Tuesday, 30 July 2013

ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡೋನಾ..? 

ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡೋನಾ....!


ನಿನ್ನೆ ಅದ್ಯಾವುದೋ ಕೆಲಸದ ನಿಮಿತ್ತ ಮಂಗಳೂರಿನ ಜನನಿಬಿಡ ರಸ್ತೆಯಲ್ಲಿ ಅಡ್ಡಾಡುತ್ತಿದ್ದೆ. ಈ ವೇಳೆ ಕೇಸರಿ ಪಂಚೆಯುಟ್ಟ, ಬಿಳಿ ಬಣ್ಣದ ಶರ್ಟ್ ತೊಟ್ಟ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ನನ್ನನ್ನು ಕಂಡು ಮಾತಿಗಿಳಿದರು. `ನನ್ನ ಪರಿಚಯ ಇದಿಯಾ ಸಾರ್? ಅಂತ ಆ ವ್ಯಕ್ತಿ ಕೇಳಿದಾಗ `ಯಾರಪ್ಪ ಇದು? ಅಂದುಕೊಂಡು ಅವರನ್ನು ತಿರಸ್ಕರಿಸಿ ಮುಂದೆ ಹೋಗಲು ಯತ್ನಿಸಿದೆ. ಆದರೆ ಆ ಆಸಾಮಿ ನನ್ನನ್ನು ಅಲ್ಲಿಂದ ಕಾಲ್ಕೀಲಲು ಬಿಡಲೇ ಇಲ್ಲ. ಮತ್ತದೇ ಪ್ರಶ್ನೆ `ನನ್ನ ಪರಿಚಯ ಇದೆಯಾ ಸಾರ್? ಎನ್ನುವುದು. ಈ ವೇಳೆ ಯಾರಪ್ಪ ಇವರು ಆಂತ ಸ್ವಲ್ಪ ಯೋಚನೆ ಮಾಡಲು ಆರಂಭಿಸಿದೆ. ಆದರೆ ಆ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಗಲೇ ಇಲ್ಲ. ಆದರೂ ಆ ವ್ಯಕ್ತಿಯನ್ನು ಎಲ್ಲೋ ನೋಡಿದ, ಒಂದಷ್ಟು ಹೊತ್ತು ಮಾತನಾಡಿದ ನೆನಪುಗಳು ಮಾತ್ರ ಒಂದು ಹಂತಕ್ಕೆ ನನ್ನಲ್ಲಿತ್ತು....
ನಾನು ತಡವರಿಸಿದ್ದನ್ನು ಕಂಡ ಅವರು `ನಾನು ಸಾರ್ ಲಕ್ಷ್ಮಣ್...ಆವತ್ತು ನಿಮ್ಮ ಭವಿಷ್ಯ ಹೇಳಿದ್ನಲ್ಲಾ...! ಅಂತ ತನ್ನ ಪರಿಚಯ ಮಾಡಿಕೊಂಡರು. ಆಗಲೇ ಗೊತ್ತಾಗಿದ್ದು ನೋಡಿ....ಸರಿಸುಮಾರು ಒಂದು ವರ್ಷದ ಹಿಂದೆ ಈ ವ್ಯಕ್ತಿ ನನ್ನ ಒಂದಷ್ಟು ಭವಿಷ್ಯ ಹೇಳಿದ್ರು ಅನ್ನೋದು. ಇವರದ್ದು ಬೀದಿ ಸುತ್ತಿ ಮನೆ-ಮನೆಗೆ ಹೋಗಿ ಭವಿಷ್ಯ ಹೇಳುವ ಕಾಯಕ. ಹೀಗೇ ಒಂದು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಒಂದು ಹಣ ಕೊಡದಿದ್ರೂ ಪರವಾಗಿಲ್ಲ, ನಿಮ್ಮ ಭವಿಷ್ಯ ಹೇಳ್ತೀನಿ ಅಂದಿದ್ದ ಈ ಆಸಾಮಿ. ಕೊನೆಗೆ ಕಾಟ ತಡೆಯಲಾಗದೆ `ಆಯ್ತಪ್ಪ ಹೇಳು' ಅಂತ ಒಂದತ್ತು ನಿಮಿಷ ಅವರ ಜೊತೆ ಮಾತನಾಡಿದ್ದೆ (ಭವಿಷ್ಯ ಕೇಳಿದ್ದೆ)...!
