Tuesday, 6 August 2013


ಗೋಸಾಗಾಟ ಮತ್ತೆ ಗಲಭೆಗೆ ಹೇತುವಾಗಬೇಕೇ?
ಹಿಂದೂ-ಮುಸ್ಲಿಮರ ಮನಸ್ಥಿತಿ ಬದಲಾಗಬೇಕಿದೆ!


ಇಡೀ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಕೋಮು ಸಂಘರ್ಷಕ್ಕೆ ಕುಖ್ಯಾತಿ ಪಡೆದ ಪ್ರದೇಶ. ಇಲ್ಲಿ ನೀರಿಗಾಗಿ, ಭಾಷೆಗಾಗಿ ಹೋರಾಟ ಮಾಡುವವರಿಗಿಂತ ಧರ್ಮದ ವಿಚಾರದಲ್ಲಿ ಬೀದಿಗಿಳಿಯುವ ಬಹುದೊಡ್ಡ ವರ್ಗವೇ ಇದೆ. ಇಲ್ಲಿನ ಜನರು ತಮ್ಮ ತಮ್ಮ ಧರ್ಮಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಕೊಡುವ ಕಾರಣ ಧರ್ಮ ನಿಂದನೆಯಂತಹ ವಿಚಾರಗಳು ಕೋಮು ಸಂಘರ್ಷಗಳಾಗಿ ಬದಲಾಗುತ್ತಿವೆ. ಈ ಹಿಂದೆ ಇಡೀ ಜಿಲ್ಲೆಯನ್ನೇ ಹೊತ್ತಿ ಉರಿಸುವ ಮೂಲಕ ಇತಿಹಾಸದ ಪುಟ ಸೇರಿರುವ ಪ್ರತೀ ಗಲಭೆಯಲ್ಲೂ ಇಲ್ಲಿನ ಜನರ ಜಾತಿ ಪ್ರೀತಿಯ ಛಾಯೆ ಎದ್ದು ಕಾಣುತ್ತದೆ. ಅದರಲ್ಲೂ ಮುಖ್ಯವಾಗಿ ಹಿಂದೂಗಳ ಪಾಲಿಗೆ ಪವಿತ್ರವೆನಿಸಿರುವ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವುದೇ ಜಿಲ್ಲೆಯಲ್ಲಿ ನಡೆಯುವ ಕೋಮು ಸಂಘರ್ಷಗಳಿಗೆ ಹೇತುವಾಗುತ್ತಿದೆ ಎನ್ನುವುದು ದುರಂತ.
ಅದರಲ್ಲೋ ಇತ್ತೀಚಿನ ದಿನಗಳಲ್ಲಿ ಗೋವುಗಳ ಅಕ್ರಮ ಸಾಗಾಟ ಮಿತಿಮೀರಿದೆ. ತಲವಾರು ತೋರಿಸಿ ದನ ಕಳವು ಮಾಡುವ ಹಂತಕ್ಕೆ ದುಷ್ಕಮರ್ಿಗಳು ಇಳಿದಿರುವುದು ನಿಜಕ್ಕೂ ದುರಂತ. ಮುಂದೊಂದು ದಿನ ಇಂತದ್ದೇ ಘಟನೆ ಮತ್ತೊಂದು ಗಲಭೆಗೆ ಮುನ್ನುಡಿ ಬರೆದರೆ ಆಶ್ಚರ್ಯವಿಲ್ಲ ಬಿಡಿ.

