Sunday, 6 May 2012

ಅನ್ಯ ಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ?

ಅನ್ಯ ಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ?


ಮೊನ್ನೆಯಷ್ಟೇ ಜಗತ್ತಿನ ಅತೀ ಶ್ರೀಮಂತ ದೇವಸ್ಥಾನ ಎನ್ನಲಾದ ತಿರುಪತಿಯಲ್ಲಿ ವಿವಾದವೊಂದು ಸದ್ದು ಮಾಡಿತು. ಆಂಧ್ರದ ಮಾಜಿ ಮುಖ್ಯ ಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿಯ ಪುತ್ರ ರಾಜಕೀಯ ಧುರೀಣ ಜಗನ್‌ಮೋಹನ್ ರೆಡ್ಡಿಯೇ ಈ ವಿವಾದದ ಕೇಂದ್ರ ಬಿಂದು. ಕ್ರೈಸ್ತ ಧರ್ಮೀಯ ಜಗನ್ ತಿರುಪತಿ ದೇವಾಲಯಕ್ಕೆ ಪ್ರವೇಶಿಸುವ ಮುನ್ನ ಕೆಲ ಕಟ್ಟುಕಟ್ಟಲೆಗಳನ್ನು ಪಾಲಿಸಿಲ್ಲ ಎನ್ನುವುದೇ ಈಗಿರುವ ವಿವಾದ. ದೇವಸ್ಥಾನದ ಮೂಲಗಳ ಪ್ರಕಾರ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯುವ ಮುನ್ನ ‘ನನಗೆ ತಿಮ್ಮಪ್ಪನ ಮೇಲೆ ನಂಬಿಕೆಯಿದೆ, ಅಪಾರ ಭಕ್ತಿಯಿದೆ ಎಂದು ಬರೆದುಕೊಟ್ಟು ಹೋಗಬೇಕೆಂತೆ! ಆದರೆ ಈ ಕಟ್ಟುಕಟ್ಟಲೆಗಳನ್ನು ಜಗನ್ ಪಾಲಿಸದೆ ವಿವಾದಕ್ಕೆ ಗುರಿಯಾಗಿದ್ದಾರೆ. ಆದರೆ ಇಲ್ಲಿ ಜಗನ್ ವಿವಾದಕ್ಕಿಂತಲೂ ಹೆಚ್ಚಾಗಿ ಚಿಂತಿಸ ಬೇಕಾದ ವಿಚಾರ ಅನ್ಯಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ ಎನ್ನುವುದು.
ನನ್ನ ಪ್ರಕಾರ ಮುಸ್ಲಿಮರ ಮಕ್ಕಾದಿಂದ ಹಿಡಿದು ಕ್ರೈಸ್ತರ ರೋಮ್ ಚರ್ಚಿನವರೆಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಭದ್ರತೆಯ ದೃಷ್ಟಿಯಿಂದ ತಪಾಸಣೆ ನಡೆಸುವುದನ್ನು ಬಿಟ್ಟರೆ ದೇಶದ ಬಹುತೇಕ ಚರ್ಚ್, ಮಸೀದಿಗಳಲ್ಲಿ ಅನ್ಯಧರ್ಮೀಯರ ಪ್ರವೇಶಕ್ಕೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಈ ಮಾತನ್ನು ಆಯಾ ಧರ್ಮಗಳ ಧಾರ್ಮಿಕ ನಾಯಕರುಗಳೇ ಪುಷ್ಠೀಕರಿಸುತ್ತಾರೆ. ಆದರೆ ಹಿಂದುಗಳ ಅತೀ ನಂಬಿಕೆಯ ಕ್ಷೇತ್ರವಾದ ತಿರುಪತಿಯಲ್ಲಿ ಮಾತ್ರ ಯಾಕೆ ಹೀಗೆ? ಅದು ಕೂಡ ಲಿಖಿತವಾಗಿ ಬರೆದುಕೊಟ್ಟ ನಂತರವಷ್ಟೇ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯಬೇಕು ಎನ್ನುವುದು ಎಷ್ಟು ಸರಿ? ಧರ್ಮ ಯಾವುದೇ ಆದರೂ ಕೆಲವರಿಗೆ ಬೇರೆ ಧರ್ಮದ ದೇವರಲ್ಲಿ ಅಪಾರ ನಂಬಿಕೆ. ಈ ವೇಳೆ ಆ ದೇವರ ದರ್ಶನ ಪಡೆಯುವುದು ಸಾಮಾನ್ಯ. ಉದಾಹರಣೆಗೆ ಕ್ರೈಸ್ತರ ಧಾರ್ಮಿಕ ಸ್ಥಳವಾದ ಕಾರ್ಕಳದ ಅತ್ತೂರು ಚರ್ಚ್‌ಗೆ ಭೇಟಿ ನೀಡುವ ಬಹುತೇಕ ಭಕ್ತರಲ್ಲಿ ಹಿಂದುಗಳ ಪಾಲು ಹೆಚ್ಚೇ ಎನ್ನಬಹುದು. ಇನ್ನು ಉಳ್ಳಾಲದ ಇತಿಹಾಸ ಪ್ರಸಿದ್ದ ದರ್ಗಾಕ್ಕೂ ಹಿಂದುಗಳು ಭೇಟಿ ಕೊಡುತ್ತಾರೆ. ಇದೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದು. ಹಿಂದುಗಳ ಶಬರಿಮಲೆಗೂ ಲಕ್ಷಾಂತರ ಸಂಖ್ಯೆಯಲ್ಲಿ ಅನ್ಯಧರ್ಮೀಯರು ಭೇಟಿ ಕೊಡುತ್ತಾರೆ. ಇಲ್ಲೂ ಯಾವುದೇ ರೀತಿಯ ನಿರ್ಬಂಧವಿಲ್ಲ. ಆದರೆ ತಿರುಪತಿಯಲ್ಲಿ ಈ ರೀತಿಯ ಕಟ್ಟುಕಟ್ಟಲೆಗಳನ್ನು ರೂಪಿಸಲು ಕಾರಣ ಏನು ಎನ್ನುವುದೇ ತಿಳಿಯುತ್ತಿಲ್ಲ.
ಹಿಂದೂ ಧರ್ಮವನ್ನು ಹೆಚ್ಚು ಹೆಚ್ಚು ಪ್ರಚಾರ ಪಡಿಸಬೇಕು, ನಮ್ಮ ಧರ್ಮ ಜಗತ್ತಿನಲ್ಲೇ ಮಾದರಿ ಧರ್ಮವಾಗಬೇಕು ಎನ್ನುವ ನಮ್ಮಲ್ಲಿ ಇಂತಹ ಆಚರಣೆಗಳಿದ್ದರೆ ಹೇಗೆ ತಾನೆ ಹಿಂದು ಧರ್ಮ ಜಗದ್ವಿಖ್ಯಾತವಾಗಲು ಸಾಧ್ಯ? ಹಿಂದು ಎನ್ನುವುದು ಧರ್ಮವಲ್ಲ, ಇದೊಂದು ಜೀವನ ವಿಧಾನ. ನಮ್ಮ ಆಚರಣೆಗಳು ಕೂಡ ನಮ್ಮ ಜೀವನ ವಿಧಾನಗಳೇ. ಹೀಗಿರುವಾಗ ತಿರುಪತಿಯಲ್ಲಿ ಆಚರಿಸಲ್ಪಡುತ್ತಿರುವ ಈ ಆಚರಣೆ ಹಿಂದೂ ವಿರೋಧಿಯಲ್ಲವೇ? ಈ ಬಗ್ಗೆ ಅಲ್ಲಿನ ಕೆಲವರು ಅದೆಷ್ಟೋ ಕಾರಣಗಳನ್ನು ನೀಡಬಹುದು. ಅನ್ಯಧರ್ಮೀಯರು ನಮ್ಮ ಸಂಸ್ಕೃತಿ ಪಾಲಿಸುವುದಿಲ್ಲ, ಅಶುದ್ದರಾಗಿ ದೇವಸ್ಥಾನ ಪ್ರವೇಶಿಸುತ್ತಾರೆ ಎನ್ನಬಹುದು. ಹಾಗೆಂದು ನಾವು ತಿಮ್ಮಪ್ಪನನ್ನು ನಂಬುತ್ತೇವೆ ಎಂದು ಲಿಖಿತವಾಗಿ ಬರೆದುಕೊಟ್ಟರೆ ಅನ್ಯಧರ್ಮೀಯರು ಸಂಸ್ಕೃತಿ ಕಲಿಯುತ್ತಾರೆಯೇ? ಅಥವಾ ಪರಿಪೂರ್ಣ ಶುದ್ದರಾಗಿಯೇ ದೇವಸ್ಥಾನ ಪ್ರವೇಶಿಸಿದಂತಾ ಗುತ್ತದೆಯೇ? ದೇವರ ಆರಾಧಕ ಕೇಂದ್ರಗಳು ಎಂದಿಗೂ ಇನ್ನೊಬ್ಬರ ಸ್ವತ್ತಲ್ಲ ಎನ್ನುವುದು ನೆನಪಿರಲಿ. ಅನ್ಯಧರ್ಮೀಯರು ಪ್ರವೇಶಿಸಿದ ತಕ್ಷಣ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ ಅನ್ನುವುದಾದರೆ ಇಂದಿಗೂ ನಮ್ಮ ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಹಾಳುಗೆಡಹುವ ಅದೆಷ್ಟೋ ವಿದ್ಯಮಾನಗಳು ನಡೆಯುತ್ತಿವೆ. ದೇವರ ಹೆಸರಿನಲ್ಲಿ ಆಡಳಿತ ಮಂಡಳಿಯೇ ಅನಾಚಾರ ನಡೆಸುತ್ತಿದೆ. ದೇವಸ್ಥಾನಗಳ ಜಗಳ ಬೀದಿಗೆ ಬಂದಿವೆ. ಅಷ್ಟೇ ಯಾಕೆ ವಿವಾದದ ಕೇಂದ್ರ ಬಿಂದುವಾದ ತಿರುಪತಿಯಲ್ಲೇ ದೇವರ ದರ್ಶನದ ವಿಚಾರವಾಗಿ ಅದೆಷ್ಟೋ ಬಾರಿ ವಿವಾದಗಳೆದ್ದಿವೆ. ಇಷ್ಟೆಲ್ಲಾ ಅನಾಚಾರಗಳು ದೇವಸ್ಥಾನದ ಅಂಗಳದಲ್ಲೇ ನಡೆದರೆ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುವುದಿಲ್ಲವೇ? ಒಂದು ವೇಳೆ ಇದರಿಂದ ಧಕ್ಕೆಯಾಗುವುದಿಲ್ಲ ಎನ್ನುವುದಾದರೆ ಅನ್ಯಧರ್ಮೀಯರ ಪ್ರವೇಶಕ್ಕೆ ತಿರುಪತಿಯಲ್ಲಿ ಅನುಸರಿಸುವ ನಿಯಮಗಳ ಬಗ್ಗೆ ನನ್ನ ಸಹಮತವಿದೆ.
ಇಂತಹ ಪದ್ದತಿ ತಿರುಪತಿಯಲ್ಲಿ ಮುಂದುವರೆದರೆ ವಿದೇಶಿಗರಿಗೆ ಜಗತ್ತಿನ ಅತೀ ಶ್ರೀಮಂತ ದೇವಾಲಯವನ್ನು ನೋಡುವ ಅವಕಾಶವೇ ತಪ್ಪಿ ಹೋಗಬಹುದು. ಇದರಿಂದ ಮುಂದೆ ನಮ್ಮ ಪ್ರವಾಸೋದ್ಯಮಕ್ಕೂ ಏಟು ಬೀಳಬಹುದು. ಒಂದು ವೇಳೆ ಕ್ರೈಸ್ತರಾಗಲಿ, ಮುಸ್ಲಿಮರಾಗಲಿ ಅವರ ಧಾರ್ಮಿಕ ಕೇಂದ್ರವನ್ನು ಪ್ರವೇಶಿಸುವ ಮುನ್ನ ಹಿಂದುಗಳು ಲಿಖಿತವಾಗಿ ‘ನಾನು ಏಸುವನ್ನು ನಂಬುತ್ತೇನೆ, ಅಪಾರ ಭಕ್ತಿಯಿದೆ ‘ನಾನು ಅಲ್ಲಾಹ್‌ನನ್ನು ನಂಬುತ್ತೇನೆ ಎಂದು ಬರೆದು ಕೊಡಿ ಎಂದರೆ ಏನಾಗಬೇಡ? ಒಮ್ಮೆ ಯೋಚಿಸಿ, ನಮ್ಮ ಹಿಂದೂ ಸಂಘಟನೆಗಳು ಇದಕ್ಕೆ ಮತಾಂತರದ ಹಣೆಪಟ್ಟಿ ಕಟ್ಟಿ ಗಲಾಟೆ ಎಬ್ಬಿಸುವುದಂತೂ ಗ್ಯಾರಂಟಿ. ಆದರೆ ಎಂದೂ ಅನ್ಯಧಮೀಯರ ಪ್ರವೇಶವನ್ನು ಇವರು ನಿರ್ಬಂಧಿಸಿಲ್ಲ. ಬಹುಶಃ ಹೀಗಾಗಿಯೋ ಏನೋ ಜಗತ್ತಿನಲ್ಲೇ ಕ್ರೈಸ್ತ ಧರ್ಮ ಅತೀ ದೊಡ್ಡ ಧರ್ಮವಾಗಿ ಬೆಳೆದಿರುವುದು.
