Monday 30 June 2014

ಮನಸ್ಸೆಲ್ಲಾ ಆವರಿಸಿದವನು ಶೂನ್ಯ ಬಿಟ್ಟು ಹೋದಾಗ...!


...............ಕಣ್ಣೀರ ಕೊಳದಲ್ಲಿ
ಹುಟ್ಟಿರದ ದೋಣಿಯಲಿ
ಏಕಾಂಗಿ ಕುಳಿತಿರಲು
ನಕ್ಷತ್ರ ಅಳುತಿರಲು
ಇರುಳಿನ ಗಾಳಿ ನರಳಿ
ಗಾನದ ಗಾಯಕೆ ಮಾಯದ ನೋವಿದೆ
ಪ್ರೀತಿಯ ಹೂವಿಗೆ ಆಳದ ಅಳಲಿದೆ..................!
..................................ಇದು ಎಚ್.ಎಸ್.ವೆಂಕಟೇಶ್ ಮೂರ್ತಿಯವರ ಸಾಹಿತ್ಯದಲ್ಲಿ ಮೂಡಿಬಂದಿರೋ ಸಿ.ಅಶ್ವಥ್ ಕಂಠದಲ್ಲಿ ಹೊರಹೊಮ್ಮಿರೋ ಪ್ರೇಯಸಿ ಪ್ರೀತಿಸಿ ಮರೆತೆಯಾ? ಎಂಬ ಹಾಡಿನ ಸಾಲುಗಳು. ಹಾಡುಗಳು ಅನ್ನೋದೇ ಹಾಗೆ ಬದುಕಿನ ಪ್ರತೀ ಹೆಜ್ಜೆಗಳನ್ನ ಅದ್ಯಾಗೋ ಕಣ್ಣಿಗೆ ಕಟ್ಟೋವಂತೆ ಕಟ್ಟಿ ಕೊಡುತ್ತೆ. ಇನ್ನು ಹಾಡುಗಳನ್ನ ಕೇಳೋವಾಗಲೂ ಅಷ್ಟೇ....ಬೇಜಾರಾಗಿದ್ದಾಗ ಸಾಹಿತ್ಯ ಇಷ್ಟ ಆದ್ರೆ, ಖುಷಿಯಾಗಿದ್ದಾಗ ಸಂಗೀತ ಇಷ್ಟ ಆಗುತ್ತೆ.....ಬದುಕಲ್ಲೂ ಅಷ್ಟೇ ಖುಷಿಯಲ್ಲಿದ್ದಾಗ ಎಲ್ರೂ ಇಷ್ಟ ಆಗ್ತಾರೆ...ಆದ್ರೆ ನೋವಾದಾಗ ಜಸ್ಟ್ ಹತ್ತಿರ ಅಂತ ಅನಿಸಿಕೊಂಡವ್ರು ಮಾತ್ರ ಇಷ್ಟ ಆಗ್ತಾರೆ. ನಾನಿವತ್ತು ಬರೀತಾ ಇರೋ ಲೇಖನ ನನ್ನ ಇಷ್ಟ-ಕಷ್ಟಗಳಿಗೆ ಸಂಬಂಧಪಟ್ಟದ್ದಲ್ಲ. ಬದಲಾಗಿ ನನ್ನನ್ನ ಇಷ್ಟ ಪಟ್ಟವರಿಗೆ ಸಂಬಂಧಿಸಿರೋದು.
