರೆ, ನಾನು ಕೆಲಸಕ್ಕೆ ಹೋಗೋದಿಲ್ಲ ಇವತ್ತು ರಜೆ ಅಂತ ಕಾವ್ಯ ಬೆಳಿಗ್ಗೆ ಫೋನ್ ಮಾಡಿದಾಗ ಹೇಳಿದ್ದಳು. ಹಾಗಾಗಿ ಮತ್ತೆ ಸಮಸ್ಯೆ ಸೃಷ್ಟಿಸುವುದು ಬೇಡ ಎಂದು ಸುಮ್ಮನಾದೆ. ಹೀಗೆ ಸಂಜೆ ಆರರವರೆಗೂ ಇವಳಿಗಾಗಿ ಇಡೀ ಮಂಗಳೂರು ಸುತ್ತಿದ್ದೆ. ಆದರೆ ಕಾವ್ಯ ಮಾತ್ರ ಎಲ್ಲೂ ಸಿಗಲೇ ಇಲ್ಲ. ಸಂಜೆಯ ಹೊತ್ತಿಗಾಗಲೇ ಕಾವ್ಯ ಮೊಬೈಲ್ಗೆ ನೂರಕ್ಕೂ ಹೆಚ್ಚು ಕಾಲ್ ಮಾಡಿದ್ದೆ. ಆದರೆ ಉತ್ತರ ಮಾತ್ರ ಸ್ವಿಚ್ ಆಫ್. ಹುಡುಕಿ ಹುಡುಕಿ ಸುಸ್ತಾಗಿ ಮನಸ್ಸಿಲ್ಲದ ಮನಸ್ಸಿನಿಂದ ನನ್ನ ಪತ್ರಿಕೆಯ ಕೆಲಸಕ್ಕೆ ಹೋದೆ. ಇಲ್ಲೂ ಅಷ್ಟೇ, ಒಂಚೂರು ಕೆಲಸ ಮಾಡುವ ಮನಸ್ಸು ನನಗಿರಲಿಲ್ಲ. ರಾತ್ರಿ ಎಂಟು ಗಂಟೆಗೆ ಕಾವ್ಯ ರೂಮ್ಮೇಟ್ಗೆ ಕರೆ ಮಾಡಿದಾಗಲೂ ಅವಳು ಹಾಸ್ಟೆಲ್ಗೆ ಬಂದಿರಲಿಲ್ಲ. ಅಂದು ಹತ್ತು ಗಂಟೆಗೆಲ್ಲಾ ನನ್ನ ಅರ್ಧರ್ಧ ಕೆಲಸ ಮುಗಿಸಿ ಮನೆಗೆ ತೆರಳಿದ್ದೆ. ಊಟ ಮಾಡದೆ ಹಾಗೇ ಮಲಗಿದ ನನಗೆ ಕಾವ್ಯ ಎಲ್ಲಿ ಹೋಗಿರಬಹುದು ಎಂಬ ಚಿಂತೆ ಕಾಡುತ್ತಿತ್ತು. ಮಲಗಿದ್ದರೂ ನಿದ್ರೆ ಬಂದಿರಲಿಲ್ಲ. ಹೇಗೋ ಸೋಮವಾರ ಕಳೆದು ಮಂಗಳವಾರದ ಸೂರ್ಯ ಬಾನಿಗೆ ಬಂದಿದ್ದ. ಬೆಳಿಗ್ಗೆ ಎದ್ದವನೇ ಮತ್ತೆ ಕಾವ್ಯಳ ಮೊಬೈಲ್ಗೆ ಕಾಲ್ ಮಾಡಿದ್ದೆ. ಆಗಲೂ ಸ್ವಿಚ್ ಆಫ್. ಮತ್ತೆ ಅಲ್ಲಿಂದ ಓಂಭತ್ತು ಗಂಟೆಗೆ ಅವಳ ಕಂಪ್ಯೂಟರ್ ಕ್ಲಾಸ್ ಮತ್ತು ಕೆಲಸ ಮಾಡುವ ಬಟ್ಟೆ ಅಂಗಡಿಗೆ ಹೋದಾಗಲೂ ಕಾವ್ಯ ಸಿಗಲಿಲ್ಲ. ಹೀಗೇ ಹುಡುಕಾಟ ನಡೆಸಿ ಸಮಯ ಮಧ್ಯಾಹ್ನ 12 ದಾಟಿತ್ತು. ಆದರೆ ಕಾವ್ಯ ಮಾತ್ರ ಸಿಗಲೇ ಇಲ್ಲ. ಗೆಳತಿಯ ಮೂಲಕ ಕಾವ್ಯಾಳ ಮನೆಗೆ ಕಾಲ್ ಮಾಡಿಸಿ ಕೇಳಿದಾಗಲೂ ಅವಳು ಅಲ್ಲಿಲ್ಲ ಅನ್ನುವ ಉತ್ತರ ಬಂದಿತ್ತು. ಅಂದು ಮಾತ್ರ ನಾನು ಸಂಪೂರ್ಣ ಸೊರಗಿ ಹೋಗಿದ್ದೆ. ಒಂದು ದಿನವೂ ಅವಳ ಬಳಿ ಮಾತನಾಡದೇ ಇರುತ್ತಿರದ ನಾನು ಅಂದು ನಿಸ್ಸಾಯಕನಾಗಿ ಹೋದೆ, 4 ಗಂಟೆಗಲ್ಲಾ ನನ್ನ ಪತ್ರಿಕಾ ಕಛೇರಿಗೆ ಹೋಗಿ ಒಬ್ಬಂಟಿಯಾಗಿ ಒಂದು ಕೋಣೆಯಲ್ಲಿ ಟೇಬಲ್ಗೆ ತಲೆಯಿಟ್ಟು ಮಲಗಿದೆ. ಅವಳ ಯೋಚನೆಯಲ್ಲೇ ಒಂದು ಗಂಟೆ ಕಳೆದು ಹೋಗಿತ್ತು. ಮತ್ತೆ ಐದು ಘಂಟೆಗೆ ಕಾವ್ಯಾಳ ಮೊಬೈಲ್ಗೆ ಕಾಲ್ ಮಾಡೋಣ ಅಂದುಕೊಂಡು ಅವಳ ನಂಬರ್ ಡಯಲ್ ಮಾಡಿದೆ. ಏನಶ್ಚರ್ಯವೋ, ಅವಳ ಮೊಬೈಲ್ ರಿಂಗಣಿಸಿತು. ಅಂದು ಹೋದ ಜೀವ ಮತ್ತೆ ಬಂದಂತಾಗಿತ್ತು. ಕಾವ್ಯಾ ಬೇಗ ಫೋನ್ ಎತ್ತಮ್ಮ ಅಂದುಕೊಳ್ಳುತ್ತಿರುವಾಗಲೇ ಗಂಡಸಿನ ಧ್ವನಿಯೊಂದು ಫೋನ್ ಎತ್ತಿಕೊಂಡಿತು. ಒಮ್ಮೆಲೇ ಶಾಕ್ ಆಯಿತಾದರೂ ಸಾವರಿಸಿಕೊಂಡು ಹಲೋ ಅಂದಾಗ, ಅಘಾತಕಾರಿ ವಿಚಾರವೊಂದು ನನ್ನ ಪ್ರಜ್ಞೆ ತಪ್ಪಿಸಿದಂತಾಯಿತು. ಅಲ್ಲಿಂದ ಮಾತನಾಡಿದ ವ್ಯಕ್ತಿ ಪೊಲೀಸರಾಗಿದ್ದರು...! ಈ ಹುಡುಗಿ ನಿಮಗೆ ಗೊತ್ತಾ? ಇವಳ ಮನೆ ಎಲ್ಲಿ? ಹೆಸರೇನು? ಅಂತ ಕೇಳಿದರು. ಅದೆಲ್ಲಾ ಗೊತ್ತು ಸಾರ್, ಅವಳಿಗೆ ಏನಾಯ್ತು ಅಂತ ಕೇಳಿದೆ. ಆಗಲೇ ಗೊತ್ತಾಗಿದ್ದು, ಕಾವ್ಯ ತನ್ನ ಇಹಲೋಕದ ಪಯಣ ಮುಗಿಸಿದ್ದಾಳೆ ಅನ್ನುವುದು....!
ಇದರ ಜೊತೆಗೆ ನನ್ನೊಂದಿಗಿನ ಪ್ರೀತಿಗೂ ಕಾವ್ಯ ಶಾಶ್ವತ ಇತೀಶ್ರೀ ಹಾಡಿದ್ದಳು. ನಗರದ ಪಾಕರ್್ ಒಂದರಲ್ಲಿ ನಾನು ತೆಗೆಸಿಕೊಟ್ಟಿದ್ದ ಚೂಡಿದಾರದ ಶಾಲಿನಿಂದ ನೇಣು ಮುಗಿದು ಕಾವ್ಯ ತನ್ನ ಪಯಣ ಮುಗಿಸಿದ್ದಳು. ಎಲ್ಲವನ್ನೂ ಕೇಳಿದ ನನಗೆ ಒಂಟಿ ಪಯಣದಲ್ಲಿ ದೋಣಿ ಮುಳುಗಿದ ಅನುಭವ. ಕಾರಣ ಹೇಳದೆ ಕಾವ್ಯ ದೂರವಾಗಿದ್ದಳು.