ಹಿಂದೂಗಳ ಪಾಲಿಗೆ ಅತೀ ಪವಿತ್ರವೆನಿಸಿರುವ ಗೋವುಗಳ ರಕ್ಷಣೆಗೆ ಹಿಂದೂ ಸಂಘಟನೆಗಳು ಟೊಂಕಕಟ್ಟಿ ನಿಲ್ಲುತ್ತವೆ. ಧಾಮರ್ಿಕ ನಂಬಿಕೆಯ ಪ್ರತೀಕವೆನಿಸಿದ ಗೋವುಗಳ ರಕ್ಷಣೆಗೆ ನಿಲ್ಲುವುದು ಸಹಜವೇ ಅನ್ನೋಣ. ಆದರೆ ಮುಂದಾಗುವ ಅನಾಹುತಗಳು ಮಾತ್ರ ಅಸಹಜ ಎನ್ನುವುದು ಅರಿಯಬೇಕಾದ ವಿಚಾರ. ಒಂದು ಧರ್ಮಕ್ಕೆ ಪವಿತ್ರವೆನಿಸಿರುವ ಗೋವು ಇನ್ನೊಂದು ಧರ್ಮದ ಕೆಲವರಿಗೆ ಆಹಾರ ಪದ್ದತಿ ಎನಿಸಿಕೊಂಡಿದೆ. ಪರ-ವಿರೋಧಗಳ ನಡುವೆಯೂ ತಿಂಗಳಿಗೆ ಹೆಚ್ಚೆಂದರೂ ಆರೇಳು ಗೋಸಾಗಾಟದ ವಿದ್ಯಮಾನಗಳು ಬೆಳಕಿಗೆ ಬರುತ್ತಲೇ ಇವೆ. ಇಷ್ಟೆಲ್ಲಾ ಆದರೂ ನಮ್ಮ ಪೊಲೀಸ್ ಇಲಾಖೆ ಮಾತ್ರ ಬೆಚ್ಚಗೆ ಕೂತು ಚೆಂದ ನೋಡುತ್ತಿರುವುದು ವಿಪಯರ್ಾಸ. ಬೆಂಕಿ ಬಿದ್ದಾಗ ಬಾವಿ ತೋಡುವ ಬದಲು ಇದರ ವಿರುದ್ದ ಮೊದಲಾಗಿಯೇ ಕ್ರಮ ಕೈಗೊಂಡು ಗಲಭೆಗೆ ಆಸ್ಪದ ನೀಡುವುದನ್ನು ತಪ್ಪಿಸಬಹುದು ಎಂಬ ಮಾತು ಶಾಂತಿಪ್ರಿಯರದ್ದು.
ಗೋವು ಹಿಂದೂಗಳ ಧಾಮರ್ಿಕ ನಂಬಿಕೆ, ಮುಸ್ಲಿಮರ ಆಹಾರ ವಸ್ತು ಎನ್ನುವುದಕ್ಕಿಂತಲೂ ಹೆಚ್ಚಾಗಿ ಕಳೆದ ಕೆಲ ದಿನಗಳಿಂದ ಕೋಮು ದಳ್ಳುರಿಗೆ ಕಾರಣವಾಗಬಹುದಾದ ಒಂದು ವಿಚಾರವಾಗಿ ಹೋಗಿದೆ. ಸಾಗಾಟಗಾರರ ಮತ್ತು ಹಿಂದೂ ಸಂಘಟನೆಗಳ ಮಧ್ಯೆ ನಡೆಯುವ ಸಣ್ಣಪುಟ್ಟ ಗಲಾಟೆಗಳಿಗೆ ಲೆಕ್ಕವಿಲ್ಲದಂತಾಗಿದೆ. ಕೆಲವೊಂದು ಕಡೆಗಳಲ್ಲಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಪ್ರಕರಣದ ಫೈಲ್ ಕ್ಲೋಸ್ ಆಗುವಲ್ಲಿ ಮುಕ್ತಾಯವಾದರೆ ಇನ್ನು ಕೆಲವು ಕಡೆ ಎರಡು ಧರ್ಮಗಳ ಸಂಘರ್ಷಕ್ಕೆ ದಾರಿ ಮಾಡಿ ಕೊಡುತ್ತಿದೆ. ಇಷ್ಟೆಲ್ಲಾ ಆದರೂ ಕರಾವಳಿಯ ಎರಡು ಧರ್ಮಗಳು ಈ ವಿಚಾರದ ಬಗ್ಗೆ ಅಷ್ಟು ಗಂಭೀರವಾಗಿ ಚಿಂತಿಸಿದಂತೆ ತೋರುತ್ತಿಲ್ಲ. ಇಲ್ಲಿ ಧಾಮರ್ಿಕ ನಂಬಿಕೆ, ಆಹಾರ ವಸ್ತು ಎನ್ನುವುದಕ್ಕಿಂತಲೂ ಕಲಹಕ್ಕೆ ಕಾರಣವಗುವ ವಿಚಾರ ಎನ್ನುವುದನ್ನಾದರೂ ಜಿಲ್ಲೆಯ ಜನತೆ ಗ್ರ್ಪ್ರಹಿಸಿಕೊಳ್ಳುವ ಅಗತ್ಯತೆ ಇದೆ.