ಅವಳ ಹೆಸ್ರು ಕಾವ್ಯ(ಅನಿವಾರ್ಯ ಕಾರಣಗಳಿಂದ ಹೆಸರನ್ನ ಬದಲಿಸಿದ್ದೇನೆ). ಈ ಹುಡುಗಿ ನನ್ನ ಜೊತೆ ಹುಟ್ಟದೇ ಇದ್ರೂ ಬಾಯ್ತುಂಬ ಅಣ್ಣ ಅಂತ ಕರೀತ ತನ್ನ ಜೀವನದ ಬಗ್ಗೆ ಹೇಳ್ತಾ ಇದ್ಳು. ಸಂತೋಷ, ದುಃಖ, ನೋವು-ನಲಿವು ಎಲ್ಲವನ್ನೂ ಇಂಚಿಂಚೂ ನನ್ನ ಜೊತೆ ಅಪ್ಡೇಟ್ ಮಾಡ್ತಿದ್ಳು. ಹೀಗಿರೋವಾಗಲೇ ಮೊನ್ನೆ ಅದ್ಯಾಕೋ ಗೊತ್ತಿಲ್ಲ, ಈ ಪ್ರೀತಿ ಹಿಂಗ್ಯಾಕೆ ಮಾಡುತ್ತೆ? ಅಣ್ಣ ಅಂತ ಸಣ್ಣ ದನಿಯಲ್ಲಿ ಕೇಳಿ ಬಿಟ್ಟಿದ್ದಳು ಕಾವ್ಯ. ದುರಂತ ಅಂದ್ರೆ ಚೆಲ್ಲು ಚೆಲ್ಲು ಸ್ವಭಾವದ ನನ್ನ ತಂಗಿ ಪ್ರೀತಿ ಬಗ್ಗೆ ನನ್ನ ಜೊತೆ ಮಾತನಾಡಿದ್ದು ಆವತ್ತೆ ಮೊದಲು ಅಂದ್ಕೋತಿನಿ. ಹೀಗೆ ತನ್ನ ಪ್ರೀತಿ ಬಗ್ಗೆ, ತನಗೆ ಕೈಕೊಟ್ಟ ಹುಡುಗನ ಬಗ್ಗೆ ಎಲ್ಲವನ್ನೂ ಹೇಳಿಕೊಂಡು ಅತ್ತು ಬಿಟ್ಟಳು ಅವಳು.....! ಹುಡುಗೀರಾ ಕಣ್ಣೀರಿಗೆ ಕರಗಬಾರದು ಅಂತಾರೆ...ಹಾಗಾಗಿ Full alert ಆಗಿದ್ದ ನಾನು ಎಲ್ಲವನ್ನ ಸಾವಕಾಶವಾಗಿ ಕೇಳಿ ಒಂಚೂರು ಸಮಾಧಾನ ಮಾಡಿ ತಂಗಿಯ ಮನಸ್ಸಿನ ನೋವಿಗೆ ಒಂದು ಹಂತದ ಸಾಂತ್ವಾನ ನೀಡಿ ಬಿಟ್ಟೆ. ಆದ್ರೆ ಅದ್ಯಾಕೋ ಅವಳ ನೋವಿಗೆ ಪೂರ್ಣ ಪ್ರಮಾಣದ ಸಂತ್ವಾನ ನೀಡೋಕಂತೂ ನನ್ನಿಂದ ಆಗಲೇ ಇಲ್ಲ. ಹೀಗಾಗಿ ಇವತ್ತು ನಾನು ಒಂದು ಮುಗ್ಧ ಹೆಣ್ಣಿನ(?) ಮನಸ್ಸಿನಲ್ಲಿ ಪರಕಾಯ ಪ್ರವೇಶ ಮಾಡ್ತಾ ಇದೀನಿ...ಒಂದು ಮುಗ್ಧ ಪ್ರೀತಿ, ಶುದ್ದ ಪ್ರೀತಿ...ಹೇಗೆಲ್ಲಾ ಕಾಡುತ್ತೆ ಅನ್ನೋದನ್ನ ನನಗೆ ತಿಳಿದಂತೆ ಹೇಳ್ತೀನಿ.


