Thursday 27 October 2016

ಆ ಎರಡು ಗಂಟೆಯಲ್ಲಿ ಬಯಲಾಗಿತ್ತು `ಅವರ’ ಅಸಲಿಯತ್ತು!


ಭರತ್ ರಾಜ್
ವರದಿಗಾರ, ಬಿಟಿವಿ ನ್ಯೂಸ್, ಮಂಗಳೂರು

ಪತ್ರಕರ್ತನಾಗಿ ಆರು ವರ್ಷಗಳಲ್ಲಿ ಈವರೆಗೆ ಯಾರ ವಿರುದ್ದವೂ ಪೊಲೀಸ್ ಠಾಣೆಗೆ ದೂರು ಕೊಟ್ಟವನಲ್ಲ. ಸುದ್ದಿ ಮಾಡಲು ಹೋದಾಗ ಮತ್ತು ಸುದ್ದಿ ಮಾಡಿದ ನಂತರ ಅಷ್ಟೂ ಆತಂಕಗಳನ್ನು ಸಹಜ ಎಂಬಂತೆ ಎದುರಿಸಿದ್ದೆ. ಆದರೆ ಇವತ್ತು ಮಾತ್ರ ಅಂತಿಮವಾಗಿ `ಅವರ’ ವಿರುದ್ದ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಕೊನೆಗೂ ಪೊಲೀಸರು ಕೂಡ ಪ್ರಕರಣ ದಾಖಲಿಸಿದ್ದಾರೆ. ಮುಂದಿನದ್ದು ಕಾನೂನು ಹೋರಾಟವಷ್ಟೇ. ಹೌದು, ನಿನ್ನೆ ಸೂರಲ್ಪಾಡಿ ಮಸೀದಿಯಲ್ಲಿ ಪತ್ರಕರ್ತರ ಮೇಲೆ ನಡೆದ ಹಲ್ಲೆ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನನಗೆ ಮತ್ತು ನನ್ನ ಮಿತ್ರರಿಗೆ ದೂರು ನೀಡುವುದು ಅನಿವಾರ್ಯವಾಗಿತ್ತು. ಈ ಹಿಂದೆ ಎಲ್ಲಾ ಆತಂಕಗಳನ್ನು ಸಹಜ ಎಂಬಂತೆ ಎದುರಿಸಿದ್ದ ನನ್ನನ್ನು ಸೂರಲ್ಪಾಡಿ ಘಟನೆ ಮಾತ್ರ ಕೊನೆಗೂ ಪೊಲೀಸ್ ದೂರು ನೀಡುವಷ್ಟರ ಮಟ್ಟಿಗೆ ತಂದು ನಿಲ್ಲಿಸಿದೆ.

ಅಷ್ಟರ ಮಟ್ಟಿಗೆ ಘಟನೆಯ ಗಂಭೀರತೆ ನನ್ನನ್ನು ತಟ್ಟಿದೆ ಅಂದುಕೊಳ್ಳುತ್ತೇನೆ. ಅಷ್ಟಕ್ಕೂ ಆ ದಿನ ನಡೆದದ್ದು ಏನು ಅನ್ನೋದನ್ನು ಕೂಡ ವಿವರಿಸೋದು ಈಗ ಅನಿವಾರ್ಯ. ಯಾಕೆಂದರೆ ಈ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಒಂದಷ್ಟು ಜನ ಕೇಸು ಕೊಡೋ ಅನಿವಾರ್ಯತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಅದೆಲ್ಲಾ ಸಹಜ ಅನ್ನುವಂತೆಯೂ ಮಾತನಾಡಿದ್ದಾರೆ. ಆದರೆ ಈ ಹಿಂದೆ ಅದೆಷ್ಟೂ ಸಹಜತೆಗಳನ್ನ ಕಂಡಿದ್ದ ನನಗೆ ಸೂರಲ್ಪಾಡಿಯ ದಾಳಿ ಮಾತ್ರ ಸಹಜತೆಗಳನ್ನು ಮೀರಿ ಆತಂಕವನ್ನು ಹುಟ್ಟುಹಾಕಿದೆ. ಹೀಗಾಗಿ ನನಗೆ ಆ ಘಟನೆ ಅಷ್ಟು ಅಪಾಯಕಾರಿ ಅನಿಸಿದ್ದು ಯಾಕೆ ಅನ್ನೋದನ್ನು ವಿವರಿಸುತ್ತೇನೆ…