ಹಿಂದೂಗಳಿಗೆ ನಮ್ಮದೇ ಆದ ಕೆಲವೊಂದು ಆಚರಣೆಗಳು, ಧಾರ್ಮಿಕ ನಂಬಿಕೆಗಳು ಇದೇ ಎನ್ನುವುದೇನೋ ಸರಿ. ಆದರೆ ಈ ನಂಬಿಕೆಯ ಹೆಸರಿನಲ್ಲಿ ಇತರೆ ಧರ್ಮೀಯರ ದೇವಸ್ಥಾನ ಪ್ರವೇಶಕ್ಕೆ ಲಿಖಿತ ಕಟ್ಟುಕಟ್ಟಲೆಗಳನ್ನು ವಿಧಿಸುವುದು ಸರಿಯಲ್ಲ. ಈಗಾಗಲೇ ತಿರುಪತಿ ಎನ್ನುವುದು ಹಣದ ಹೊಳೆ ಹರಿಸುವ ಧಾರ್ಮಿಕ ಕೇಂದ್ರವಾಗಿ ಬದಲಾಗಿದೆ. ಇಲ್ಲಿ ನಂಬಿಕೆ, ಭಕ್ತಿ, ಪೂಜೆಗೆ ಜಾಗವಿರುವುದು ಕೆಲವೇ ಸಕೆಂಡ್‌ಗಳಷ್ಟೇ. ಹೀಗಿರುವಾಗ ತಿಮ್ಮಪ್ಪನ ಸನ್ನಿಧಾನದಲ್ಲಿ ಇನ್ನಿಲ್ಲದ ನಿಯಮಗಳನ್ನು ಜಾರಿಗೆ ತಂದು ದೇವರ ಹೆಸರು ಕೆಡಿಸುವುದು ಎಷ್ಟು ಸರಿ?
ಹಿಂದು ಎಂಬ ಜೀವನ ವಿಧಾನವನ್ನು ಅನ್ಯಧರ್ಮಿಯರು ಆಚರಿಸಲಿ ಎಂದು ನಾವು ಹೇಳುವುದಿಲ್ಲ. ಅವರಾಗಿಯೇ ಇಷ್ಟಪಟ್ಟರೆ ವಿರೋಧಿಸುವವರೂ ಹಿಂದುಗಳಲ್ಲ. ಹೀಗಿರುವಾಗ ತಿರುಪತಿಯ ಘಟನೆಯನ್ನು ಹಿಂದುಗಳು ಖಂಡಿಸಲೇ ಬೇಕು. ರಾಮನಿಗೆ ರಾಮಮಂದಿರ ಕಟ್ಟಿ, ಜಗತ್ತಿಗೇ ಹಿಂದೂ ಧರ್ಮದ ಬಗ್ಗೆ ಸಾರಿ ಹೇಳಲು ಹೊರಟ ನಮಗೆ ಇಂಥ ಆಚರಣೆಗಳ ಅವಶ್ಯಕತೆ ಖಂಡಿತಾ ಇಲ್ಲ.

ಧ್ವನಿ

1 comment: