ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಅಂದಂಗಾಯ್ತು ತಾಳಿ ಕಿತ್ತು ಹಾಕೋ ಚಳುವಳಿ!
ಮಟ್ಟದಲ್ಲಿ ಬೆಳೆಯುತ್ತಿದ್ದಾರೋ ಗೊತ್ತಿಲ್ಲ. ಆದ್ರೆ ಪ್ರಗತಿಪರರು, ಬುದ್ದಿಜೀವಿಗಳು ಅನ್ನೋ ಹೆಸ್ರಿನಲ್ಲಿ ದೇಶದಲ್ಲಿ
ಅರಾಜಕತೆ ಸೃಷ್ಟಿಸೋ ಪ್ರಯತ್ನವಂತೂ ಸದ್ದಿಲ್ಲದೇ ನಡೆಯುತ್ತಿದೆ ಅನ್ನೋದಂತೂ ಸ್ಪಷ್ಟ. ಇದರ ಸ್ಯಾಂಪಲ್ ಎಂಬಂತೆ
ತಮಿಳುನಾಡಿನ ಸಂಘಟನೆಯೊಂದು ನೇರವಾಗಿ ಹೆಣ್ಣಿನ ತಾಳಿಗೆ ಕೈ ಹಾಕಿದೆ. ತಾಳಿ ಅನ್ನೋದು ಹೆಣ್ಮಕ್ಕಳ ದಾಸ್ಯದ
ಸಂಕೇತ, ಇದ್ರಲ್ಲಿ ಹೆಣ್ಣನ್ನ ಗುಲಾಮಳಂತೆ ಕಾಣಲಾಗುತ್ತೆ ಅಂತ ವಾದ ಮಂಡಿಸಿದೆ. ಹೀಗಾಗಿಯೇ ತಾಳಿಯನ್ನ ಕಿತ್ತು
ಹಾಕಿಸೋ ಮೂಲಕ ವಿವಾಹಿತ ಮಹಿಳೆಯನ್ನ ದಾಸ್ಯದಿಂದ ಮುಕ್ತವಾಗಿಸೋ ಪ್ರಯತ್ನ ಮುಕ್ತವಾಗಿ ನಡೀತಾ ಇದೆ!
ಇದ್ರ ಮಧ್ಯೆ ಈ ತಾಳಿ ಸಂಸ್ಕೃತಿಯನ್ನ ಬ್ರಾಹ್ಮಣರು ಹೇರಿದ್ದು ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ಇದನ್ನೆಲ್ಲಾ
ನೋಡಿದ್ರೆ ಒಂದಂತೂ ಸತ್ಯ...ತಾಳಿ ಕೀಳೋ ಪ್ರತಿಭಟನೆಯಲ್ಲಿ ಹೆಣ್ಣು ದಾಸ್ಯದಿಂದ ಮುಕ್ತಳಾಗ್ತಾಳೆ ಅನ್ನೋದಕ್ಕಿಂತಲೂ ಹೆಚ್ಚಾಗಿ ಈ ದೇಶದಲ್ಲಿ ಆಳವಾಗಿ ಬೀಡು ಬಿಟ್ಟಿರೋ ಬ್ರಾಹ್ಮಣ್ಯವನ್ನ ವಿರೋಧಿಸೋ ಹಿಡನ್ ಅಜೆಂಡಾ ಅಡಗಿರೋದು ಸ್ಪಷ್ಟ. ಇದಕ್ಕಾಗಿ ಬ್ರಾಹ್ಮಣರನ್ನ ವಿರೋಧಿಸೋ ನೆಪದಲ್ಲಿ ಹೆಣ್ಣಿನ ತಾಳಿಗೆ ಕೈ ಹಾಕೋ ಕೆಲಸಕ್ಕೆ ಈ ಸಂಘಟನೆಗಳು ಇಳಿದು ಬಿಟ್ಟಿವೆ.