ಪತ್ರಕರ್ತ ಅಂದ ಮೇಲೆ ಸುದ್ದಿಗಳು ಹರಸಿ ಬರೋದು ಸಾಮಾನ್ಯ. ಹೀಗೆ ಘಟನೆ ನಡೆದ ಮುನ್ನ ದಿನ ನಮ್ಮ ತಂಡಕ್ಕೂ ಸೂರಲ್ಪಾಡಿಯ ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಿಸಿದ ಸುದ್ದಿ ಬಂದಿತ್ತು. ಸ್ವತಃ ಸಂತ್ರಸ್ಥರೇ ಮಾಧ್ಯಮ ಮಿತ್ರರನ್ನು ಸಂಪರ್ಕಿಸಿ ಅಳಲು ತೋಡಿಕೊಂಡಿದ್ದರು. ಹೀಗಾಗಿ ಅವರಿಂದ ಸಂಪೂರ್ಣ ಮಾಹಿತಿ ಪಡೆದ ನಾವು ಘಟನೆಯ ಗಂಭೀರತೆಯ ಬಗ್ಗೆ ವಿವರಗಳನ್ನು ಪಡೆದುಕೊಂಡೆವು. ಈ ವೇಳೆ ಮೇಲ್ನೋಟಕ್ಕೆ ಅವರಿಗೆ ಅನ್ಯಾಯವಾಗಿರೋದು ಒಂದು ಹಂತಕ್ಕೆ ಸ್ಪಷ್ಟವಾಗಿ ಕಂಡಿತ್ತು. ಹೀಗಾಗಿ ನೊಂದವರ ಪರವಾಗಿ ಸುದ್ದಿ ಮಾಡೋದು ಪತ್ರಕರ್ತರಾಗಿ ನಮ್ಮ ಧರ್ಮ. ಹಾಗಂತ ನೊಂದವರ ಪರವಾಗಿ ನಿಲ್ಲೋ ಭರದಲ್ಲಿ ವಿರೋಧಿ ಬಣವನ್ನು ಆರೋಪಿಗಳೇ ಅಂತ ಪಕ್ಕಾ ಜಡ್ಜ್ ಮೆಂಟ್ ಕೊಡೋ ಪತ್ರಕರ್ತರಂತು ನಾವಲ್ಲ. ಹೀಗಾಗಿ ಸಂತ್ರಸ್ಥರು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸೋ ಎದುರು ಬಣದವರನ್ನು ಕೂಡ ಮಾತನಾಡಿಸಿ ಸುದ್ದಿಗೊಂದು ಸ್ಪಷ್ಟತೆ ಕೊಡೋದು ನಮ್ಮ ಉದ್ದೇಶ. ಈ ಹಿಂದೆಯೂ ನಾನು ಸೇರಿದಂತೆ ನನ್ನ ಜೊತೆಗಿರುವ ಅಷ್ಟೂ ಜನ ಮಾಧ್ಯಮ ಮಿತ್ರರು ಪತ್ರಕರ್ತರಾಗಿ ಒನ್ ಸೈಡ್ ಸುದ್ದಿ ಮಾಡಿಲ್ಲ. ಯಾವುದೇ ಸುದ್ದಿಯಿರಲಿ ಎರಡೂ ಕಡೆಯ ವಿಚಾರಗಳನ್ನು ಆಲಿಸಿ ಅಂತಿಮ ವಿಮರ್ಶೆಯ ನಂತರವೇ ಅಲ್ಲೊಂದು ಸಾಮಾಜಿಕ ಜವಾಬ್ದಾರಿಯ ವರದಿ ತಯಾರಾಗುತ್ತಿತ್ತು.



ಈ ಪ್ರಕರಣದಲ್ಲೂ ನಾವು ಯಥಾವತ್ ವಿರೋಧಿ ಬಣ ಅಂತ ಕರೆಸಿಕೊಳ್ಳೋ ಸೂರಲ್ಪಾಡಿ ಮಸೀದಿ ಆಡಳಿತದ ಸ್ಪಷ್ಟನೆ ಕೇಳಲು ಮುಂದಾದೆವು. ಹೀಗಾಗಿ ನಿನ್ನೆ ಬೆಳಿಗ್ಗೆ ಸರಿಯಾಗಿ 7.55ಕ್ಕೆ ಬಿಟಿವಿ ವರದಿಗಾರನಾದ ನಾನು, ನನ್ನ ಕ್ಯಾಮರಾಮ್ಯಾನ್ ನಾಗೇಶ್ ಪಡು, ಟಿವಿ9 ಕ್ಯಾಮಾರಮ್ಯಾನ್ ವಿಲ್ಫ್ರೆಡ್ ಡಿಸೋಜಾ ಮತ್ತು ಸುದ್ದಿ ಟಿವಿ ಪ್ರತಿನಿಧಿ ಇರ್ಷಾದ್ ಉಪ್ಪಿನಂಗಡಿ ಜೊತೆಗೆ ಸೂರಲ್ಪಾಡಿ ಮಸೀದಿಗೆ ತೆರಳಿದೆವು. ಬೆಳಿಗ್ಗೆ ಎಂಟು ಘಂಟೆಗೆ ಮದರಸ ಬಿಡುವ ಕಾರಣ ಅಷ್ಟು ಬೇಗನೇ ಅಲ್ಲಿಗೆ ತೆರಳೋದು ನಮಗೆ ಅನಿವಾರ್ಯವಾಗಿತ್ತು. ಅದರಲ್ಲೂ ಮದರಸದಲ್ಲಿ ಸಂತ್ರಸ್ಥರ ಮಕ್ಕಳಿಗೆ ಬಹಿಷ್ಕಾರ ಹಾಕಿರೋ ಕಾರಣದಿಂದ ಮಕ್ಕಳ ಹಕ್ಕುಗಳ ವಿಚಾರದಲ್ಲಿ ಸುದ್ದಿ ಪ್ರಾಮುಖ್ಯತೆ ಪಡೆದಿತ್ತು. ಹೀಗಾಗಿ ಎಂಟು ಘಂಟೆಗೆ ಮದರಸ ಬಿಡುವ ದೃಶ್ಯಗಳನ್ನು ರಸ್ತೆಯಲ್ಲಿ ನಿಂತೇ ಚಿತ್ರೀಕರಿಸಿಕೊಂಡೆವು. ನಂತರ ಅಲ್ಲಿಂದ ನೇರವಾಗಿ ಮಸೀದಿ ಆವರಣಕ್ಕೆ ಹೋಗಿ ಅಲ್ಲೇ ಇದ್ದ ಮದರಸದ ಗುರುಗಳಲ್ಲಿ ನಮಗೆ ಬಂದ ಆರೋಪಗಳ ಬಗ್ಗೆ ವಿಚಾರಿಸಿದ್ದೇವೆ. ಈ ವೇಳೆ ಅವರು ಕೂಡ ನಮಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ, ತಾತ್ಕಾಲಿಕವಾಗಿ ದೂರುದಾರರ ಮಕ್ಕಳು ಮದರಸ ಮತ್ತು ಮಸೀದಿಗೆ ಬಾರದಂತೆ ಬಹಿಷ್ಕಾರ ಹಾಕಿರೋದರ ಬಗ್ಗೆ ತಿಳಿಸಿದರು. ಅಲ್ಲದೇ ಈ ಬಗ್ಗೆ ಇರೋ ವಿವಾದಗಳ ಬಗ್ಗೆಯೂ ಬೆಳಕು ಒಂದಷ್ಟು ಬೆಳಕು ಚೆಲ್ಲಿದರು. ಆದರೆ ಅಷ್ಟರಲ್ಲಾಗಲೇ ಸುಮಾರು ಹತ್ತು ಮಂದಿಯ ತಂಡವೊಂದು ಮಸೀದಿ ಆವರಣಕ್ಕೆ ನುಗ್ಗಿ ನಮ್ಮನ್ನ ಮಾತನಾಡೋಕು ಬಿಡದೇ ತೀರಾ ಕೆಳಮಟ್ಟದ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸೋಕೆ ಆರಂಭಿಸಿದ್ದಾರೆ. ಅಲ್ಲದೇ ನಮ್ಮ ಕೈಯ್ಯಲ್ಲಿದ್ದ ಚಾನೆಲ್ ಮೈಕ್ ಕಿತ್ತುಕೊಂಡು ಕ್ಯಾಮಾರದಲ್ಲಿದ್ದ ದೃಶ್ಯಗಳನ್ನು ಡಿಲೀಟ್ ಮಾಡೋದಕ್ಕೆ ಹೇಳಿ ಬೆದರಿಕೆ ಹಾಕಿದ್ದಾರೆ. ನಾವು ಪತ್ರಕರ್ತರು ಅಂತ ಗೊತ್ತಿದ್ದರೂ ನಮ್ಮಲ್ಲಿ ಮಾತನಾಡಲೂ ಬಿಡದೇ ಮಸೀದಿ ಆವರಣದಿಂದ ನಮ್ಮನ್ನು ಹೊರಗೆಳೆದುಕೊಂಡು ಬಂದಿದ್ದಾರೆ.