"Love can't be explained but it can be expressed..!
"ಅನ್ನೋ ಮಾತು ನೂರಕ್ಕೆ ಸತ್ಯ. ಇನ್ನು ಹುಡುಗೀರಾ ವಿಚಾರಕ್ಕೆ ಬಂದ್ರಂತೂ ಅವ್ರಲ್ಲಿ ಮುಗ್ಧತೆ ತುಂಬಿರೋ ಪ್ರೀತಿನೂ ಇರುತ್ತೆ..ಮೋಸ ಮಾಡೋ ನೂರೆಂಟು ಪ್ರೀತಿಗಳೂ ಇರುತ್ತೆ. ಆದ್ರೆ ಮುಗ್ಧತೆಯ ಪ್ರೀತಿ ಅದ್ರಲ್ಲೂ first time love ಅಂತಾರಲ್ಲ..ಅದಂತೂ ಹುಡುಗೀರಾ ಜೀವನದಲ್ಲಿ ಸಖತ್ ನೋವು ಕೊಡುತ್ತೆ.  ಈ ಹುಡುಗೀರಿದಾರಲ್ಲ...ಅವ್ರು ತುಂಬಾನೆ ಪ್ರೀತಿ ಮಾಡೋದು ಅವ್ರ ಫಸ್ಟ್ ಲವ್ವನ್ನ...ಅದೊಂಥರಾ Innocent love ಕಣ್ರೀ...ಆದ್ರೆ ವಿಪರ್ಯಾಸ ಅಂದ್ರೆ ಈ First love ಇದ್ಯಲ್ಲ....ಅದು ಅವರಿಗೆ ಸಿಗೋದೇ ಇಲ್ಲ. ಸಿಕ್ಕೋ ಪ್ರೀತಿ ಮನಸಿನ ಪುಟಗಳಿಗೆ ಭಾರೀ ದೊಡ್ಡ ಗಾಯ ಮಾಡಿ ಹೋಗಿ ಬಿಡುತ್ತೆ. ಆದ್ರೆ ಈ ಪ್ರೀತಿ ಮಾತ್ರ ಜೀವನದ ಕೊನೆ ವರೆಗೆ ಉಳಿಯೋ ಒಂಥರಾ sweet pain...ಅದನ್ನ ಉಳಿಸಿಕೊಂಡು...ನೆನಪಿಸಿಕೊಂಡು ಬದುಕೋದಿದ್ಯಲ್ಲ...really super.....ಇನ್ನು ತನ್ನ first love ಕಳ್ಕೊಂಡ ಹುಡುಗಿ ಮತ್ತೆ ಲವ್ವೇ ಮಾಡೋದಿಲ್ಲ ಅಂತಲ್ಲ. second love ಮಾಡೋದ್ರಲ್ಲಿ ಹುಡುಗ್ರಿಗಿಂತ Fast ಈ ಹುಡುಗೀರು.....ಆದ್ರೂ ತನ್ನ ಫಸ್ಟ್
ಲವರ್ ಅನಿಸಿಕೊಂಡ ಮಹಾನುಭಾವನನ್ನ ಮರೆಯೋದೇ ಇಲ್ಲ. ಅದೊಂಥರ First experience ಅಲ್ವಾ...? ಹಾಗಾಗಿ ಅದನ್ನ ಐತಿಹಾಸಿಕ ಹೆಜ್ಜೆ ಅನ್ನೋ ಥರ ಮನದ ಮರೆಯಲ್ಲಿ ಬಚ್ಚಿಟ್ಟಿರ್ತಾರೆ. ಇದಾಗಿ ಇವ್ರ ಲೈಫಲ್ಲಿ ಎಂಟ್ರಿ ಕೊಡೋ ಮತ್ತೊಬ್ಬ ಕೂಡ ಕೈಕೊಟ್ಟ ಅಂದ್ಕೊಳ್ಳಿ.....ಬೇಜಾರೇ ಇಲ್ಲ...ಅವನಿಲ್ದೇ ಇದ್ರೆ ಮತ್ತೊಬ್ಬ ಅಂತ ಹೋಗೋರೇ ಹೆಚ್ಚು......ಆದ್ರೆ ಫಸ್ಟ್ ಲವ್ ಮಾತ್ರ ಬೆಸ್ಟ್ ಲವ್ ಅಂತಾನೆ ಇರ್ತಾರೆ....
ಅವನ ಜೊತೆ ಆಡಿರೋ ಜಗಳ, ಕಣ್ಣಂಚಿನ ನೋಟ, ಹಿತವಾದ ಸ್ಪರ್ಶ, ಒಟ್ಟಿಗೆ ಕೂತು ಹೆಣೆದ ಕನಸುಗಳು, ಒಟ್ಟಿಗೆ ಕೂತು ಕೇಳಿದ ಹಾಡುಗಳು, ನೋಡಿದ ಸಿನೆಮಾಗಳು, ಚೆಂದನೆಯ giftsಗಳು, ಒಟ್ಟಿಗೆ ಹೆಜ್ಜೆ ಹಾಕಿದ ಹಾದಿ, ಕೂತು ಹರಟಿದ ಹುಲ್ಲುಹಾಸಿನ ಪಾರ್ಕು..... ಅಥವಾ ಯಾವುದೋ ಒಂದು ಮಾಮೂಲಿ ಜಾಗ.....ಚಾಕೋಲೇಟ್ ತಿನ್ನೋವಾಗ ಮಾಡಿದ ಜಗಳ....ಸಮುದ್ರದ ದಂಡೆಯಲ್ಲಿ ಬೆನ್ನಿಗೆ ಬೆನ್ನಿಟ್ಟು ಕೂತ ಕ್ಷಣಗಳು...ಹೀಗೆ ಇಂಥಹ ಅದ್ಭುತ ಕ್ಷಣಗಳು ಅವ್ರನ್ನ ಕಾಡಿಸದೇ ಇರುತ್ತಾ...? ಎಸ್..... ನಾನು ಮೇಲೆ ಹೇಳಿರೋ ಕಾವ್ಯಾಳಿಗೂ ಆಗಿದ್ದು ಇದೆ...FIRST LOVE....BEST LOVE ಅನ್ನೋ ಹಾಗೆ.....ಅವೆಲ್ಲವನ್ನ ನೆನಪಿಸಿಕೊಂಡು ಕಣ್ಣೀರು ಹಾಕ್ತಾಳೆ.....ಬದುಕೇ ಬೇಡ ಅಂಥ ಸಣ್ಣ ವಯಸ್ಸಲ್ಲೇ ಫಿಲಾಸಫಿಯ ಮಾತುಗಳು....ಸಾಯ್ತೇನೆ ಅನ್ನೋ ಕ್ಷಣಿಕ ಡೈಲಾಗ್ ಗಳು......ಆದ್ರೆ ಏನ್ ಮಾಡೋದು ತಂಗಿ ಅಂತ ಸಾಂತ್ವಾನ ಹೇಳ್ಕೋಬೇಕಷ್ಟೇ.......ಆದ್ರೆ ಹುಡುಗೀರು ಸಖತ್ Fast ಅನ್ನೋದನ್ನ ನನ್ನ ತಂಗಿ ಕಾವ್ಯಾ ಕೂಡ ಸಾಬೀತು ಪಡಿಸಿದ್ದಾಳೆ ಅನ್ನೋದೇ ಖುಷಿ ಕೊಡೋ ವಿಚಾರ.....ಮೊದಲ ಪ್ರೀತಿ ಕೈಕೊಟ್ಟ ನಂತ್ರ ಒದ್ದೆಯಾಗಿದ್ದ ಕಣ್ಣಂಚಿನಲ್ಲಿ ಮತ್ತೊಂದು ಪ್ರೀತಿ ಮೂಡಿದೆ. ಕೈಕೊಟ್ಟವನ ನೆನಪುಗಳನ್ನ ಮೆಲುಕು ಹಾಕುತ್ತಳೇ ಲವ್ ಎಕ್ಸ್ ಪೀರಿಯನ್ಸ್ ಅನ್ನೋ ಅನುಭವದ ಮೇಲೆ ಮತ್ತೊಂದು ಪ್ರೀತಿಯತ್ತ ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾವ್ಯ ಹೊರಳಿದ್ದಾಳೆ. ಹಾಗಂತ ಇದು ಕೂಡ ಶಾಶ್ವತ ಅಂತ ಹೇಳೋದಿಲ್ಲ. ಯಾಕೆಂದ್ರೆ ಕಾಲೇಜು ಜೀವನದಲ್ಲಿ ಎಲ್ಲರೂ ಹುಚ್ಚರೇ....ಹತ್ತಾರು ಕನಸಿನ ಹುಚ್ಚು ಹುಡುಗೀರು ಒಂದು ಕಡೆಯಾದ್ರೆ.........ದಿನಕ್ಕೊಂದು ಕನಸು ಕಾಣೋ ತಲೆ ಕೆಟ್ಟ ಹುಡುಗ್ರು ಇನ್ನೊಂದು ಕಡೆ....ಹಾಗಾಗಿ ನನ್ನ ತಂಗಿ ಕಾವ್ಯಾ ಕೂಡ ಮತ್ತೊಮ್ಮೆ ನನ್ನೆದುರಿಗೆ ಕಣ್ಣೀರು ಹಾಕ್ತಾಳೆ ಅನ್ನೋ ದೃಢವಾದ ನಂಬಿಕೆ ನನಗಂತೂ ಇದ್ದೇ ಇದೆ...! ದೇವರಾಣೆ ಹೇಳ್ತೀನಿ ನನ್ನ ನಂಬಿಕೆಯನ್ನ ನನ್ನ ತಂಗಿ ಯಾವತ್ತೂ ಸುಳ್ಳು ಮಾಡೋದೇ ಇಲ್ಲ ಬಿಡಿ......! ಆದ್ರೆ ಮುಂದಿನ ಸಲ ಅವಳ ಮನಸ್ಸು ಪ್ರೀತಿ ಕಳೆದುಕೊಂಡು ಅಳೋದಿಲ್ಲ.....ಅಳು ಏನಿದ್ರೂ ಕಣ್ಣಂಚಿನಲ್ಲಿ ನೀರಾಗಿ ಹರಿದು ಕ್ಷಣಿಕ ಅನಿಸಿ ಬಿಡುತ್ತೆ....ಹೀಗಾಗಿ ಈ ಪ್ರೀತಿ ಹಿಂಗ್ಯಾಕೆ ಅಂತ ಕಾವ್ಯಾ ಕೇಳಿದಾಗ ದೊಡ್ಡ ದೊಡ್ಡ ಫಿಲಾಸಫಿಯ ಮಾತುಗಳು ನನ್ನ ಬಾಯಿಯಿಂದ ಬರಲೇ ಇಲ್ಲ. ಅನುಭವ ಸಾಕಷ್ಟು ಕಲಿಸಿಕೊಟ್ಟಿರೋ ಕಾರಣ ಮೊದಲ ಪ್ರೀತಿ ಕಳೆದುಕೊಂಡ ನನ್ನ ತಂಗಿಯನ್ನ ಅಂದು ಹಾಗೇ ಸುಮ್ಮನೇ ಸಂತೈಸಿದ್ದೆ.............