ವರ್ತಮಾನದ ಮೇಲೆ ಮಾತ್ರ ಒಂದಷ್ಟು ನಂಬಿಕೆಯಿಟ್ಟ ನನಗೆ ಭವಿಷ್ಯದ ಬಗ್ಗೆಯಾಗಲೀ ಜ್ಯೋತಿಷ್ಯದ ಬಗ್ಗೆಯಾಗಲೀ ಅಷ್ಟಾಗಿ ನಂಬಿಕೆಯಿಲ್ಲ. ಆದರೂ ಆ ವ್ಯಕ್ತಿಯ ಕಿರಿಕಿರಿ ತಾಳದೆ ಅಂದು ಭವಿಷ್ಯ ಕೇಳಿದೆ. ಅದು ಸುಮಾರು ಒಂದು ವರ್ಷಗಳ ಹಿಂದಿನ ಕಥೆ. ಕೈ ನೋಡಿ ಭವಿಷ್ಯ ಹೇಳಲು ಆರಂಭಿಸಿದ ಅವರು, ನಿಮ್ಮ ಭವಿಷ್ಯ ತುಂಬಾ ಚೆನ್ನಾಗಿದೆ. ನಿಮಗೆ ರಾಜಯೋಗ ಇದೆ. ನೀವು ಕೈಯಿಟ್ಟ ಎಲ್ಲಾ ಕೆಲಸಗಳೂ ಥಟ್ ಅಂತ ಮುಗಿದು ಹೋಗುತ್ತೆ....ಅಂತ ಹೇಳಿ ಐದೇ ನಿಮಿಷದಲ್ಲಿ ನನ್ನನ್ನು ರೈಲು ಹತ್ತಿಸಿಬಿಟ್ಟಿದ್ದ. ಆದರೆ ನನ್ನದು ಮಾತ್ರ ಒಮ್ಮೊಮ್ಮೆ ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಡುವ ಜಾಯಮಾನ. ಹಾಗಾಗಿ ಆ ಕೂಡಲೇ ಆತನ ಮಾತಿಗೆಲ್ಲಾ ಒಂದಷ್ಟು ಖಡಕ್ ಉತ್ತರ ಕೊಟ್ಟಿದ್ದೆ....ಸುಮ್ಮನೆ ರೈಲು ಹತ್ತಿಸುವ ಕೆಲಸ ಬೇಡ ಅಂತ ಒಂದು ರೇಂಜಿಗೆ ಆ ಜ್ಯೋತಿಷಿಗೆ ಬೈದು ಬಿಟ್ಟಿದ್ದೆ. ಸಾಕಪ್ಪ ನಿನ್ನ ಜ್ಯೋತಿಷ್ಯ ಇಲ್ಲಿಂದ ಜಾಗ ಖಾಲಿ ಮಾಡು ಅಂತಾನೂ ಹೇಳಿದ್ದೆ. ಆದರೆ ಅವರು ಮಾತ್ರ ಜಾಗ ಖಾಲಿ ಮಾಡುವ ಹಾಗೆ ಕಾಣಲಿಲ್ಲ. `ಸಾರ್, ಇಲ್ಲಿಯ ತನಕ ನಾನು ಹೇಳಿದ್ದು ನಿಮ್ಮ ಅದೃಷ್ಟದ ಬಗ್ಗೆ...ಮುಂದೆ ನಿಮ್ಮ ಜೀವನದಲ್ಲಿ ಆಗಬಹುದಾದ ದುರಾದೃಷ್ಟದ ಬಗ್ಗೆಯೂ ಹೇಳ್ತೀನಿ ಅಂದ......ಮಾತು ಮುಂದುವರೆಸಿದವನೇ.....ಮುಂದೆ ನಿಮ್ಮ ಜೀವನದಲ್ಲಿ ದೊಡ್ಡದೊಂದು ಅನಾಹುತ ಕಾದಿದೆ ಅಂದು ಬಿಟ್ಟ...ಮೊದಲನೆಯದು ಅಪಘಾತವಾದರೆ, ಎರಡನೆಯದು ನೀವು ಮಾಡುವ ವೃತ್ತಿಯದ್ದು ಎಂದು ಹೇಳಿದೆ..ಮೂರನೆಯದ್ದು ಏನಪ್ಪ? ಎಂದು ನಾನು ಕೂಡ ಕೇಳಿಯೇ ಬಿಟ್ಟೆ..ಆಗ ಆತ `ನಿಮ್ಮ ಜೀವನದಲ್ಲಿ ಪ್ರೀತಿಯ ವಿಚಾರದಲ್ಲಿ ಒಂದು ಸೋಲು ನಿಮ್ಮ ಬೆನ್ನು ಬೀಳಿಲಿದೆ. ಬದುಕಿನಲ್ಲಿ ನಿಮ್ಮ ಮೇಲೊಂದು ಬಹುದೊಡ್ಡ ಏಟು ಬೀಳಲಿದೆ. ಹಣ್ಣು ಮಗಳೊಬ್ಬಳ ವಿಚಾರದಲ್ಲಿ ಒಂದಷ್ಟು ದಿನ ನಿಮಗೆ ತೊಂದರೆ ಕಟ್ಟಿಟ್ಟ ಬುತ್ತಿ' ಅಂದು ಬಿಟ್ಟ. ಒಂದು ಮತ್ತು ಎರಡನೆಯದು ಓಕೆ....ಆದರೆ ಮೂರನೆಯದು ನನ್ನ ಜೀವನದಲ್ಲಿ ಸಾದ್ಯವೇ ಇಲ್ಲ ಅಂತ ಹೇಳಿಬಿಟ್ಟೆ. ಯಾಕೆಂದರೆ ಅಲ್ಲಿಯತನಕ ಪ್ರೀತಿ-ಪ್ರೇಮ, ಲವ್-ಗಿವ್ ಅಂತ ನನಗೆ ಏನೂ ಇರಲಿಲ್ಲ. ನನ್ನದೇನಿದ್ದರೂ ಒಬ್ಬಂಟಿ ಜೀವನ...ಹಾಗಾಗಿ ಈ ಬೀದಿ ಜ್ಯೋತಿಷಿಯ ಮಾತಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿಯೋ ಏನೋ ನಿನ್ನೆ ಮಂಗಳೂರಿನ ರಸ್ತೆಯಲ್ಲಿ ಮುಗಿಬಿದ್ದು ಆತನೇ ಮಾತಿಗಿಳಿದರೂ `ಅವನ್ಯಾರು? ಎನ್ನುವುದು ನನ್ನ ಅರಿವಿಗೆ ಬರಲು ಒಂದಷ್ಟು ಹೊತ್ತು ಬೇಕಾದದ್ದು...!
ಹೀಗೆ ಮಂಗಳೂರಿನಲ್ಲಿ ಮಾತಿಗೆ ಸಿಕ್ಕ ಜ್ಯೋತಿಷಿ ಲಕ್ಷಣನ ಬಗ್ಗೆ ಅಷ್ಟೊತ್ತಿಗಾಗಲೇ ಎಲ್ಲವೂ ನೆನಪಾಗಿತ್ತು. ಆತ ಒಂದು ವರ್ಷದ ಹಿಂದೆ ಹೇಳಿದ್ದು, ಆನಂತರ ನನ್ನ ಜೀವನದಲ್ಲಿ ನಡೆದದ್ದು ಎಲ್ಲವೂ ಕಣ್ಣ ಮುಂದಿತ್ತು. ಹಾಗಾಗಿ ಇನ್ನು ಭವಿಷ್ಯದ ಪ್ರಶ್ನೆ ಬೇಡ ಅಂದುಕೊಂಡು ಜ್ಯೋತಿಷಿಯನ್ನೇ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ನನ್ನ ಜೀವನದಲ್ಲಿ ಆಗಿ ಹೋದ ಘಟನೆಯ ಬಗ್ಗೆ ಕೇಳಿದೆ. ಈಗ ಆತನ ಜೊತೆ ಮಾತನಾಡುವ ಸರದಿ ನನ್ನದು ಅಂದು ಕೊಂಡು `ಈಗ ನೀವು ನನ್ನ ಭವಿಷ್ಯ ಹೇಳುವುದು ಬೇಡ...ಸರಿಯಾಗಿ ಮೂರು ತಿಂಗಳ ಹಿಂದೆ ನನ್ನ ಜೀವನದಲ್ಲಿ ಏನಾಯಿತು? ಅಂತ ಹೇಳಿ ಅಂದು ಬಿಟ್ಟೆ. ಆಗ ತನ್ನ ಇನ್ನಿಲ್ಲದ ಕವಡೆ, ಜ್ಯೋತಿಷ್ಯದ ಒಂದಷ್ಟು ಪುಸ್ತಕ, ಅಸ್ತ್ರ ಎಲ್ಲವನ್ನೂ ನನ್ನೆದುರಿಗಿಟ್ಟವನೇ ಭೂತಕಾಲದ ವಿವರ ಬಹಿರಂಗಕ್ಕೆ ಇಳಿದುಬಿಟ್ಟ. `ಏನ್ ಸಾರ್, ನಿಮ್ಮ ಜೀವನದಲ್ಲಿ ಹೀಗೆಲ್ಲಾ ಆಗಿ ಹೋಯ್ತು! ನಾನವತ್ತು ಹೇಳಿದ ಹಾಗೆಯೇ ಆಯ್ತಲ್ಲ. ಹೆಣ್ಣು ಮಗಳ ವಿಚಾರದಲ್ಲಿ ನೀವು ಸುಖಾಸುಮ್ಮನೆ ತೊಂದರೆ ಅನುಭವಿಸುತ್ತೀರಿ ಅಂದಿದ್ದೆ. ಅದು ಸರಿಯಾಗಿಯೇ ಆಗಿದೆ ಅಲ್ವಾ ಸಾರ್. ಮೊದಲು ಎಲ್ಲರೂ ನಿಮ್ಮದೇ ತಪ್ಪು ಅಂದುಕೊಂಡಿದ್ರೂ ಆದ್ರೆ ಈಗ ಎಲ್ಲರಿಗೂ ನಿಮ್ಮ ಬಗ್ಗೆ ಗೊತ್ತಾಗಿದೆ ಅಲ್ವಾ? ಮೊದಲ ಪ್ರೀತಿ ನಿಮ್ಮ ವಿಚಾರದಲ್ಲಿ ಸೋತು ಹೋಯ್ತಲ್ಲ ಸಾರ್...! ಅಂದು ಬಿಟ್ಟ.....ಈ ಮಧ್ಯೆ ನಿಮಗೆ ಒಂದು ವಾಹನಪಘಾತವಾಗಿದೆ...ಮೊದಲು ಮಾಡ್ತಾ ಇದ್ದ ಕೆಲಸ ಕೂಡ ಈಗ ಇಲ್ವಲ್ಲಾ? ಬೇರೆ ಕಲಸದಲ್ಲಿದ್ದೀರಲ್ಲಾ.....ಅಂದ ಲಕ್ಷ್ಮಣ ಜ್ಯೋತಿಷಿ....
ಆಗ ನಾನು ನಿಜಕ್ಕೂ ಶಾಕ್ ಆದೆ....!ಜ್ಯೋತಿಷ್ಯ, ಭವಿಷ್ಯ ಯಾವುದನ್ನೂ ನಂಬದ ನಾನು ಕೂಡ ಆತನ ಮಾತಿಗೆ ಸೋತು ಶರಣಾಗಬೇಕಾಯಿತು. ಕಾರಣ ಇಷ್ಟೇ....ಆತ ತನ್ನ ಭೂತಕಾಲದ ಬಗ್ಗೆ ಹೇಳಿದ ಇಂಚಿಂಚೂ ವಿಷಯಗಳು ಕಳೆದ ಒಂದು ವರ್ಷ ನಡೆದ ಘಟನೆಗಳ ಜೆರಾಕ್ಸ್ ಕಾಪಿಯಂತಿದ್ದವು......! ಅದರಲ್ಲೂ ನಾನು ಯಾರಲ್ಲಿಯೂ ಹೇಳದ ವಿಚಾರಗಳೂ ಲಕ್ಷ್ಮಣದ ಬಾಯಿಯಿಂದ ಹಾಗೇ ಉದುರುತ್ತಿದ್ದವು.
ಆಗ ನನಗೆ ಒಂದಂತೂ ಸ್ಪಷ್ಟವಾಗಿತ್ತು. ಹೈ-ಫೈ ಜೀವನ ನಡೆಸುವ ಸೋಕಾಲ್ಡ್ ಜ್ಯೋತಿಷಿಗಳ ಮಧ್ಯೆ ಲಕ್ಷ್ಮಣ್ನಂತಹ ಬೀದಿ ಸುತ್ತುವ ಜ್ಯೋತಿಷಿಗಳ ಭವಿಷ್ಯ ಎಷ್ಟು ಪವರ್ಫುಲ್ ಅನ್ನೋದು. ಕೆಲವೊಮ್ಮೆ ನಾವು ಇಂಥವರ ವೇಷ-ಭೂಷಣ, ಬದುಕುವ ರೀತಿಯನ್ನು ಕಂಡು ತಾತ್ಸರದಿಂದ ಕಾಣುತ್ತೇವೆ. ಆದರೆ ಬೀದಿ ಸುತ್ತಿ ಇವರು ಗಳಿಸಿಕೊಂಡ ಅತ್ಯಮೂಲ್ಯ ಜ್ಞಾಪಕಶಕ್ತಿ, ಇದ್ದಬದ್ದ ಪುಸ್ತಕ ಓದದೇ ಪಡೆದ ಒಂದಷ್ಟು ಭವಿಷ್ಯ ಹೇಳುವ ಗುಣ ನಿಜಕ್ಕೂ ಗ್ರೇಟ್ ಅನಿಸದೇ ಇರದು. ಅದರಲ್ಲೂ ಜ್ಯೋತಿಷ್ಯ ಬೇಕಾದ್ರೆ ಹೇಳ್ತೀನಿ...ಆದ್ರೆ ನಿಮ್ಮತ್ರ ಹಣ ಇಲ್ದೇ ಇದ್ರೆ ಪರ್ವಾಗಿಲ್ಲ ಎನ್ನುವ ಇವರ ಸ್ವಾಭಾವ....ಒಂದು ಹಂತಕ್ಕೆ ಅದಾಗಲೇ ನನ್ನಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿತ್ತು. ನನ್ನ ಜೀವನವನ್ನು ಇದ್ದಿದ್ದನ್ನು ಇದ್ದ ಹಾಗೆ ಕಟ್ಟಿಕೊಟ್ಟ ಲಕ್ಷ್ಮಣ್ರಂತಹ ಜ್ಯೋತಿಷಿಗಳ ಬಗ್ಗೆ ಅದ್ಯಾಕೋ ಒಂದಷ್ಟು ಗೌರವ ನನ್ನಲ್ಲೂ ಮೂಡಿದೆ. ಏನೇ ಆಗಲಿ ಭೂತ-ವರ್ತಮಾನ-ಭವಿಷ್ಯದ ನಡುವಿನ ಹಾದಿಯಲ್ಲಿ ಜ್ಯೋತಿಷ್ಯ ಎನ್ನುವುದು ಹೆಸರಿಗಷ್ಟೇ....ಬದುಕಿನಲ್ಲಿ ಇಂತದ್ದೇ ಆಗಬೇಕು ಅನ್ನುವುದಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಬಿಡಿ...ಅದಕ್ಕೆ ಇರಬೇಕು ಯೋಗರಾಜ್ ಭಟ್ಟರು `ಡ್ರಾಮಾ' ಚಿತ್ರದಲ್ಲಿ ಹೀಗೆ ಹೇಳಿದ್ದು......
ಪರ್ಪಂಚದಲ್ಲಿ ಮನುಷ್ಯ ತುಂಬಾ ಸಣ್ಣ ಆಸಾಮಿ...ಅವನಿರದೇ ಹೋದರೂನೂ ತಿರುಗುತ್ತಪ್ಪ ಈ ಭೂಮಿ....
ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡೋನಾ..? ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡೋನಾ....!
ಕೊನೆಗೆ ಲಕ್ಷ್ಮಣ್ ಜ್ಯೋತಿಷಿಯ ಮೊಬೈಲ್ ನಂಬರ್ ಪಡೆದು ಹೊರಟು ಬಿಟ್ಟೆ......ಆಗಲೂ ಅಷ್ಟೇ ಯಾವುದೇ ಪ್ರತಿಫಲ ಬಯಸದೇ `ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ, ಬದುಕಲ್ಲಿ ನೀವು ಗೆಲ್ತೀರಾ..! ಅಂದು ಬಿಟ್ಟ.......