Sunday 18 May 2014


ಮೋದಿ ಗೆಲುವು ಬಿಜೆಪಿ ಧ್ವಜದ ಜೊತೆ ಭಗವಾಧ್ವಜವನ್ನೂ ಬಲಗೊಳಿಸಿದೆಯೇ?

ನರೇಂದ್ರ ಮೋದಿಯೆಂಬ ವ್ಯ(ಶ)ಕ್ತಿಯನ್ನು ಬಿಜೆಪಿ ಚೆನ್ನಾಗಿಯೇ ಪ್ರಮೋಟ್ ಮಾಡಿದೆ. ಕಳೆದ ಸಪ್ಟೆಂಬರ್ ನಿಂದ ಚುನಾವಣೆ ಮುಗಿಯೋ ತನಕ ಬರೋಬ್ಬರಿ 250ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಮೋದಿಯೆಂಬ ಬಿಜೆಪಿಯ ಅಸ್ತ್ರವನ್ನ ಸಖತ್ತಾಗಿಯೇ ಬಳಸಿಕೊಳ್ಳಲಾಗಿದೆ. ವೇದಿಕೆ ಹತ್ತಿದರೆ ಸಾಕು ಮೇರಾ ಬಾಯಿಯೋ ಆರ್ ಬೆಹನೋ ಅನ್ನೋ ಮೋದಿಯ ಮಾತಿಗೆ ಇಡೀ ದೇಶವೇ ತಲೆ ದೂಗಿದೆ ಅನ್ನೋದನ್ನ ಫಲಿತಾಂಶ ಸಾಬೀತು ಪಡಿಸಿದೆ. ನರೇಂದ್ರ ಮೋದಿಯ ಈ ಗೆಲುವಿನಿಂದ ಈ ದೇಶ ಗುಜರಾತ್ ಆಗುತ್ತದೆ, ವೇಗವಾಗಿ ಅಭಿವೃದ್ದಿ ಹೊಂದುತ್ತೆ ಅನ್ನುವ ಕಲ್ಪನೆಗಿಂತಲೂ ಮಿಗಿಲಾಗಿ ಈ ದೇಶದಲ್ಲಿ ಮತ್ತೊಮ್ಮೆ ಸಂಘಪರಿವಾರ ಗಟ್ಟಿಯಾಗಿ ನೆಲೆ ಕಂಡು ಕೊಳ್ಳಲಿದೆ ಅನ್ನೋದನ್ನ ಸ್ಪಷ್ಟವಾಗಿ ಹೇಳಿ ಬಿಡಬಹುದು. ಹಿಂದುತ್ವದ ಪ್ರಯೋಗ ಶಾಲೆ ಅಂತಾನೆ ಕರೆಸಿಕೊಳ್ಳೋ ದಕ್ಷಿಣ ಕನ್ನಡದಲ್ಲಿ ಚುನಾವಣಾ ಮತ ಎಣಿಕೆ ಮುಗಿದ ತಕ್ಷಣ ಕೌಂಟಿಂಗ್ ಸೆಂಟರ್ ನ ಹೊರ ಭಾಗದಲ್ಲಿ ಮೊದಲಾಗಿ ರಾರಾಜಿಸಿದ್ದು ಇದೇ ಸಂಘಪರಿವಾರದ ಭಗವಾಧ್ವಜಗಳು! ಒಂದು ರಾಜಕೀಯ ಪಕ್ಷ ಗೆದ್ದರೆ ಸಾಕು ಅಲ್ಲಿ ರಾಜಕೀಯ ಪಕ್ಷದ ಬಾವುಟಗಳೇ ಕಾಣ ಸಿಗುತ್ತವೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಮೋದಿ ಗೆಲುವಿನ ಖುಷಿಯನ್ನ ಹೆಚ್ಚಾಗಿ ಹಂಚಿಕೊಂಢಿದ್ದು ಇದೇ ಸಂಘಪರಿವಾರದ ಕಾರ್ಯಕರ್ತರು ಅನ್ನೋದನ್ನ ಮತ್ತೆ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕೂಡ ಇದೇ ಭಗವಾಧ್ವಜವನ್ನು ಹಿಡಿದು ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಪಟ್ಟದ್ದು ಕೂಡ ಗಮನಾರ್ಹ. ಅದರಲ್ಲೂ ಬಿಜೆಪಿ ನಮಗೆ ಮುಖ್ಯವಲ್ಲ, ಮೋದಿ ಗೆದ್ರೆ ಸಾಕು ಅಂತ ಸ್ವತಃ ಅದೆಷ್ಟೋ ಸಂಘದ ಹುಡುಗರು ಮಂಗಳೂರಿನ ಬೀದಿಗಳಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರು. ಇನ್ನು ಆರ್ ಎಸ್ ಎಸ್, ಬಜರಂಗದಳ, ವಿಎಚ್ ಪಿಯಂತಹ ಹಿಂದೂ ಸಂಘಟನೆಗಳು ಜಿಲ್ಲೆಯಾದ್ಯಂತ ಬಿಜೆಪಿ ಪರವಾಗಿ ಸಾಕಷ್ಟು ಪ್ರಚಾರ ಕೂಡ ನಡಸಿದ್ದವು. ಹಾಗಂತ ಈ ಪ್ರಚಾರದ ಉದ್ದೇಶ  ಬಿಜೆಪಿ ಗೆಲ್ಲಬೇಕು, ನಳಿನ್ ಕುಮಾರ್ ಜಯಭೇರಿ ಬಾರಿಸಬೇಕು ಅನ್ನೋದಲ್ಲ. ಬದಲಾಗಿ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು ಅನ್ನೋದಾಗಿತ್ತು. ಅದರಂತೆ ಮೋದಿ ಗೆದ್ದಿದ್ದಾರೆ. ಈ ಗೆಲುವಿನ ಖುಷಿಯನ್ನ ಬಿಜೆಪಿ ಬಾವುಟದ ಜೊತೆಗೆ ಸಂಘದ ಭಗವಾಧ್ವಜವೂ ಹಂಚಿಕೊಂಡಿದೆ ಅಂದ್ರೆ ತಪ್ಪಿಲ್ಲ.