OK.......ಹುಡುಗೀಯರ ಮನಸ್ಸಿಗೆ ಪರಕಾಯ ಪ್ರವೇಶ ಮಾಡೋದು ನಿಜಕ್ಕೂ ಸಖತ್ ಕಷ್ಟದ ಕೆಲ್ಸ ಕಣ್ರೀ......

ವಿ.ಸೂ: ಇಲ್ಲಿ ಪರಕಾಯ ಪ್ರವೇಶ ಮಾಡಿರೋ ಮನಸುಗಳು ಚೆಲ್ಲು ಚೆಲ್ಲು ಸ್ವಭಾವದ ಹುಡುಗಿಯರದ್ದು ಅನ್ನೋದು ನೆನಪಿರಲಿ....!

ಎಚ್ಚರ: ಸೂಕ್ಷ್ಮ ಸ್ವಭಾವದ ಹುಡುಗೀರು ಮೊದಲ ಪ್ರೀತಿ ಕಳೆದು ಕೊಂಡಾಗ ಸಾಯಲೂ ಬಹುದು....ಸತ್ತವರೂ ಇದ್ದಾರೆ.....!


Sunday 18 May 2014


ಮೋದಿ ಗೆಲುವು ಬಿಜೆಪಿ ಧ್ವಜದ ಜೊತೆ ಭಗವಾಧ್ವಜವನ್ನೂ ಬಲಗೊಳಿಸಿದೆಯೇ?