ಎಲ್ಲಾ ಧರ್ಮದಲ್ಲೂ ದುರುಳರು ಇದ್ದೇ ಇರುತ್ತಾರೆ. ಅದರಲ್ಲೂ ಕೋಮು ದಳ್ಳುರಿಯ ಕಿಡಿ ಹಚ್ಚಿ ವಿಕೃತ ಆನಂದ ಪಡೆಯುವವರ ಸಂಖ್ಯೆ ಸ್ವಲ್ಪ ಹೆಚ್ಚೇ ಎನ್ನಬಹುದು. ಆದರೆ ಇಂಥವರ ಮಧ್ಯೆ ಶಾಂತಿಪ್ರಿಯ ಹಿಂದೂ-ಮುಸ್ಲಿಮರ ಮನಸ್ಥಿತಿಯಲ್ಲಿ ಕೊಂಚ ಬದಲಾವಣೆ ಬೇಕಿದೆ. ಗೋಸಾಗಾಟದ ವಿಚಾರ ಬಂದಾಗ ಅದನ್ನು ತಡೆಯುವ ಸಣ್ಣ ಪ್ರಯತ್ನವನ್ನು ಜಿಲ್ಲೆಯ ಸಹೃದಯಿ ಮುಸಲ್ಮಾನ ಬಾಂಧವರು ಮಾಡಬೇಕಿದೆ. ಗೋವು ಆಹಾರ ವಸ್ತು ಎನ್ನುವುದಕ್ಕಿಂತಲೂ ಗಲಭೆಯ ವಸ್ತುವಾಗಿ ಹೋಗುತ್ತಿರುವಾಗ ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಮನಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ತರಬೇಕಾದ ಅಗತ್ಯತೆ ಖಂಡಿತಾ ಇದೆ. ಯಾಕೆಂದರೆ ಇಲ್ಲಿ ಪ್ರತಿಷ್ಟೆಯ ವಿಚಾರಕ್ಕಿಂತ, ಆಹಾರ ಪದ್ದತಿಯ ವಿವಾದಕ್ಕಿಂತ ಮುಖ್ಯವಾಗಿ ಶಾಂತಿ-ಸುವ್ಯವಸ್ಥೆಯ ಪಾತ್ರ ಪ್ರಮುಖವಾದದ್ದು. ನಮ್ಮಿಂದಲೇ ಇದನ್ನೆಲ್ಲಾ ತಡೆಯಲು ಸಾಕಷ್ಟು ಅವಕಾಶಗಳಿರುವಾಗ ಪೊಲೀಸರ ತಲೆಗೆ ಕಟ್ಟಿ ಕೂರುವುದು ಅಷ್ಟು ಸಮಂಜಸವಲ್ಲ.

ಉಳಿದಂತೆ ಈ ವಿಚಾರದಲ್ಲಿ ಹಿಂದೂಗಳ ಮನಸ್ಥಿತಿಯಲ್ಲೂ ಕೊಂಚ ಬದಲಾವಣೆಯಾಗಬೇಕು. ಗೋಸಾಗಾಟ ನಡೆಯುತ್ತಿದೆ ಎಂದ ತಕ್ಷಣ ಮುಗಿಬಿದ್ದು ವಾಹನಗಳ ಬೆನ್ನುಬೀಳುವ ಬದಲು ಇಲಾಖೆಯ ಸಹಕಾರ ಪಡೆಯುವುದು ಉತ್ತಮ. ಕೆಲದಿನಗಳಲ್ಲಿ ಸಂಘಟನೆಯವರು ಇಲಾಖೆಗೆ ಸುದ್ದಿ ಮುಟ್ಟಿಸಿಯೇ ಮುಂದಡಿಯಿಡುತ್ತಿರುವುದು ಶ್ಲಾಘನೀಯವಾದರೂ ಒಂದೆರೆಡು ಕಡೆ ಆಕ್ರೋಶದ ಹಲ್ಲೆಗಳು ನಡೆದಿದೆ. ಪ್ರತೀ ಬಾರಿ ದಾಳಿಯೊಂದೇ ಪರಿಹಾರವಲ್ಲ. ದಾಳಿಗಳೇ ಮುಂದೆ ಗಲಭೆಗೆ ಕಾರಣವಾದ ಅದೆಷ್ಟೋ ಉದಾಹರಣೆಗಳು ನಮ್ಮಲ್ಲಿವೆ. ಹೀಗಾಗಿ ಬೆನ್ನಟ್ಟಿ ದಾಳಿ ನಡೆಸಿ ಹಲ್ಲೆ ನಡೆಸುವುದು ಸಮಂಜಸವಲ್ಲ. ಅಲ್ಲದೇ ಶಾಂತಿಪ್ರಿಯ ಹಿಂದೂ ಧರ್ಮಕ್ಕೆ ಇಂತಹ ಘಟನೆಗಳು ತಕ್ಕುದಲ್ಲ ಎನ್ನುವುದು ನನ್ನ ಅಭಿಪ್ರಾಯ.
ನೆನಪಿರಲಿ, ಜಿಲ್ಲೆ ಕಂಡ ಪ್ರತೀ ಕೋಮುಗಲಭೆಯಲ್ಲೂ ಅಪಾರ ಸಾವು-ನೋವು ಸಂಭವಿಸಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದರ ಜೊತೆಗೆ ಒಂದಷ್ಟೂ ಹಾನಿಯೂ ಆಗಿದೆ. ಇವೆಲ್ಲವಕ್ಕೂ ಸಾಕ್ಷಿಯಾಗಿದ್ದ ಕಡಲತಡಿ ಇಂದು ಒಂದು ಹಂತಕ್ಕೆ ಶಾಂತವಾಗಿದೆ ಎನ್ನುವುದೇ ನಿಟ್ಟುಸಿರು ಬಿಡುವ ವಿಚಾರ. ಇದೀಗ ಮತ್ತೆ ಗೋಸಾಗಾಟ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುವುದು ಬೇಡ ಎನ್ನುವುದೇ ಎಲ್ಲರ ಆಶಯ.