ಇನ್ನು ನಾನು ಈ ಹಿಂದೆ ತಾಳಿಯ ಬಗ್ಗೆ ಪತ್ರಿಕೆಗಳಲ್ಲಿ ಓದಿದಂತೆ ಮತ್ತು ಇತರೆ ಮಾಧ್ಯಮಗಳ ಮೂಲಕ ತಿಳಿದು ಕೊಂಡಂತೆ, ಅಧ್ಯಯನಗಳ ಪ್ರಕಾರ, ಹಿಂದೂ ವಿವಾಹದ ವಿಧಿವಿಧಾನಗಳ ಬಗೆಗೆ ಸ್ಥೂಲವಾಗಿ ತಿಳಿಸುವ ವಾಲ್ಮೀಕಿ ರಾಮಾಯಣ, ವ್ಯಾಸ ಭಾರತದಲ್ಲಾಗಲೀ, ಗೃಹಸೂತ್ರ, ಮನುಸ್ಮೃತಿ, ಯಾಜ್ಞವಲ್ಕ ಮೊದಲಾದ ಗ್ರಂಥಗಳಲ್ಲಿ ತಾಳಿಯ ಬಗ್ಗೆ ಉಲ್ಲೇಖವಿಲ್ಲ. ಅಷ್ಟೇ ಏಕೆ, “ಮಾಂಗಲ್ಯಂ ತಂತು ನಾನೇನ ...”ಎಂದು ಹತ್ತು ಜನರ ಸಮಕ್ಷಮದಲ್ಲಿ ತಾಳಿ ಕಟ್ಟುವಾಗ ಹೇಳಲಾಗುವ ಈ ಮಂತ್ರವು ವೈದಿಕ ಮೂಲದ್ದಲ್ಲ! ತಾಳಿಯ ಪರಿಕಲ್ಪನೆ ಹುಟ್ಟಿದ ನಂತರ ಪುರೋಹಿತರಿಂದ ಸೃಷ್ಟಿಸಲ್ಪಟ್ಟ ಮಂತ್ರ ಎನ್ನುತ್ತಾರೆ ಸಂಶೋಧಕರು. ಮಾಂಗಲ್ಯಕ್ಕೆ ಈಗಿರುವ ಸ್ಥಾನ ಪ್ರಾಚೀನ ಕಾಲದಲ್ಲಿಯೂ ಇದ್ದಿದ್ದರೆ ಅಂದಿನ ಕೃತಿಗಳಲ್ಲಿ ಅದು ಪ್ರಸ್ತಾಪವಾಗಿರಬೇಕಿತ್ತು. ಅಲ್ಲವೇ? ಆದ್ರೆ ಅಲ್ಲೆಲ್ಲೂ ತಾಳಿಯ ಬಗ್ಗೆ ಉಲ್ಲೇಖಿಸಿಲ್ಲ ಅನ್ನೋದು ಈ ದೇಶದ ಮಾಧ್ಯಮಗಳು ಸ್ಪಷ್ಟವಾಗಿ ಈ ಹಿಂದೆಯೇ ಅದೆಷ್ಟೋ ಲೇಖನಗಳಲ್ಲಿ ಉಲ್ಲೇಖಿಸಿದೆ. ಹೀಗಿರೋವಾಗ ತಾಳಿ ಬ್ರಾಹ್ಮಣ್ಯದ ಸಂಕೇತ ಅನ್ನೋದು ಎಷ್ಟು ಸರಿ? ಒಂದು ವೇಳೆ ಬ್ರಾಹ್ಮಣ್ಯದ ಸಂಕೇತ ಅನ್ನೋದಾದ್ರೆ ತಾಳಿ ಕೀಳುವ ಮುನ್ನವೇ ಈ ಬಗ್ಗೆ ದಾಖಲೆಗಳನ್ನ ತೋರಿಸಬಹುದಲ್ಲವೇ? ಇನ್ನು ತಾಳಿ ಕೀಳೋ ಸಂಘಟನೆಗಳು ತಾಳಿಯಿಂದ ಹೆಣ್ಣಿನ ಮೇಲೆ ಆಗೋ ದೌರ್ಜನ್ಯಗಳನ್ನಾದ್ರೂ ತಿಳಿಸೋ ಕೆಲಸ ಮಾಡಿದ್ರೆ ಒಳ್ಳೆಯದು. ತಾಳಿ ಈ ದೇಶದ ಸಂಸ್ಕೃತಿ, ಹಿಂದೂ ಪದ್ದತಿ ಅನ್ನೋದಕ್ಕಿಂತಲೂ ಹೆಚ್ಚಾಗಿ ವಿವಾಹಿತ ಮಹಿಳೆಯನ್ನ ಗುರುತಿಸೋ ಒಂದು ವಿಧಿ ಬದ್ದ ವಿಧಾನ ಅಂತಾನೂ ಹೇಳಬಹುದು. ತಾಳಿ ಧರಿಸಿದ ಹೆಣ್ಮಗಳನ್ನ ಗೌರವದಿಂದ ಕಾಣೋ ವ್ಯಕ್ತಿತ್ವವೂ ಈ ದೇಶದಲ್ಲಿ ಬೆಳೆದು ಬಂದಿದೆ. ಆಕೆ ವಿವಾಹಿತೆ ಅನ್ನೋದನ್ನ ತಿಳಿಸೋ ತಾಳಿ ಹೆಣ್ಣಿಗೆ ಈ ದೇಶದಲ್ಲಿ ಗೌರವಯುತ ಬದುಕು ಕಟ್ಟಿಕೊಟ್ಟಿದೆ ಅನ್ನೋದು ನನ್ನ ಭಾವನೆ. ಆದ್ರೆ ಇದನ್ನ ವಿರೋಧಿಸಿ ಅದಕ್ಕೊಂದು ಕೆಟ್ಟ ಅರ್ಥ ಕಲ್ಪಿಸೋ ಈ ಸಂಘಟನೆಗಳಿಗೆ ತಾಳಿ ಕಿತ್ತು ಹಾಕೋ ಹೋರಾಟ ಮಹಾನ್ ಕಾರ್ಯವಾಗಿ ಕಂಡಿದ್ದು ಮಾತ್ರ ದುರಂತ...! ಈ ಸಂಘಟನೆಗಳು ವಿರೋಧಿಸೋ ಭರದಲ್ಲಿ ಹೆಣ್ಣಿನ ಅಪಮಾನ ಮಾಡುತ್ತಿವೆ ಅನ್ನೋದು ನನ್ನ ಅನಿಸಿಕೆ. ಈ ದೇಶದಲ್ಲಿ ಉದ್ದಾರ ಮಾಡೋದಕ್ಕೆ ಅದೆಷ್ಟೋ ಕೆಲಸಗಳಿವೆ. ಹೀಗಿದ್ರೂ ವೈದಿಕ ಸಂಸ್ಕೃತಿಯನ್ನ ವಿರೋಧಿಸೋ ನೆಪದಲ್ಲಿ ತಾಳಿಯನ್ನ ಕಿತ್ತೆಸೆಯೋ ಈ ಸಂಘಟನೆಗಳಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಇನ್ನು ಇವರ ವಿರೋಧಿಯಾಗಿ ಮಾತೆತ್ತಿದರೆ ಬ್ರಾಹ್ಮಣ್ಯದ ಪರ, ಸಂಘದ ಪರ, ಹಿಂದೂ ಪರ ಅನ್ನೋ ಹಣೆಪಟ್ಟಿ ಬೆಳೆಯುತ್ತಲೇ ಹೋಗುತ್ತವೆ. ಆದ್ರೆ ಈ ದೇಶದಲ್ಲಿ ಮಾಡಬೇಕಾಗಿರೋದನ್ನ ಬಿಟ್ಟು, ಅಶಾಂತಿ ಸೃಷ್ಟಿಸೋ ಕೆಲಸಕ್ಕೆ ಕೈ ಹಾಕೋ ಇವ್ರುಗಳನ್ನ ದೇಶದೊಳಗಿನ ಭಯೋತ್ಪಾದಕರು ಅಂದ್ರೂ ತಪ್ಪಿಲ್ಲ......ಇನ್ನು ಹಿಂದೂ ಸಂಸ್ಕೃತಿಯ ಬುಡಕ್ಕೆ ದಿನಕ್ಕೊಂದು ಕೊಡಲಿಯೇಟು ಹಾಕೋ ಇಂಥವ್ರು ಮುಸ್ಲಿಮರಲ್ಲಿ ಬೀಡು ಬಿಟ್ಟಿರೋ ಬುರ್ಖಾ ಸಂಸ್ಕೃತಿಯನ್ನೇಕೆ ವಿರೋಧಿಸ್ತಾ ಇಲ್ಲ? ಇದು ಕೂಡ ಹೆಣ್ಣಿನ ದಾಸ್ಯದ ಸಂಕೇತವಲ್ಲವೇ? ಇಲ್ಲಿ ಹೆಣ್ಣನ್ನ ಗುಲಾಮಳನ್ನಾಗಿಸೋ ಕೆಲಸ ನಡೆಯುತ್ತಿಲ್ಲವೇ? ಹಾಗಿದ್ರೆ ತಾಳಿ ಕಿತ್ತು ಹಾಕೋ ಚಳುವಳಿಯ ರೀತಿಯಲ್ಲಿ ಈ ಸಂಘಟನೆಗಳಿಗೆ ಬುರ್ಖಾ ಕಿತ್ತು ಹಾಕಿ ಅನ್ನೋ ಚಳುವಳಿ ಮಾಡೋ ತಾಕತ್ತಿದೆಯೇ?....