ನರೇಂದ್ರ ಮೋದಿಯೆಂಬ ವ್ಯ(ಶ)ಕ್ತಿಯನ್ನು ಬಿಜೆಪಿ ಚೆನ್ನಾಗಿಯೇ ಪ್ರಮೋಟ್ ಮಾಡಿದೆ. ಕಳೆದ ಸಪ್ಟೆಂಬರ್ ನಿಂದ ಚುನಾವಣೆ ಮುಗಿಯೋ ತನಕ ಬರೋಬ್ಬರಿ 250ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಮೋದಿಯೆಂಬ ಬಿಜೆಪಿಯ ಅಸ್ತ್ರವನ್ನ ಸಖತ್ತಾಗಿಯೇ ಬಳಸಿಕೊಳ್ಳಲಾಗಿದೆ. ವೇದಿಕೆ ಹತ್ತಿದರೆ ಸಾಕು ಮೇರಾ ಬಾಯಿಯೋ ಆರ್ ಬೆಹನೋ ಅನ್ನೋ ಮೋದಿಯ ಮಾತಿಗೆ ಇಡೀ ದೇಶವೇ ತಲೆ ದೂಗಿದೆ ಅನ್ನೋದನ್ನ ಫಲಿತಾಂಶ ಸಾಬೀತು ಪಡಿಸಿದೆ. ನರೇಂದ್ರ ಮೋದಿಯ ಈ ಗೆಲುವಿನಿಂದ ಈ ದೇಶ ಗುಜರಾತ್ ಆಗುತ್ತದೆ, ವೇಗವಾಗಿ ಅಭಿವೃದ್ದಿ ಹೊಂದುತ್ತೆ ಅನ್ನುವ ಕಲ್ಪನೆಗಿಂತಲೂ ಮಿಗಿಲಾಗಿ ಈ ದೇಶದಲ್ಲಿ ಮತ್ತೊಮ್ಮೆ ಸಂಘಪರಿವಾರ ಗಟ್ಟಿಯಾಗಿ ನೆಲೆ ಕಂಡು ಕೊಳ್ಳಲಿದೆ ಅನ್ನೋದನ್ನ ಸ್ಪಷ್ಟವಾಗಿ ಹೇಳಿ ಬಿಡಬಹುದು. ಹಿಂದುತ್ವದ ಪ್ರಯೋಗ ಶಾಲೆ ಅಂತಾನೆ ಕರೆಸಿಕೊಳ್ಳೋ ದಕ್ಷಿಣ ಕನ್ನಡದಲ್ಲಿ ಚುನಾವಣಾ ಮತ ಎಣಿಕೆ ಮುಗಿದ ತಕ್ಷಣ ಕೌಂಟಿಂಗ್ ಸೆಂಟರ್ ನ ಹೊರ ಭಾಗದಲ್ಲಿ ಮೊದಲಾಗಿ ರಾರಾಜಿಸಿದ್ದು ಇದೇ ಸಂಘಪರಿವಾರದ ಭಗವಾಧ್ವಜಗಳು! ಒಂದು ರಾಜಕೀಯ ಪಕ್ಷ ಗೆದ್ದರೆ ಸಾಕು ಅಲ್ಲಿ ರಾಜಕೀಯ ಪಕ್ಷದ ಬಾವುಟಗಳೇ ಕಾಣ ಸಿಗುತ್ತವೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಮೋದಿ ಗೆಲುವಿನ ಖುಷಿಯನ್ನ ಹೆಚ್ಚಾಗಿ ಹಂಚಿಕೊಂಢಿದ್ದು ಇದೇ ಸಂಘಪರಿವಾರದ ಕಾರ್ಯಕರ್ತರು ಅನ್ನೋದನ್ನ ಮತ್ತೆ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕೂಡ ಇದೇ ಭಗವಾಧ್ವಜವನ್ನು ಹಿಡಿದು ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಪಟ್ಟದ್ದು ಕೂಡ ಗಮನಾರ್ಹ. ಅದರಲ್ಲೂ ಬಿಜೆಪಿ ನಮಗೆ ಮುಖ್ಯವಲ್ಲ, ಮೋದಿ ಗೆದ್ರೆ ಸಾಕು ಅಂತ ಸ್ವತಃ ಅದೆಷ್ಟೋ ಸಂಘದ ಹುಡುಗರು ಮಂಗಳೂರಿನ ಬೀದಿಗಳಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರು. ಇನ್ನು ಆರ್ ಎಸ್ ಎಸ್, ಬಜರಂಗದಳ, ವಿಎಚ್ ಪಿಯಂತಹ ಹಿಂದೂ ಸಂಘಟನೆಗಳು ಜಿಲ್ಲೆಯಾದ್ಯಂತ ಬಿಜೆಪಿ ಪರವಾಗಿ ಸಾಕಷ್ಟು ಪ್ರಚಾರ ಕೂಡ ನಡಸಿದ್ದವು. ಹಾಗಂತ ಈ ಪ್ರಚಾರದ ಉದ್ದೇಶ  ಬಿಜೆಪಿ ಗೆಲ್ಲಬೇಕು, ನಳಿನ್ ಕುಮಾರ್ ಜಯಭೇರಿ ಬಾರಿಸಬೇಕು ಅನ್ನೋದಲ್ಲ. ಬದಲಾಗಿ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು ಅನ್ನೋದಾಗಿತ್ತು. ಅದರಂತೆ ಮೋದಿ ಗೆದ್ದಿದ್ದಾರೆ. ಈ ಗೆಲುವಿನ ಖುಷಿಯನ್ನ ಬಿಜೆಪಿ ಬಾವುಟದ ಜೊತೆಗೆ ಸಂಘದ ಭಗವಾಧ್ವಜವೂ ಹಂಚಿಕೊಂಡಿದೆ ಅಂದ್ರೆ ತಪ್ಪಿಲ್ಲ.