ನಂತರ ನಮ್ಮ ಬಿಟಿವಿ ಕ್ಯಾಮಾರಮ್ಯಾನ್ ನಾಗೇಶ್ ಮತ್ತು ಸುದ್ದಿ ಟಿವಿಯ ಇರ್ಷಾದ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸುಮಾರು ಐವತ್ತು ಮಂದಿ ನಮ್ಮನ್ನು ಸುತ್ತುವರಿದ ತೀರಾ ಕೆಳಮಟ್ಟದ ಭಾಷೆ ಪ್ರಯೋಗಿಸಿ ನಿಂದಿಸಿದ್ದಲ್ಲೇ ಕ್ಯಾಮಾರ ಕಿತ್ತುಕೊಂಡು ಕ್ಯಾಸೆಟ್ ಮತ್ತು ಮೆಮೋರಿ ಕಾರ್ಡ್‍ಗಳನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ವಿರೋಧಿಸಿದರೂ ಬಿಡದೇ ಹಲ್ಲೆಗೆ ಮುಂದಾಗಿ ಕೊಲೆ ಬೆದರಿಕೆ ಒಡ್ಡಿದ ಆರೋಪಿಗಳು ನಾವು ಬಂದಿದ್ದ ಕಾರಿನ ಕೀಯನ್ನ ಕೂಡ ಕಿತ್ತುಕೊಂಡು ಅಕ್ಷರಶಃ ತಾಲಿಬಾನ್ ಮಾದರಿಯಲ್ಲಿ ನಮ್ಮ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ಅದ್ಯಾಗೋ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನಂತರ ಪಕ್ಕದ ರಸ್ತೆಗೆ ಬಂದು ಬೆಳಿಗ್ಗೆ ಸುಮಾರು 8.20ಕ್ಕೆ ಡಿಸಿಪಿ ಶಾಂತರಾಜು ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದೆ. ಹೀಗಾಗಿ ಘಟನೆಯ ಗಂಭೀರತೆ ಅರಿತ ಅವರು ಬಜಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ ಸುಮಾರು 8.30ರ ವೇಳೆಗೆ ಬಜಪೆ ಠಾಣಾಧಿಕಾರಿ ನಾಗರಾಜ್ ಅವರು ನನ್ನನ್ನು ಸಂಪರ್ಕಿಸಿ ಪೊಲೀಸ್ ಕಳಿಸಿರೋದಾಗಿ ಹೇಳಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ದೂರದಲ್ಲೇ ನಿಂತು ಘಟನೆಯನ್ನು ಗಮನಿಸುತ್ತಿದ್ದ ನಾನು ನಿಜಕ್ಕೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದೆ. ಉಗ್ರರ ಕೈಯ್ಯಲ್ಲಿ ಸಿಲುಕಿದ ಸಂತ್ರಸ್ಥರಂತೆ ನಮ್ಮ ತಂಡದ ಮೂವರು ಪತ್ರಕರ್ತರು ಅವರ ಕೈಯ್ಯಲ್ಲಿ ಅಕ್ಷರಶಃ ನಲುಗಿ ಹೋಗಿದ್ದರು. ಇಷ್ಟಾಗಿದ್ದೇ ತಡ ಯಾರೋ ಮಸೀದಿಯ ಮೈಕ್ ನಲ್ಲಿ ಜಮಾತಿಗೆ ಸೇರಿದ ಎಲ್ಲರೂ ತಕ್ಷಣ ಮಸೀದಿ ಆವರಣಕ್ಕೆ ಬರುವಂತೆ ಘೋಷಣೆ ಮಾಡಿದ್ಧಾರೆ. ದುರಂತ ಅಂದ್ರೆ ಕೇವಲ ಧಾರ್ಮಿಕಪ್ರವಚನ ಮತ್ತು ಬಾಂಗ್ ನೀಡೋಕೆ ಬಳಕೆಯಾಗೋ ಮಸೀದಿಯ ಮೈಕ್ ನಿನ್ನೆಯ ಘಟನೆಯಲ್ಲಿ ನಮ್ಮ ವಿರುದ್ದ ಜನ ಸೇರಿಸಿ ದೌರ್ಜನ್ಯ ಎಸಗೋ ಅಸ್ತ್ರವಾಗಿದ್ದು ಮಾತ್ರ ನಿಜಕ್ಕೂ ದುರಂತ. ಹೀಗಾಗಿ ದೂರದಿಂದಲೇ ಎಲ್ಲವನ್ನು ಗಮನಿಸ್ತಾ ಇದ್ದ ನಾನು ಮಸೀದಿಯ ಮೈಕ್ ನಲ್ಲಿ ಮಾಡಿದ ಘೋಷಣೆಯನ್ನ ಕೇಳಿ ಇನ್ನಷ್ಟು ಆತಂಕಕ್ಕೊಳಗಾದೆ. ಹೀಗಿರೋವಾಗಲೇ ಮಸೀದಿ ಆವರಣಕ್ಕೆ ಜನರ ದಂಡೇ ಆಗಮಿಸ್ತಾ ಇತ್ತು. ನೋಡನೋಡುತ್ತಿದ್ದಂತೆ ನಮ್ಮ ಮೂವರು ಮಾಧ್ಯಮ ಮಿತ್ರರನ್ನು ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿ ಸುತ್ತುವರಿದು ದೌರ್ಜನ್ಯ ಆರಂಭಿಸಿದ್ದರು. ಆದರೆ ಅಷ್ಟು ಜನರ ಮುಂದೆ ನಮ್ಮವರನ್ನ ಉಳಿಸುವಲ್ಲಿ ಅಸಹಾಯಕನಾಗಿದ್ದ ನನಗೆ ಪೊಲೀಸರು ಅಲ್ಲಿಗೆ ಬರುವವರೆಗೆ ಬೇರೆ ದಾರಿ ಕಾಣಲೇ ಇಲ್ಲ. ಹೀಗೆ ಸಮಯ 9 ಕಳೆದರೂ ಪೊಲೀಸರು ಬರಲೇ ಇಲ್ಲ. ಕೊನೆಗೆ ನಮ್ಮವರನ್ನು ಕಾರಿನೊಳಗೆ ನೂಕಿದ ರಾಕ್ಷಸರು ಕಾರಿಗೆ ಗುದ್ದಿ, ನಮ್ಮವರ ಮೇಲೆ ಹಲ್ಲೆ ನಡೆಸುತ್ತಾ, ಕ್ಯಾಮಾರದ ಮೆಮೋರಿ ಕಿತ್ತುಕೊಂಡು ಪುಡಿಗಟ್ಟಿದ್ರು. ಅಲ್ಲದೇ ಕ್ಯಾಮಾರಕ್ಕೂ ಹಾನಿ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಪೊಲೀಸರು ಮಾತ್ರ ಬರಲೇ ಇಲ್ಲ.

ಕೊನೆಗೆ 9.20ರ ವೇಳೆಗೆ ಪಿಸಿಆರ್ ವಾಹನದಲ್ಲಿ ಇಬ್ಬರು ಪೊಲೀಸರು ಆಗಮಿಸಿದ್ರು. ಆದ್ರೆ ಈ ಇಬ್ಬರು ಪೊಲೀಸರ ಮಾತನ್ನೂ ಕೇಳದ ಜನ ಪೊಲೀಸರ ಎದುರೇ ನಮ್ಮವರನ್ನು ಬೆಂಕಿ ಹಾಕಿ ಸುಡೋದಾಗಿ ಬೊಬ್ಬಿಡುತ್ತಿದ್ದರು. ಅಲ್ಲದೇ ಕಟ್ಟಿ ಹಾಕಿ ಥಳಿಸೋದಾಗಿಯೂ ಏರು ಧ್ವನಿಯಲ್ಲೇ ಪೊಲೀಸರ ಎದುರೇ ಗುಡುಗಿದ್ದು ದುರಂತ. ಆದ್ರೆ ಇಷ್ಟಾದ್ರೂ ಪೊಲೀಸರಿಗೆ ಮಾತ್ರ ಅವ್ರನ್ನ ನಿಯಂತ್ರಿಸಿ ನಮ್ಮವರನ್ನು ಬಿಡಿಸೋದಕ್ಕೆ ಸಾಧ್ಯವಾಗಲೇ ಇಲ್ಲ. ಇಷ್ಟಾಗಿ 9.45ರ ವೇಳೆಗೆ ಬಜಪೆ ಎಸ್ಸೈ ಸತೀಶ್ ಕುಮಾರ್ ಸ್ಥಳಕ್ಕೆ ಬಂದ್ರು. ಈ ವೇಳೆ ನಾನು ಕೂಡ ಪೊಲೀಸ್ ಅಧಿಕಾರಿಯ ಆಗಮನದ ನಂತ್ರ ಸ್ಥಳಕ್ಕೆ ಬಂದೆ. ಈ ವೇಳೆ ಕೆಲ ಕಿಡಿಗೇಡಿಗಳು ನನ್ನನ್ನು ಸುತ್ತುವರಿದು ಹಲ್ಲೆಗೆ ಮುಂದಾದ್ರೂ. ಅದಾಗಲೇ ನಮ್ಮವರ ಮೊಬೈಲ್ ಕಿತ್ತುಕೊಂಡಿದ್ದ ರಾಕ್ಷಸರು ನನ್ನ ಮೊಬೈಲ್ ಕೂಡ ಕಿತ್ತುಕೊಳ್ಳೋಕೆ ಆರಂಭಿಸಿದ್ರು. ಆದ್ರೆ ಎಸ್ಸೈ ಸತೀಶ್ ಅವ್ರನ್ನ ತಡೆದು ನಮ್ಮವ್ರನ್ನ ಕೂಡ ಅವ್ರ ಬಂಧನದಿಂದ ಬಿಡಿಸಿದ್ರು. ಹೀಗಾದ್ರೂ ಅಲ್ಲಿದ್ದವ್ರು ಪೊಲೀಸರ ಮುಂದೆಯೇ ನಮ್ಮ ವಿರುದ್ದ ಅಬ್ಬರಿಸಿದ್ರು. ಮಸೀದಿಯ ಒಳಗೆ ಕರೆದುಕೊಂಡು ಹೋಗಿ ಬಹಿರಂಗ ಕ್ಷಮೆಯಾಚಿಸುವಂತೆ ಬೆದರಿಕೆ ಹಾಕಿದ್ರು. ದುರಂತ ಅಂದ್ರೆ ಮಸೀದಿಯಲ್ಲಿ ಬಾಂಗ್ ಕೊಡೋ ಮೈಕ್ ನಲ್ಲೇ ಇಡೀ ಊರಿಗೆ ಕೇಳುವಂತೆ ಪತ್ರಕರ್ತನಾದ ನಾನು ಕ್ಷಮೆ ಕೇಳಬೇಕು ಅನ್ನೋದು ಅವ್ರ ಆಗ್ರಹವಾಗಿತ್ತು. ಅಲ್ಲದೇ ನನ್ನ ಅಷ್ಟೂ ಕ್ಷಮಾಪನ ಹೇಳಿಕೆಯನ್ನ ಪತ್ರದಲ್ಲಿ ದಾಖಲಿಸಿ ಸಹಿ ಹಾಕೋದ್ರ ಜೊತೆಗೆ ಮೊಬೈಲ್ ಮುಂದೆಯೂ ಹೇಳಿಕೆ ನೀಡುವಂತೆ ಅಲ್ಲಿದ್ದ ಅಷ್ಟೂ ಜನ ಬೆದರಿಸಿದ್ರು. ಇಲ್ಲದೇ ಇದ್ರೆ ಇಲ್ಲಿಂದ ಹೊರ ಹೋಗೋದಕ್ಕೆ ಬಿಡೋದಿಲ್ಲ ಅನ್ನೋವಷ್ಟರ ಮಟ್ಟಿಗೆ ಅವ್ರ ದೌರ್ಜನ್ಯ ಬಂದು ನಿಂತಿತ್ತು. ಆದ್ರೆ ಈ ಎಲ್ಲಾ ಘಟನೆಗೆ ಸ್ವತಃ ಪೊಲೀಸ್ ಅಧಿಕಾರಿ ಕೂಡ ಸಾಕ್ಷಿಯಾಗಿದ್ದು ಮಾತ್ರ ದುರಂತ. ಹೀಗಾಗಿ ತಪ್ಪೇ ಮಾಡದ ನಾನು ಕ್ಷಮೆ ಕೇಳೋದಕ್ಕೆ ಒಪ್ಪಲಿಲ್ಲ. ಬೇಕಾದ್ರೆ ಶೂಟ್ ಮಾಡಿರೋ ಅಷ್ಟು ದೃಶ್ಯಗಳನ್ನ ಡಿಲೀಟ್ ಮಾಡಿ ಜೀವ ಉಳಿಸಿಕೊಳ್ಳೋದಕ್ಕೆ ಸಿದ್ದನಾದೆ. ಕೊನೆಗೆ ಪೊಲೀಸರಿಗೂ ನಮ್ಮನ್ನು ಅಲ್ಲಿಂದ ಹೊರಗೆ ಕರೆದುಕೊಂಡು ಹೋಗಲು ಅವ್ರು ಹೇಳೋ ಎಲ್ಲಾ ಮಾತಿಗೂ ತಲೆಯಾಡಿಸೋದು ಅನಿವಾರ್ಯವಾಗಿತ್ತು. ಅಕ್ಷರಶಃ ತಾಲಿಬಾನ್ ಮಾದರಿಯಲ್ಲಿ ಅವರು ಹೇಳಿದ್ದನ್ನು ನಮ್ಮ ಕೈಯ್ಯಲ್ಲಿ ಮಾಡಿಸಿ ನಮ್ಮನ್ನು ಅಲ್ಲಿಂದ ಬಿಟ್ಟು ಕಳಿಸಿದರು. ಆದ್ರೆ ತಪ್ಪೇ ಮಾಡದ ನಾವು ಮಾತ್ರ ಅವ್ರ ಬಳಿ ಕ್ಷಮೆ ಕೇಳದೇ ನಮ್ಮಲ್ಲಿದ್ದ ಶೂಟ್ ಮಾಡಿದ ದೃಶ್ಯಗಳನ್ನು ಡಿಲೀಟ್ ಮಾಡಲು ಒಪ್ಪಿಕೊಂಡೆವು. ಅಲ್ಲದೇ ಮಸೀದಿಯ ಸುದ್ದಿ ಕೂಡ ಟಿವಿಯಲ್ಲಿ ಬರಲೇ ಬಾರದು ಅಂತೆಲ್ಲಾ ಎಚ್ಚರಿಕೆ ನೀಡಿದ ಅವರು ಅದಕ್ಕೆಲ್ಲಾ ಒಪ್ಪಿಗೆ ಸೂಚಿಸಿದ ಮೇಲೆಯೇ ನಮ್ಮನ್ನ ಬಿಟ್ಟು ಕಳುಹಿಸಿದ್ದು…….ನಿಜಕ್ಕೂ ಅಲ್ಲಿ ನಾವು ಕಳೆದ ಆ ಎರಡು ಘಂಟೆಗಳು ಅತ್ಯಂತ ಭಯಾನಕ.

ಉಗ್ರರ ಒತ್ತೆಯಾಳುಗಳಾಗಿ ಸಾವಿನ ಬಾಗಿಲು ತಟ್ಟಿ ಬಂದ ಅನುಭವ ನಮ್ಮದ್ದು. ಯಾಕೆಂದ್ರೆ ಅಲ್ಲಿದ್ದ ಒಬ್ಬೊಬ್ಬರದ್ದು ಒಂದೊಂಥರ ವರ್ತನೆ. ಒಬ್ಬರು ಹಲ್ಲೆ ನಡೆಸೋಕೆ ಬಂದ್ರೆ ಇನ್ನೊಬ್ಬರದ್ದು ಅವಾಚ್ಯ ಶಬ್ದಗಳ ನಿಂದನೆ. ಸುಡ್ತೀವಿ, ಕೊಲ್ತೀವಿ ಅನ್ನೋ ಮೂಲಕವೇ ಅಲ್ಲಿದ್ದ ಅಷ್ಟೂ ಜನ ಮಾನವೀಯತೆಯ ರೇಖೆಯನ್ನೇ ದಾಟಿ ಅತ್ಯುಗ್ರ ರೀತಿಯಲ್ಲಿ ದೌರ್ಜನ್ಯ ಎಸಗಿದ್ರು.

ಹೀಗಾಗಿ ನನ್ನ ಪತ್ರಕರ್ತ ವೃತ್ತಿಯಲ್ಲಿ ನಿನ್ನೆಯ ಘಟನೆ ಅತ್ಯಂತ ಭಯಾನಕ ಅನುಭವ. ಮಾನವೀಯತೆಯ ಅರ್ಥವೇ ಗೊತ್ತಿಲ್ಲದ ಜನರ ನಮ್ಮನ್ನು ತೀರಾ ಕೀಳಾಗಿ ನಡೆಸಿಕೊಂಡರು. ತಮ್ಮ ಅಷ್ಟೂ ಆಗ್ರಹ, ಎಚ್ಚರಿಕೆಗಳನ್ನ ನಮ್ಮ ಮೇಲೇ ಹೇರುವ ಮೂಲಕ ಜೀವ ಭಯವನ್ನ ಒಡ್ಡಿದರು. ಹೀಗಾಗಿ ಇಷ್ಟೆಲ್ಲಾ ಆದ ಮೇಲೆಯೂ ಈ ದಾಳಿಯನ್ನು ಒಬ್ಬ ಪತ್ರಕರ್ತನಾಗಿ ತೀರಾ ಸಹಜ ಅಂತ ಕರೆಸಿಕೊಂಡು ಸುಮ್ಮನಾಗದು ಯಾಕೋ ಸರಿ ಕಾಣಲಿಲ್ಲ. ಅಲ್ಲದೇ ಭವಿಷ್ಯದ ದೃಷ್ಟಿಯಿಂದಲೂ ಅದು ಸರಿಯಲ್ಲ. ಹೀಗಾಗಿ ಪತ್ರಕರ್ತರಾಗಿ ನಾವೆಲ್ಲರೂ ಈ ಘಟನೆಯಲ್ಲಿ ತಪ್ಪಿತಸ್ಥರಲ್ಲ. ಕಾನೂನು ಬದ್ದವಾಗಿಯೇ ಹೇಳಿಕೆ ಪಡೆಯೋ ದೃಷ್ಟಿಯಿಂದ ಮಸೀದಿಗೆ ತೆರಳಿದ್ದೆವಷ್ಟೇ. ಹೀಗಿರುವಾಗ ನಮ್ಮ ಮೇಲೆ ನಡೆದ ದಾಳಿ ಪತ್ರಿಕಾಸ್ವಾತಂತ್ರ್ಯದ ಮೇಲೆ ನಡೆದ ದಾಳಿಯ ಜೊತೆಗೆ ಮಾನವೀಯತೆಯ ರೇಖೆಯನ್ನು ದಾಟಿ ದಾಖಲಾದ ಅಮಾನುಷ ದಾಳಿಯೂ ಹೌದು. ಆದ್ದರಿಂದ ಘಟನೆಯಲ್ಲಿ ಪಾಲುದಾರರು ಅಂತ ಕರೆಸಿಕೊಳ್ಳುವ ಅಷ್ಟೂ ಜನರಿಗೆ ಕಾನೂನಿನ ಪ್ರಕಾರ ಶಿಕ್ಷಯಾಗಲಿ ಅನ್ನೋದಷ್ಟೇ ನನ್ನ ಮತ್ತು ನಮ್ಮ ತಂಡದ ಆಗ್ರಹ. ಸಮಾಜಕ್ಕೆ ಎಲ್ಲವನ್ನ ತಿಳಿಸೋ ನಮ್ಮಂಥ ಪತ್ರಕರ್ತರನ್ನೇ ಈ ರೀತಿಯಾಗಿ ನಡೆಸಿಕೊಳ್ಳೋ ಸೂರಲ್ಪಾಡಿಯ `ಅವರ’ ಈ ಕೃತ್ಯವನ್ನು ನಾನಂತೂ ಒಪ್ಪೋದಕ್ಕೆ ಸಿದ್ದನಿಲ್ಲ. ಹೀಗಾಗಿ ಆತ್ಮಸಾಕ್ಷಿಗೆ ಅನುಗುಣವಾಗಿ ಅಂಥವರ ವಿರುದ್ದ ನಾನು ಪೊಲೀಸ್ ದೂರು ಕೊಟ್ಟಿರೋದು ಸರಿ ಅಂದುಕೊಳ್ಳುತ್ತೇನೆ. ಹೋಂಸ್ಟೇ ದಾಳಿ, ಪಬ್ ದಾಳಿ ಮತ್ತು ಇನ್ನಿತರ ಅನೇಕ ಅಮಾನವೀಯ ದಾಳಿಗಳನ್ನು ಸುದ್ದಿ ಮಾಡಿದ ಪತ್ರಕರ್ತರಾದ ನಮ್ಮ ಮೇಲೆ ನಡೆದ ಈ ದಾಳಿ ನಿಜಕ್ಕೂ ಕರಾವಳಿಯ ಮತಾಂಧರ ಕ್ರೌರ್ಯಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ ಎನ್ನದೇ ಬೇರೆ ವಿಧಿಯಿಲ್ಲ. ಕೊನೆಯದಾಗಿ ನಾವು ಮಾಡಲು ಹೊರಟ ಸುದ್ದಿ ಪೂರ್ಣಗೊಂಡಿಲ್ಲ. ಅಲ್ಲದೇ ನಾವು ಈ ಸಾಮಾಜಿಕ ಬಹಿಷ್ಕಾರದ ಸುದ್ದಿಯ ವಿಚಾರದಲ್ಲಿ ಯಾರ ಮೇಲೂ ತಪ್ಪಿತಸ್ಥ ಅನ್ನೋ ಜಡ್ಜ್ ಮೆಂಟ್ ಕೂಡ ಕೊಟ್ಟಿಲ್ಲ. ಮಾಧ್ಯಮ ಅಂದ್ರೆ ನ್ಯಾಯಾಲಯ ಅಲ್ಲ ಅನ್ನೋ ಸಿದ್ದಾಂತಕ್ಕೆ ಬದ್ಧನಾದ ನನಗೆ ಸೂರಲ್ಪಾಡಿಯ ವರದಿ ಕೂಡ ಸಮಾಜದ ಮುಂದೆ ತೆರೆದಿಡೋ ವಾಸ್ತವತೆಯಷ್ಟೇ ವಿನಃ ನಾವೇ ಕೊಡೋ ತೀರ್ಪುಗಳಲ್ಲ. ಹೀಗಾಗಿ ಎರಡೂ ಕಡೆಯ ವಾದಗಳನ್ನು ಆಲಿಸಿ ಸುದ್ದಿ ಮಾಡುವ ನಮಗೆ ಎರಡೂ ಕಡೆಯ ಹೇಳಿಕೆಗಳೂ ಅತ್ಯಮೂಲ್ಯ. ಹೀಗಾಗಿ ನಮ್ಮ ಮೇಲೆ ನಡೆದ ದಾಳಿಯ ನಂತರವೂ ಸುದ್ದಿಯನ್ನು ಪೂರ್ಣಗೊಳಿಸುತ್ತೇವೆ. ಅದೂ ಮತ್ತೆ ಸೂರಲ್ಪಾಡಿಯ ಮಸೀದಿ ಆಡಳಿತದ ಹೇಳಿಕೆಯನ್ನು ದಾಖಲಿಸಿಯೇ……!

No comments:

Post a Comment