ಕಾವ್ಯ ದೂರವಾಗುವ ಮುನ್ನ ಸ್ವಲ್ಪ ಹೆಚ್ಚೇ ಎನ್ನುವಂತೆ ನನ್ನ ಜೊತೆ ಬೆರೆತಿದ್ದಳು. ಪ್ರೀತಿಗೆ ಅಂತಿಮ ಸ್ಪರ್ಶ ನೀಡುವಂತೆ ನನ್ನ ಕೈಯಿಂದಲೇ ಹಣೆಗೆ ಕುಂಕುಮ ಇರಿಸಿದ್ದಳು, ಬೆಳಿಗ್ಗಿನ ಉಪಹಾರವನ್ನೂ ನನ್ನ ಬಾಯಿಗಿಟ್ಟು ಹಂಚಿಕೊಂಡು ತಿಂದಿದ್ದಳು. ತನ್ನ ವರ್ತನೆಯಲ್ಲೇ ಸಾಕಷ್ಟು ಬದಲಾವಣೆ ಮಾಡಿಕೊಂಡು ಕಡೆಯ ಕ್ಷಣಗಳನ್ನು ನನ್ನ ಜೊತೆ ಕಳೆದಿದ್ದಳು ಕಾವ್ಯ. ಜೀವನದಲ್ಲಿ ಎಲ್ಲವನ್ನೂ ಅಥರ್ೈಸಿಕೊಂಡವಳಂತೆ ನನ್ನ ಎದುರಿಗೆ ನಿಂತಿದ್ದಳು. ಆದರೆ ಒಂದು ಕ್ಷಣವೂ ಭಾವುಕಳಾಗದೆ ಮರುದಿನವೇ ನನ್ನ ಜೊತೆಗಿನ ಮಾತಿಗೆ ಶಾಶ್ವತ ಇತೀಶ್ರೀ ಹಾಡಿದ್ದಾಳೆ. ಸೀರೆ ಖರೀದಿಸುವಾಗಲೂ ಬಿಳಿ ಸೀರೆಯನ್ನೇ ಆಯ್ದುಕೊಂಡಿದ್ದ ಕಾವ್ಯಾ, ಆಗಲೇ ತನ್ನ ಬದುಕಿನ ಪುಟಗಳಿಗೆ ಇತೀಶ್ರೀ ಹಾಡುವ ನಿಧರ್ಾರಕ್ಕೆ ಬಂದಿದ್ದಳು ಎನ್ನುವುದು ನಂತರ ನನಗೆ ಸ್ಪಷ್ಟವಾಗಿತ್ತು. ಬದುಕನ್ನು ಅಷ್ಟು ಸೀರಿಯಸ್ ಅಂದುಕೊಳ್ಳದಿದ್ದರೂ ಒಂದಷ್ಟು ಸೆನ್ಸಿಟಿವ್ ಆಗಿದ್ದವಳು ಕಾವ್ಯ. ಆದರೆ ಈಗ ಕಾವ್ಯಾ ದೂರವಾಗಿದ್ದಾಳೆ. ಕಾಣದ ಲೋಕಕ್ಕೆ ಒಬ್ಬಂಟಿ ಪಯಣಿಗಳಾಗಿ ಹೆಜ್ಜೆಯಿಟ್ಟಿದ್ದಾಳೆ. ಆದರೆ ದೂರವಾದಾಗ ಮಾತ್ರ ಕಾರಣ ಹೇಳದೆ ಮಾಯವಾಗಿದ್ದಾಳೆ. ತನ್ನ ಕೊನೆಯ ಭೇಟಿಯಲಿ ಕಾವ್ಯಾ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ......
