Monday, 16 April 2012

ಕೆಲವೊಮ್ಮೆ ಇಷ್ಟ ಆಗ್ತಾರೆ...ಇನ್ನು ಕೆಲವೊಮ್ಮೆ ದುಶ್ಮನ್ ಆಗ್ತಾರೆ!

ಕೆಲವೊಮ್ಮೆ ಇಷ್ಟ ಆಗ್ತಾರೆ...ಇನ್ನು ಕೆಲವೊಮ್ಮೆ ದುಶ್ಮನ್ ಆಗ್ತಾರೆ!

ಫ್ರೆಂಡ್ಸ್, ಆವತ್ತೊಮ್ಮೆ ನಾನು ನನಗೊಬ್ಬ ಗುರು ಇದಾರೆ ಅಂತ ಹೇಳಿದ್ದೆ. ಅವರು ಪಕ್ಕಾ ಪ್ರೋಫೆಶನಲ್ ಅಲ್ಲ ಅಂತಾನೂ ಹೇಳಿದ್ದೆ. ಅವರ ಬಗ್ಗೆ ಹೇಳೋಕೆ ಇನ್ನೂ ಇದೆ. ಆ ವ್ಯಕ್ತಿ ನನ್ನ ಪಾಲಿಗೆ ಜೀವನದ ಕೆಲವೊಂದು ಮಹತ್ವದ ಘಟ್ಟಗಳನ್ನು ಪರಿಚಯಿಸಿದ ಮಹಾಶಯ. ಸ್ವಲ್ಪ ಎಡಪಂಥೀಯ ಧೋರಣೆಗಳೇ ಆ ಮನುಷ್ಯನಿಗೆ ಜೀವಾಳ. ಹಾಗಂತ ತೀರಾ ಕಮ್ಯುನಿಷ್ಟ್ ಅಂತಾನೂ ಹೇಳೋಕಾಗಲ್ಲ. ಆದರೆ ಆ ವ್ಯಕ್ತಿಯ ಕೆಲವೊಂದು ಮಾತುಗಳು ಮಾತ್ರ ಯಾವ ಕಮ್ಯುನಿಷ್ಟ್ ಸಿದ್ದಾಂತದ ಪ್ರತಿಪಾದಕನಿಗೂ ಕಮ್ಮಿ ಇಲ್ಲ. ಅಪ್ಪಿ ತಪ್ಪಿ ನಾವೇನಾದ್ರೂ ಅವರ ಜೊತೆ ಮಾನವೀಯ ಸಂಬಂಧದ ಬಗ್ಗೆ ಕೇಳಿದೆವು ಅಂತ ಇಟ್ಕೊಳ್ಳಿ. ಇವರ ಬಾಯಿಯಿಂದ ಬರೋ ಮಾತು ಒಮ್ಮೊಮ್ಮೆ ಇಷ್ಟ ಆದ್ರೂ ಕೆಲವೊಮ್ಮೆ ಕೇಳೋಕೆ ತುಂಬಾ ಕಷ್ಟ ಆಗುತ್ತೆ. ಇನ್ನು ಇವರಿಗೂ ನನಗೂ ಅಷ್ಟಕ್ಕಷ್ಟೇ. ಆದ್ರೂ ನನ್ನ ಪಾಲಿಗೆ ಇವರು ಗುರು!
ಇವರ ಜೊತೆ ತುಂಬಾ ಸಲ ಜಗಳ ಮಾಡಿದೀನಿ, ಇವರ ಮಾತಿಗೆ ಎದುರು ಮಾತಾಡಿದೀನಿ, ಅಷ್ಟೇ ಯಾಕೆ ಒಂದ್ಸಲ ಇವರ ಎಲ್ಲಾ ಸಿದ್ದಾಂತಗಳನ್ನು, ಧೋರಣೆಗಳನ್ನು ಸಾರಸಗಟಾಗಿ ತಳ್ಳಿ ಹಾಕಿದ್ದೀನಿ ಕೂಡ. ಆದ್ರೆ ಈ ಮೊದಲೇ ಹೇಳಿದ ಹಾಗೆ ಸ್ವಲ್ಪ ಲೇಟಾಗಿ ಈ ವ್ಯಕ್ತಿಯ ಪ್ರತೀ ಮಾತನ್ನು ಒಬ್ಬನೇ ಕೂತು ಯೋಚನೆ ಮಾಡಿದ್ದೀನಿ. ಆಗೆಲ್ಲಾ ಇವರ ಮಾತು ಒಂದು ಹಂತಕ್ಕೆ ಸರಿ ಅನಿಸೋದು. ದೈನಂದಿನ ಜೀವನದಲ್ಲಿ ನಾನು ಈ ವ್ಯಕ್ತಿಯನ್ನು ತುಂಬಾ ಅಂದ್ರೆ ತುಂಬಾ ದ್ವೇಷಿಸ್ತಾ ಇದ್ದೆ. ಇವರ ಮಾತಿಗೆ ಎಷ್ಟು ಚಚರ್ೆ ಮಾಡೋಕೆ ಆಗುತ್ತೋ ಅಷ್ಟು ಚಚರ್ೆ ಮಾಡ್ತಾ ಇದ್ದೆ. ಆದ್ರೆ ರಾತ್ರಿ ಮಲಗೋವಾಗ ದುಶ್ಮನ್ಗಳೂ ಹತ್ತಿರ ಆಗ್ತಾರೆ ಅನ್ನೋ ಹಾಗೆ ಇವರ ಮಾತು ಮತ್ತೆ ಮತ್ತೆ ಕಾಡ್ತಾ ಇತ್ತು. ನನ್ನ ವಯಸ್ಸಿನ ಎರಡರಷ್ಟು ವಯಸ್ಸು ಈ ವ್ಯಕ್ತಿಗಾಗಿತ್ತು. ಆದರೆ ವೈವಾಹಿಕ ಬಂಧನದ ಹಳ್ಳಕ್ಕೆ ಮಾತ್ರ ಇವರು ಬೀಳಲಿಲ್ಲ. ಈ ಬಗ್ಗೆ ಕೇಳಿದ್ರೆ ಸಂಸಾರಿಕ ಜೀವನದ ನೈಜ ಆಶಯ ಏನೂ ಅನ್ನೋದನ್ನು ಯಾವ ಕಟ್ಟರ್ ಸಂಸಾರಿಯೂ ವಿವರಿಸದಷ್ಟು ಕ್ಲೀನ್ ಆ್ಯಂಡ್ ಕ್ಲೀಯರ್ ಆಗಿ ವಿವರಿಸ್ತಾರೆ. ನಮ್ಮಲ್ಲಿ ಸಂಸಾರ ಜೀವನದ ನೈಜ ಆಶಯ ಯಾರಿಗೂ ಗೊತ್ತಿಲ್ಲ, ಹಾಗಾಗಿ ನಾನು ಮದುವೆ ಆಗಿಲ್ಲ ಅಂತ ಹೇಳ್ತಾರೆ. ನಾವೇನಾದ್ರೂ ಮಧ್ಯೆ ಬಾಯಿ ಹಾಕಿದ್ರೆ ಆ ವ್ಯಕ್ತಿಯೊಂದಿಗೆ ಯುದ್ದ ಗೆದ್ದು ಬರೋದು ಅಷ್ಟು ಸಲೀಸಲ್ಲ ಬಿಡಿ.
ಅದೆಷ್ಟೂ ಸಲ ಬೆಳ್ಳಂಬೆಳಿಗ್ಗೆ ಇವರನ್ನು ಮಾತಿನಲ್ಲಿ ಸೋಲಿಸಬೇಕು ಅಂತಾನೆ ಸಿದ್ದವಾಗಿ ಬರ್ತಾ ಇದ್ದೆ. ಆದರೆ ಅದು ಅಷ್ಟು ಸುಲಭ ಅಲ್ಲ ಅನ್ನೋದು ಮತ್ತೆ ಗೊತ್ತಾಗ್ತಾ ಇತ್ತು! ಇಷ್ಟೆಲ್ಲಾ ಮಾತೋಡೋ ಈ ವ್ಯಕ್ತಿ ಡಿಗ್ರಿ ಬಿಡಿ ಪಿಯುಸಿನೂ ಮಾಡಿಲ್ಲ. ಆದ್ರೆ ಯಾವ  ಪ್ರೋಫೇಸರ್ಗೂ ಇರದ ತಲೆ ಈ ವ್ಯಕ್ತಿಗಿತ್ತೂ! ಬೆಳಿಗ್ಗಿನ ಪತ್ರಿಕೆ ಓದ್ತಾ ಇವರು ಕೋಡೋ ಅದೆಷ್ಟೋ ವರ್ಷಗಳ ಹಿಂದಿನ ಉದಾಹರಣೆಗಳನ್ನ ನೋಡ್ತಾ ಇದ್ರೆ ಇಪ್ಪತ್ತು ವರ್ಷಗಳ ಹಿಂದಿನ ಸುದ್ದಿ ಪತ್ರಿಕೆಯೇ ಕಣ್ಣ ಮುಂದೆ ಪ್ರತ್ಯಕ್ಷ ಆದ ಹಾಗೆ ಅನಿಸ್ತ್ತಾ ಇತ್ತು. ಲೆಕ್ಕಾಚಾರದಲ್ಲಿ, ಮೆಮೋರಿ ಪವರ್ನಲ್ಲಿ ಈ ವ್ಯಕ್ತಿ ತುಂಬಾನೇ ಪಕ್ಕಾ. ಒಮ್ಮೊಮ್ಮೆ ಇವರ ಮಾತು ಕೇಳ್ತಾ ಇದ್ರೆ ಇವರ್ ಯಾಕ್ ಇಷ್ಟು ಸಣ್ಣ ವ್ಯಕ್ತಿ ಆದ್ರೂ ಅಂತ ಅನಿಸುತ್ತೆ. ಇಂಥ ಬುಧ್ದಿವಂತಿಕೆ ಯಾಕ್ ಇವರನ್ನು ಎತ್ತರಕ್ಕೆ ಏರಿಸಲಿಲ್ಲ ಅಂತ ಅನಿಸುತ್ತೆ...ಆದರೆ ಅದಕ್ಕೂ ಈ ವ್ಯಕ್ತಿಯಲ್ಲೇ ಉತ್ತರ ಇದೆ...
ತಾನು ಬುದ್ದಿವಂತ, ಸಿದ್ದಾಂತವಾದಿ, ಎಡಪಂಥೀಯ ಅನ್ನೋ ಥರ ಈ ವ್ಯಕ್ತಿಯ ವರ್ತನೆ ಇರಲಿಲ್ಲ. ಆದರೆ ಇವರ ತನ್ನ ಮಾತುಗಳಿಂದಲೇ ಎಲ್ಲರಿಗೂ ದುಶ್ಮನ್ ಆಗ್ತಾ ಇದ್ರೂ! ಇನ್ನೊಬ್ಬರ ತಪ್ಪನ್ನು ಮುಖಕ್ಕೆ `ಪಟಾರ್! ಅಂತ ಒಡೆದ ಹಾಗೆ ಹೆಳ್ತಾ ಇದ್ರೂ...ಇದು ಸಹಜವಾಗಿಯೇ ಎಲ್ಲರಿಗೂ ಕೋಪ ತರಿಸುತ್ತೆ. ಬಹುಶಃ ನನಗೂ ಇವರ ಮೇಲೆ ಹೆಚ್ಚು ಕೋಪ ತರಿಸಿದ್ದು ಇದೇ ಇರಬೇಕು. ಇನ್ನು ಇವರಿಗೆ ಸೆಂಟಿಮೆಂಟ್ ಅಂದ್ರೇನೇ ಆಗೋದಿಲ್ಲ. ಆ ಬಗ್ಗೆ ನಾವೇನಾದ್ರೂ ಮಾತಿಗಿಳಿದರೆ ಪ್ರೀತಿ ಬಗ್ಗೆ ಒಂದ್ ಸಿನಿಮಾನೇ ತೆಗೆದು ಬಿಡಬಹುದು ಅಂತ ಕಥೆ ಹೇಳ್ತಾರೆ! ಈ ವ್ಯಕ್ತಿ ಒಂಥರಾ ವಿಚಿತ್ರ. ಇವರ ಕೌಟುಂಬಿಕ ಹಿನ್ನೆಲೆಯೇ ಒಮ್ಮೆಗೆ ಆಶ್ಚರ್ಯ ಹುಟ್ಟಿಸುತ್ತೆ. ಅವರು ಜೀವನದಲ್ಲಿ ಯಾರನ್ನೂ ಪ್ರೀತಿಸಲಿಲ್ವ್ವಂತೆ, ಪ್ರೀತಿಸಿದ್ದು ಅವರ ತಾಯಿ ಒಬ್ಬರನ್ನೇ, ಇನ್ನು ಕಣ್ಣೀರು ಹಾಕಿದ್ದು ಕೂಡ ಆ ತಾಯಿ ತೀರಿ ಕೊಂಡಗಳೇ ಅನ್ನೋದು ಅವರ ಮಾತು. ಕೆಲವೊಮ್ಮೆ ತೀರಾ ಸೆನ್ಸಿಟಿವ್ ಅನಿಸಿಬಿಡ್ತಾರೆ,...ತುಂಬಾ ಹತ್ತಿರ ಆಗ್ತಾರೆ...ನಮ್ಮ ಎಲ್ಲಾ ನೋವನ್ನೂ ಇವರ ಜೊತೆ ಹೇಳ್ಬೇಕು ಅನಿಸುತ್ತೆ...ಗೊತ್ತಿದ್ದೋ ಗೊತ್ತಿಲ್ದೇನೋ ಕೆಲವೊಮ್ಮೆ ಈ ವ್ಯಕ್ತಿ ಜೊತೆ ತೀರಾ ಪರ್ಸನಲ್ ವಿಚಾರಗಳನ್ನು ಶೇರ್ ಮಾಡಿದ್ದೀನಿ..ಆದ್ರೂ ಅವರು ನನ್ನ ಪಾಲಿಗೆ ದುಶ್ಮನ್!
ಯಾಕೆ ಅವರು ನನ್ನ ಪಾಲಿಗೆ ದುಶ್ಮನ್ ಆದ್ರೂ ಅಂತ ಯೋಚನೆ ಮಾಡಿದ್ರೆ ಉತ್ತರ ಸಿಗೋದೇ ಇಲ್ಲ. ಬಹುಶಃ ಆ ವ್ಯಕ್ತಿ ಯಾರ ಹಿತವನ್ನು ಬಯಸದೇ ಇರೋದೇ ಇದಕ್ಕೆ ಕಾರಣವಾ? ಅಥವಾ ಎಲ್ಲರ ತಪ್ಪನ್ನು ಎತ್ತಿ ಹಿಡಿಯೋದೇ ಇದಕ್ಕೆ ಕಾರಣವಾ? ಇದ್ರೂ ಇರಬಹುದು ಅಲ್ವಾ?
ಆದ್ರೆ ಒಂದಂತೂ ಸತ್ಯ. ನಾವೆಲ್ಲಾ ಇನ್ನೊಬ್ಬರೂ ತಪ್ಪು ಮಾಡಿದ್ರೂ ಅವರ ಎದುರಲ್ಲೇ ಹೇಳೋದಕ್ಕೆ ಹೋಗೋದಿಲ್ಲ. ಕಾರಣ ನಮ್ಮ ಸ್ವಾರ್ಥ ಇರಬಹುದು, ಅಥವಾ ಅವರ ಭಯ ಇರಬಹುದು, ಅಥವಾ ಸಂಬಂಧ ಹಾಳ್ ಮಾಡೋದು ಬೇಡ ಅನ್ನೋ ಮನಸ್ಥಿತಿ ಇರಬಹುದು. ಆದ್ರೆ ಈ ವ್ಯಕ್ತಿ ಅದಕ್ಕೂ ಉತ್ತರ ಆಗ್ತಾರೆ. ಇವರು ಯಾವತ್ತಿದ್ರೂ ಏಕಾಂಗಿ...ತಪ್ಪನ್ನು ಎತ್ತಿ ಹಿಡಿಯೋ ವ್ಯಕ್ತಿ..ಇಲ್ಲಿ ಎಲ್ಲರೊಂದಿಗೂ ದ್ವೇಷ ಕಟ್ಟಿಕೊಳ್ಳುವ ವ್ಯಕ್ತಿತ್ವ...ಕೆಲವೊಮ್ಮೆ ಇವರ ವ್ಯಕ್ತಿತ್ವ ನನಗೆ ತುಂಬಾನೇ ಅಂದ್ರೆ ತುಂಬಾನೇ ಇಷ್ಟ ಆಗಿದೆ....ಕೆಲವೊಮ್ಮೆ ನಾವಿಬ್ಬರೂ ಅಜನ್ಮ ದುಶ್ಮನ್ಗಳಾಗರ್ತೀವಿ...! ಆದ್ರೆ ಒಂದಂತೂ ಸತ್ಯ...ಈ ವ್ಯಕ್ತಿಯಿಂದ ನಾನು ಜೀವನದಲ್ಲಿ ಕಲಿತುಕೊಂಡ ಪಾಠ ಇದೆಯಲ್ಲ...ಬಹುಶಃ ಅದು ಯಾವ ಡಿಗ್ರೀನಲ್ಲೂ ಕಲಿಸೋಕೆ ಸಾಧ್ಯನೇ ಇಲ್ಲ.....
 

No comments:

Post a Comment