ಭಗವಾಧ್ವಜ ಹಾರಿಸಿ ಬಿಜೆಪಿ ಕಚೇರಿಯಲ್ಲಿ ಗೆಲುವನ್ನ ಸಂಭ್ರಮಿಸಿದ ನಳಿನ್ ಕುಮಾರ್ ಕಟೀಲ್


ಅಷ್ಟಕ್ಕೂ ಮೋದಿ ಗೆಲುವಿನಿಂದ ಸಂಘಕ್ಕೇನು ಲಾಭ?

ಹೌದು, ನರೇಂದ್ರ ಮೋದಿ ಪ್ರಧಾನಿಯಾದ್ರೆ ಸಂಘ ಪರಿವಾರಕ್ಕೇನು ಲಾಭ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದ್ರೆ ಮೋದಿ ಬಿಜೆಪಿಯ ಕಾರ್ಯಕರ್ತ ಅಥವಾ ಸದಸ್ಯ ಅನ್ನೋದಕ್ಕಿಂತಲೂ ಹೆಚ್ಚಾಗಿ ಈ ಹಿಂದೆ ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿದ ಒಬ್ಬ ಕಟ್ಟರ್ ಹಿಂದುತ್ವವಾದಿ ಅನ್ನೋದನ್ನ ಒಪ್ಪಲೇ ಬೇಕು. ಇದೇ ಕಾರಣಕ್ಕೆ ನರೇಂದ್ರ ಮೋದಿಗೆ ಹಿಂದುತ್ವದ ಬಗ್ಗೆ, ಹಿಂದೂ ಸಂಸ್ಕೃತಿಯ ಬಗ್ಗೆ ಇತರೆ ರಾಜಕಾರಣಿಗಳಿಗಿಂತ ಸ್ವಲ್ಪ ಹೆಚ್ಚೇ ಗೊತ್ತು. ಹಾಗಾಗಿ ಹಿಂದೂ ಸಂಘಟನೆಗಳ, ಸಂಘಪರಿವಾರದ ಯುವಕರ ಉದ್ದೇಶಗಳನ್ನ ಮೋದಿ ಈಡೇರಿಸುತ್ತಾರೆ ಅನ್ನೋದು ಹಿಂದೂ ಸಂಘಟನೆಗಳಲ್ಲಿರೋ ಕಾರ್ಯಕರ್ತರ ಭಾವನೆ. ಇದೇ ಕಾರಣಕ್ಕೆ ಈ ದೇಶಕ್ಕೆ ಸೂಕ್ತವಾದ ಪ್ರಧಾನಿ ಬೇಕು ಅನ್ನೋದಕ್ಕಿಂತಲೂ ಹೆಚ್ಚಾಗಿ ಹಿಂದುತ್ವದ ರಕ್ಷಣೆಗೆ ಒಬ್ಬ ಕಟ್ಟರ್ ಹಿಂದೂವಾದಿ ಬೇಕಾಗಿದೆ ಅನ್ನೋ ಕಾರಣಕ್ಕೆ ಹಿಂದೂ ಸಂಘಟನೆಗಳು ಬೀದಿಗಿಳಿದು ಮೋದಿ ಪರವಾಗಿ ಕೆಲಸ ಮಾಡಿವೆ. ಹಾಗಾಗಿಯೇ ಮೋದಿ ಗೆದ್ದಾಗ ಬಿಜೆಪಿ ಬಾವುಟದ ಜೊತೆಗೆ ಧೈರ್ಯವಾಗಿ ಭಗವಾದ್ವಜವೂ ರಾರಾಜಿಸಿದೆ.
ಬೊಂದೆಲ್ ನ ಕೌಂಟಿಂಗ್ ಸೆಂಟರ್ ಬಳಿ ಬಿಜೆಪಿ ಗೆಲುವಿನ ನಂತರ ಬಿಜೆಪಿ ಧ್ವಜದೊಂದಿಗೆ ರಾರಾಜಿಸಿದ ಭಗವಾಧ್ವಜ

ನಮಕ್ ಮೋದಿ ಬತ್ತ್ಂಡ ಯಾವು ಮಾರ್ರೆ....!(ನಮಗೆ ಮೋದಿ ಬಂದರೆ ಸಾಕು ಮಾರಾಯಾ..!)

ಈ ದೇಶದಲ್ಲಿ ಮೋದಿಯನ್ನ ಬಿಜೆಪಿ ಪ್ರಮೋಟ್ ಮಾಡಿದ ಕೆಲವೇ ತಿಂಗಳಲ್ಲಿ ಇಂಥದ್ದೊಂದು ಮಾತು ಮಂಗಳೂರಿನಲ್ಲಿ ಕೇಳಿ ಬರ ತೊಡಗಿತ್ತು. ನರೇಂದ್ರ ಮೋದಿ ಆರ್ ಎಸ್ ಎಸ್ ನ ಕಟ್ಟರ್ ಹಿಂಬಾಲಕ ಅನ್ನೋದು ಸಂಘದ ತಳಮಟ್ಟದ ಕಾರ್ಯಕರ್ತರಿಗೆ ತಿಳಿದದ್ದೇ ತಡ ಸಂಘದ ಶಾಖೆಗಳಲ್ಲೂ ಮೋದಿ ಪರವಾದ ಮಾತುಗಳು ಆರಂಭಗೊಂಡವು. ಮೋದಿಯನ್ನ ಗೆಲ್ಲಿಸಿದರೆ ಈ ದೇಶದಲ್ಲಿ ಹಿಂದುತ್ವವನ್ನ ಯಾವ ರೀತಿ ಬೆಳೆಸಬಹುದು ಅನ್ನೋ ಚರ್ಚೆಗಳು ಆರಂಭಗೊಂಡವು. ಈ ಎಲ್ಲಾ ಲೆಕ್ಕಾಚಾರಗಳಿಗೆ ಸಾಥ್ ನೀಡುವಂತೆ ನರೇಂದ್ರ ಮೋದಿಯವರ ಪ್ರತೀ ಭಾಷಣದಲ್ಲೂ ಹಿಂದುತ್ವ, ಹಿಂದೂ ಶಕ್ತಿ ಅನ್ನೋ ಮಾತುಗಳು ಕೂಡ ಜೋರಾಗಿಯೇ ಕೇಳಿ ಬಂದವು. ಹೀಗಾಗಿ ನಮ್ಮ ಯುವಕರಿಗೂ ಹಿಂದುತ್ವದ ರಕ್ಷಣೆಗೆ ಮೋದಿಯೇ ಸೂಕ್ತ ಅನ್ನೋದು ಸ್ಪಷ್ಟವಾಗಿ ಅರ್ಥವಾಗಿತ್ತು. ಹೀಗಾಗಿಯೇ ನರೇಂದ್ರ ಮೋದಿಯ ಗೆಲುವಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ಶ್ರಮಿಸಿದೆ ಅನ್ನೋದಕ್ಕಿಂತ ಜಿಲ್ಲೆಯ ಸಂಘದ ಹುಡುಗರು ಎಷ್ಟರ ಮಟ್ಟಿಗೆ ಶ್ರಮಿಸಿದ್ದಾರೆ ಅನ್ನೋದೆ ಮುಖ್ಯ. ಇನ್ನು ಜಿಲ್ಲೆಯ ಮೂಲೆ ಮೂಲೆಯಲ್ಲಿ ನಡೆದ ಹಿಂದೂ ಸಮಾಜೋತ್ಸವಗಳು ಕೂಡ ನರೇಂದ್ರ ಮೋದಿಯನ್ನ ಪರೋಕ್ಷವಾಗಿ ಪ್ರಧಾನಿ ಮಾಡಿ ಅನ್ನೋದನ್ನೇ ಸಾರಿ ಸಾರಿ ಹೇಳುತ್ತಿದ್ದವು. ಈ ದೇಶದಲ್ಲಿ ಈತನಕ ಯಾವ ಬಿಜೆಪಿ ಅಭ್ಯರ್ಥಿಗೂ ನೀಡದ ಭಾರೀ ಬೆಂಬಲವನ್ನ ಸಂಘದ ಹುಡುಗರು ಮೋದಿಗೆ ನೀಡಿದ್ದರು. ಹೋಂಸ್ಟೇ ಮತ್ತು ಪಬ್ ದಾಳಿಯ ವೇಳೆ ದ.ಕ ಜಿಲ್ಲೆಯ ಬಿಜೆಪಿ ಸಂಸದರು ಹಿಂದೂ ಯುವಕರ ಪರವಾಗಿ ನಿಲ್ಲಲಿಲ್ಲ. ಈ ಬಗ್ಗೆ ಸ್ವತಃ ಅದೆಷ್ಟೋ ಸಂಘಟನೆಯ ಕಾರ್ಯಕರ್ತರು ಅಸಮಾಧಾನ ತೋಡಿಕೊಂಡಿದ್ದಾರೆ. ಹೀಗಿದ್ದರೂ ಈ ಬಾರಿ ಅದೇ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದ್ದಾರೆ. ಆದ್ರೆ ಎಲ್ಲೂ ಕೂಡ ನಳಿನ್ ಗಾಗಲೀ ಬಿಜೆಪಿಗಾಗಲೀ ಮತ ನೀಡಿ ಅನ್ನೋ ಮಾತುಗಳು ಇರಲೇ ಇಲ್ಲ. ಬದಲಾಗಿ ಅಲ್ಲೆಲ್ಲಾ ಗೋಚರಿಸಿದ್ದ ಜಸ್ಟ್ ನರೇಂದ್ರ ಮೋದಿ!