ಕಾವ್ಯಾಳ ಸಾವಿಗೆ ಕಾರಣ ಹುಡುಕಿ ಹೊರಟಾಗ ಸಾಕಷ್ಟು ವಿಚಾರಗಳು ಚಚರ್ೆಯಾದವು. ಮರುದಿನ ಕಸೀನ್ ಮದುವೆಯಿದ್ದ ಕಾರಣ ಆಕೆಗೆ ಅದೊಂದು ಚಿನ್ನದ ಸರದ ಅವಶ್ಯಕತೆಯಿತ್ತು. ಹಾಗಾಗಿ ಅದಿಲ್ಲದೆ ಮನೆಗೆ ಹೋದರೆ ಮನೆಯವರು ಬೈಯುತ್ತಾರೆ ಎಂದು ಕಾವ್ಯಾ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸರ ಕಾವ್ಯಾಳ ಬದುಕು ಕಿತ್ತುಕೊಂಡಿತು........ಹೀಗೆ ಹತ್ತು ಹಲವು ಪ್ರಶ್ನೆಗಳು ಅವಳ ಸಾವಿನ ಸುತ್ತ ಗಿರಕಿ ಹೊಡೆದಿವೆ. ಪೊಲೀಸರು ಅಸ್ವಾಭಾವಿಕ ಮರಣ ಅಂತ ಹೇಳಿ ಆತ್ಮಹತ್ಯೆ ಪ್ರಕರಣ ದಾಖಲಿಸಿ ಫೈಲ್ ಕ್ಲೋಸ್ ಮಾಡಿದ್ದಾರೆ. ನನ್ನಿಂದ 60ಕಿ.ಮೀ ದೂರದ ಮಣ್ಣಿನಲ್ಲಿ ನಾನು ಪ್ರೀತಿಸುತ್ತಿದ್ದ ಜೀವವೊಂದು ಬೂದಿಯಾಗಿ ಹೋಗಿದೆ. ಕಾವ್ಯ ಹೋದ ಬಳಿಕ ಅವಳು ದೂರವಾದ ಬಗ್ಗೆ ಸಾಕಷ್ಟು ಚಚರ್ೆ ನಡೆದಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇವಳನ್ನು ನಾನು ಚಚರ್ೆಯ ವಸ್ತುವಾಗಿ ಬಳಸುವುದಿಲ್ಲ. ಆ ಜೀವ ನನ್ನನ್ನು ಪ್ರತೀ ಕ್ಷಣವೂ ಕಣ್ಣ ಮೇಲೆ ಕಣ್ಣಿಟ್ಟು ಕಾಯುತ್ತಿರುತ್ತದೆ. ಇದು ಅವಳ ಮೇಲಿನ ಭಯವಲ್ಲ. ಬದಲಾಗಿ ಆಕೆಯ ಮೇಲೆ ನಾನಿಟ್ಟಿದ್ದ ಪ್ರೀತಿ. ನನ್ನ ಜೊತೆಯಾದ ಕಾವ್ಯ ನನಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಕೊಟ್ಟದ್ದು....ಅಳಿಸಲಾಗದಷ್ಟು ಪ್ರೀತಿ ಮಾತ್ರ. ಪ್ರಮಿಯ ಮನಸ್ಸು ಕಾಣದ ಕಡಲಿಗೆ ಹಂಬಲಿಸಿ ದೂರವಾಗಿದೆ....ಎಲ್ಲೇ ಇದ್ದರೂ ನನ್ನವಳಾಗಿಯೇ ಇರು ಎಂದು ಆಶಿಸುತ್ತೇನೆ.............
ಈ ಕಥೆ ಕಾಲ್ಪನಿಕವಲ್ಲ. ಕೆಲ ತಿಂಗಳ ಹಿಂದಷ್ಟೇ ನನ್ನದೇ ಜೀವನದಲ್ಲಿ ನಡೆದ ನೈಜ ಘಟನೆ. ಆದರೆ ಕೆಲವೊಂದು ಕಾರಣಗಳಿಂದ ಇಲ್ಲಿರುವ ಹೆಸರುಗಳನ್ನು ಬದಲಾಯಿಸಿದ್ದೇನೆ. ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆಯೆಂಬ ಬಹುದೊಡ್ಡ ನಿಧರ್ಾರ ತಳೆಯುವ ಅದೇ ರೀತಿ ಮಕ್ಕಳನ್ನು ಹಾಸ್ಟೆಲ್ನಲ್ಲಿಟ್ಟು ಬೆಳೆಸುವ ಪ್ರತಿಯೊಬ್ಬರಿಗೂ ಈ ಘಟನೆ ಪಾಠವಾಗಲಿ ಎಂಬ ಆಶಯದಿಂದ ಇದನ್ನು ಬರೆಯುತಿದ್ದೇನೆ.
ಇಂತೀ ನಿಮ್ಮವ......
ಧ್ವನಿ.......