ಖಂಡಿತಾ ಇಲ್ಲ. ಕಾರಣ ಇಷ್ಟೇ...ಈ ದೇಶದ ಸಂಸ್ಕೃತಿ ಅಂತ ಕರೆಸಿಕೊಳ್ಳೋ ವಿಚಾರಗಳನ್ನ ಬುಡ ಸಮೇತ ಕಿತ್ತು ಹಾಕೋದೊಂದೇ ಇವ್ರ ಉದ್ದೇಶ.
ನನ್ನ ಪ್ರಕಾರ ಬ್ರಾಹ್ಮಣತ್ವ ಈ ದೇಶಕ್ಕೆ ಅಪಾಯಕಾರಿ ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ಹಾಗಂತ ಈ ದೇಶದಲ್ಲಿ ಆಚರಣೆಯಲ್ಲಿರೋ ಎಲ್ಲಾ ಆಚಾರ-ವಿಚಾರಗಳು ಬ್ರಾಹ್ಮಣರ ಸ್ವತ್ತು ಅಂತ ವಾದಿಸೋದು ಸರಿಯಲ್ಲ. ಅಲ್ಲದೇ ಇದೇ ವಾದ ಮುಂದಿಟ್ಟುಕೊಂಡು ವೈವಾಹಿಕ ಜೀವನದ ಅತ್ಯಮೂಲ್ಯ ಸಂಕೇತ ಅನಿಸಿಕೊಂಡಿರೋ ತಾಳಿ ಕೀಳೋ ಇವ್ರದ್ದು ಮೂರ್ಖತನದ ಪರಮಾವಧಿಯಲ್ಲದೇ ಇನ್ನೇನು? ಇನ್ನು ಇಂದಿಗೂ ಈ ದೇಶದ ಅದೆಷ್ಟೋ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿವಾಹಿತ ಹೆಣ್ಮಕ್ಕಳು ತಾಳಿಯನ್ನ ಕಟ್ಟಿಕೊಳ್ತಾರೆ. ಹಾಗಿದ್ರೆ ಇವ್ರೆಲ್ಲರೂ ಬ್ರಾಹ್ಮಣರಿಂದ ಪ್ರೇರೇಪಣೆಗೆ ಒಳಗಾದ್ರೆ ಅನ್ನೋದನ್ನ ಚಳುವಳಿಗಾರರು ತಿಳಿಸಬೇಕು. ಅದಕ್ಕೂ ಮುಖ್ಯವಾಗಿ ತಾಳಿಯಿಂದ ಹೆಣ್ಣು ದಾಸ್ಯಕ್ಕೆ ಒಳಗಾಗ್ತಿದ್ದಾಳೆ ಅನ್ನೋದ್ರ ಬದಲು ಸಮಾಜದಲ್ಲಿ ಬೀಡು ಬಿಟ್ಟಿರೋ ವರದಕ್ಷಿಣೆ ಪಿಡುಗಿನ ವಿರುದ್ದ ಈ ಸಂಘಟನೆಗಳು ಧ್ವನಿಯೆತ್ತೋದು ಒಳಿತು. ವಿವಾಹಿತ ಹೆಣ್ಣಿನ ಮೇಲೆ ಈ ದೇಶದಲ್ಲಿ ಶೋಷಣೆ ಆಗ್ತಿದೆ ಎಂದಾದ್ರೆ ಅದು ಹೆಚ್ಚಾಗಿ ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ವಿಚಾರವಾಗಿಯೇ ನಡೀತಾ ಇದೆ. ಅದು ಬಿಟ್ಟು ಎಲ್ಲೂ ತಾಳಿ ಕಟ್ಟಿದ ತಕ್ಷಣ ಹೆಣ್ಣು ಗುಲಾಮಳಾಗಿ ಬದಲಾಗೋದಿಲ್ಲ.