ಮೋದಿ ಗೆಲುವು ಜಿಲ್ಲೆಯಲ್ಲಿ ಶಾಂತಿ ಕದಡಬಹುದೇ?

ಹೇಳಿ ಕೇಳಿ ಈಗ ಎಲ್ಲರ ಬಾಯಲ್ಲೂ ನಮೋ ನಮೋ. ಅದರಲ್ಲೂ ಮೊದಲೇ ಹೇಳಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರಂತೂ ಮೋದಿ ಗೆದ್ದಿದ್ದೇ ನಮ್ಮಿಂದ ಅನ್ನೋ ಅತ್ಯುತ್ಸಾಹದಲ್ಲಿದ್ದಾರೆ. ಆದ್ರೆ ಇದೇ ಉತ್ಸಾಹ ಮುಂದಿನ ದಿನಗಳಲ್ಲಿ ಜಿಲ್ಲೆಯ ಮಟ್ಟಿಗೆ ಬಹುದೊಡ್ಡ ಏಟು ಕೊಟ್ಟರೂ ಅಚ್ಚರಿಯಿಲ್ಲ. ಹಾಗಂತ ಇಲ್ಲಿ ಸಂಘದ ಹುಡುಗರೇ ಆಶಾಂತಿಯನ್ನ ಸೃಷ್ಟಿಸುತ್ತಾರೆ ಅಂತಾನೂ ಹೇಳೋಕಾಗೋಲ್ಲ. ಬದಲಾಗಿ ಸಂಘಟನೆಯ ಯುವಕರನ್ನ ಕೆಣಕಲು ಕಿಡಿಗೇಡಿಗಳು ಕೂಡ ಜಿಲ್ಲೆಯ ಶಾಂತಿಯನ್ನ ಕದಡಬಹುದು. ಇನ್ನು ಕೆಲ ಬಿಸಿ ರಕ್ತದ ಹಿಂದೂ ಸಂಘಟನೆಯ ಯುವಕರು ಕೂಡ ಮೋದಿ ಬೆನ್ನಿಗಿದ್ದಾರೆ ಎಂಬ ಹುಂಬ ಧೈರ್ಯದಲ್ಲಿ ಸುಖಾಸುಮ್ಮನೆ ತಗಾದೆ ತೆಗೆದರೂ ಅಚ್ಚರಿಯಿಲ್ಲ. ಇದೇ ಕಾರಣಕ್ಕೆ ಬಿಜೆಪಿಯ ಜೊತೆಗೆ ಸಂಘಪರಿವಾರವೂ ಇನ್ನಷ್ಟು ಗಟ್ಟಿಗೊಂಡಿದೆ ಅನ್ನೋದರಲ್ಲಿ ಯಾವುದೇ ತಪ್ಪಿಲ್ಲ ಬಿಡಿ. ಈ ಮಧ್ಯೆ ನರೇಂದ್ರ ಮೋದಿಗೂ ಕೂಡ ತನ್ನ ಆಡಳಿತದ ಮಧ್ಯೆ ಸಂಘಪರಿವಾರವನ್ನ ಎದುರು ಹಾಕಿಕೊಳ್ಳೋದಕ್ಕೆ ಆಗೋಲ್ಲ. ಇದಕ್ಕೆ ಕಾರಣ ಆರ್ ಎಸ್ ಎಸ್ ಮೋದಿಯ ಮಾತೃ ಸಂಘಟನೆ. ಅಷ್ಟೇ ಅಲ್ಲದೇ ಈ ಮೊದಲೇ ಹೇಳಿದಂತೆ ನರೇಂದ್ರ ಮೋದಿಯ ಗೆಲುವಿನಲ್ಲಿ ಹೆಚ್ಚಿನ ಪಾತ್ರವನ್ನ ಸಂಘದ ಹುಡುಗರು ವಹಿಸಿಕೊಂಡಿದ್ದಾರೆ. ಹೀಗಿರೋವಾಗ ಹಿಂದೂಗಳಿಗಾಗಿ ನರೇಂದ್ರ ಮೋದಿ ಕೊಟ್ಟಿರೋ ಆಶ್ವಾಸನೆಗಳನ್ನ ಈಡೇರಿಸಲೇ ಬೇಕಿದೆ. ಅದರಲ್ಲೂ ಮುಖ್ಯವಾಗಿ ರಾಮ ಮಂದಿರ ಕಟ್ಟಿಯೇ ಸಿದ್ದ ಅಂದಿದ್ದ ಮೋದಿಗೆ ಇದು ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ, ಅಸಲಿಗೆ ರಾಮ ಮಂದಿರ ವಿವಾದ ನ್ಯಾಯಾಲಯದ ಮೆಟ್ಟಿಲೇರಿರೋದ್ರಿಂದ ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ ನರೇಂದ್ರ ಮೋದಿಯಾಗಲೀ ಕೈ ಯಾಡಿಸೋದು ಸಾಧ್ಯವಿಲ್ಲ. ಹೀಗಿದ್ದರೂ ಓಟ್ ಬ್ಯಾಂಕ್ ಗಾಗಿ ಮತ್ತದೇ ವಾಜಪೇಯಿ ಶೈಲಿಯನ್ನ ಯಥಾವತ್ ಅನುಕರಣೆ ಮಾಡಿರೋ ನರೇಂದ್ರ ಮೋದಿಯವರು ಈ ಭರವಸೆಯಲ್ಲಿ ಎಡವೋದು ಖಂಡಿತಾ. ಹೀಗಾಗಿ ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯ ನಡೆ ಸಂಘದ ಹುಡುಗರ ಅಸಮಾಧಾನಕ್ಕೆ ಕಾರಣವಾದರೂ ಆಚ್ಚರಿಯಿಲ್ಲ. ಯಾಕೆಂದರೆ ಆಡಳಿತ ವ್ಯವಸ್ಥೆಯಲ್ಲಿ ಧರ್ಮವನ್ನ ತಂದರೆ ಈ ದೇಶದ ಕಾನೂನು ಸುವ್ಯವಸ್ಥೆಯೇ ಬುಡಮೇಲಾಗಬಹುದು. ಹಾಗಾಗಿ ಎಲ್ಲವನ್ನೂ ಬಲ್ಲವರಾಗಿರೋ ಮೋದಿ ಈ ವಿಚಾರದಲ್ಲಿ ಸೂಕ್ಷ್ಮವಾಗಿಯೇ ನಡೆದುಕೊಳ್ಳುತ್ತಾರೆ. ಆದರೆ ಇದು ಸಂಘದ ಹುಡುಗರಲ್ಲಿ ಮೋದಿ ಬಗ್ಗೆ ಆಕ್ರೋಶ ಹೆಚ್ಚಿಸಬಹುದು. ಹೀಗಾಗಿ ದೇಶದಲ್ಲಿ ದೊಡ್ಡ ಮಟ್ಟದ ಅಲೆ ಸೃಷ್ಟಿಸಿ ಮೋದಿ ಗೆದ್ದಿದ್ದರೂ ಎಲ್ಲರನ್ನೂ ಸಂತೃಪ್ತ ಪಡಿಸಿ ಆಡಳಿತ ನಡೆಸೋದು ನರೇಂದ್ರ ಮೋದಿಯವರಿಗೆ ಅಷ್ಟು ಸುಲಭದ ಮಾತಂತು ಅಲ್ಲವೇ ಅಲ್ಲ.

ಧ್ವನಿ......


No comments:

Post a Comment