ದುರಂತ ಅಂದ್ರೆ ತಾಳಿ ಕಟ್ಟದೇ, ತಮ್ಮದೇ ಆದ ಶೈಲಿಯಲ್ಲಿ ಮದುವೆಯಾಗೋ ಅದೆಷ್ಟೋ ಸಂಸಾರಗಳು ಹಾದಿ ತಪ್ಪಿದ ಉದಾಹರಣೆಗಳಿವೆ. ಹಾಗಂತ ಇಲ್ಲಿ ತಾಳಿ ಕಟ್ಟಿದ್ದರೆ ಸಂಸಾರ ಸರಿಯಾಗಿರ್ತಿತ್ತು ಅನ್ನೋದು ನನ್ನ ವಾದವಲ್ಲ. ಆದ್ರೆ ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಅನ್ನೋ ಎಡಬಿಡಂಗಿಗಳ ವರ್ತನೆ ಬಗ್ಗೆ ಅನಿಸಿಕೆಯಷ್ಟೇ. ಈ ದೇಶದಲ್ಲಿ ಅವ್ರವ್ರ ಆಚಾರ-ವಿಚಾರಗಳು ಅವ್ರವ್ರ ನಂಬಿಕೆಗೆ ಬಿಟ್ಟದ್ದು. ಅದನ್ನ ವಿರೋಧಿಸೋ ನೆಪದಲ್ಲಿ ಭಾವನೆಗಳಿಗೆ ಧಕ್ಕೆ ತರೋದು ಸರಿಯಲ್ಲ. ಬ್ರಾಹ್ಮಣರ ಆಚರಣೆ ಅಂತ ಕರೆಸಿಕೊಳ್ಳೋ ಸಾಕಷ್ಟು ವಿಚಾರಗಳಲ್ಲಿ ಗೊಂದಲಗಳಿವೆ. ಕೆಲವು ವಿಚಾರಗಳಲ್ಲಿ ಮನುಷ್ಯನ ಶೋಷಣೆಯೂ ನಡೀತಾ ಇದೆ. ಇನ್ನು ಕೆಲವು ವಿಚಾರಗಳಲ್ಲಿ ಮೂಢನಂಬಿಕೆಯನ್ನ ತುಂಬಿ ಜನ್ರನ್ನ ಅಜ್ನಾನಿಗಳನ್ನಾಗಿಸೋ ಕೆಲಸವೂ ನಡೀತಾ ಇದೆ. ಆದ್ರೆ ಎಲ್ಲಿ ದೇಶಕ್ಕೆ, ಜನ್ರಿಗೆ ಅಪಾಯ ಇದೆ ಅನ್ನೋದು ಅರಿವಾಗುತ್ತೋ ಅಂಥದ್ದನ್ನ ತಡೆಯೋದ್ರಲ್ಲಿ ಖಂಡಿತಾ ತಪ್ಪಿಲ್ಲ. ಹಾಗಂತ ತಾಳಿ ಕಟ್ಟಿಸಿಕೊಳ್ಳೋದೇ ಅಪಾಯ ಅನ್ನೋದಾದ್ರೆ ಈ ದೇಶದ ನ್ಯಾಯಾಂಗ ವ್ಯವಸ್ಥೆಯೇ ಇಂಥದ್ದಕ್ಕೆ ಸೂಕ್ತ ಉತ್ತರ ನೀಡಬೇಕಿದೆ......