ಭಗವಾಧ್ವಜ ಹಾರಿಸಿ ಬಿಜೆಪಿ ಕಚೇರಿಯಲ್ಲಿ ಗೆಲುವನ್ನ ಸಂಭ್ರಮಿಸಿದ ನಳಿನ್ ಕುಮಾರ್ ಕಟೀಲ್


ಅಷ್ಟಕ್ಕೂ ಮೋದಿ ಗೆಲುವಿನಿಂದ ಸಂಘಕ್ಕೇನು ಲಾಭ?

ಹೌದು, ನರೇಂದ್ರ ಮೋದಿ ಪ್ರಧಾನಿಯಾದ್ರೆ ಸಂಘ ಪರಿವಾರಕ್ಕೇನು ಲಾಭ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದ್ರೆ ಮೋದಿ ಬಿಜೆಪಿಯ ಕಾರ್ಯಕರ್ತ ಅಥವಾ ಸದಸ್ಯ ಅನ್ನೋದಕ್ಕಿಂತಲೂ ಹೆಚ್ಚಾಗಿ ಈ ಹಿಂದೆ ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿದ ಒಬ್ಬ ಕಟ್ಟರ್ ಹಿಂದುತ್ವವಾದಿ ಅನ್ನೋದನ್ನ ಒಪ್ಪಲೇ ಬೇಕು. ಇದೇ ಕಾರಣಕ್ಕೆ ನರೇಂದ್ರ ಮೋದಿಗೆ ಹಿಂದುತ್ವದ ಬಗ್ಗೆ, ಹಿಂದೂ ಸಂಸ್ಕೃತಿಯ ಬಗ್ಗೆ ಇತರೆ ರಾಜಕಾರಣಿಗಳಿಗಿಂತ ಸ್ವಲ್ಪ ಹೆಚ್ಚೇ ಗೊತ್ತು. ಹಾಗಾಗಿ ಹಿಂದೂ ಸಂಘಟನೆಗಳ, ಸಂಘಪರಿವಾರದ ಯುವಕರ ಉದ್ದೇಶಗಳನ್ನ ಮೋದಿ ಈಡೇರಿಸುತ್ತಾರೆ ಅನ್ನೋದು ಹಿಂದೂ ಸಂಘಟನೆಗಳಲ್ಲಿರೋ ಕಾರ್ಯಕರ್ತರ ಭಾವನೆ. ಇದೇ ಕಾರಣಕ್ಕೆ ಈ ದೇಶಕ್ಕೆ ಸೂಕ್ತವಾದ ಪ್ರಧಾನಿ ಬೇಕು ಅನ್ನೋದಕ್ಕಿಂತಲೂ ಹೆಚ್ಚಾಗಿ ಹಿಂದುತ್ವದ ರಕ್ಷಣೆಗೆ ಒಬ್ಬ ಕಟ್ಟರ್ ಹಿಂದೂವಾದಿ ಬೇಕಾಗಿದೆ ಅನ್ನೋ ಕಾರಣಕ್ಕೆ ಹಿಂದೂ ಸಂಘಟನೆಗಳು ಬೀದಿಗಿಳಿದು ಮೋದಿ ಪರವಾಗಿ ಕೆಲಸ ಮಾಡಿವೆ. ಹಾಗಾಗಿಯೇ ಮೋದಿ ಗೆದ್ದಾಗ ಬಿಜೆಪಿ ಬಾವುಟದ ಜೊತೆಗೆ ಧೈರ್ಯವಾಗಿ ಭಗವಾದ್ವಜವೂ ರಾರಾಜಿಸಿದೆ.
ಬೊಂದೆಲ್ ನ ಕೌಂಟಿಂಗ್ ಸೆಂಟರ್ ಬಳಿ ಬಿಜೆಪಿ ಗೆಲುವಿನ ನಂತರ ಬಿಜೆಪಿ ಧ್ವಜದೊಂದಿಗೆ ರಾರಾಜಿಸಿದ ಭಗವಾಧ್ವಜ

ನಮಕ್ ಮೋದಿ ಬತ್ತ್ಂಡ ಯಾವು ಮಾರ್ರೆ....!(ನಮಗೆ ಮೋದಿ ಬಂದರೆ ಸಾಕು ಮಾರಾಯಾ..!)

ಈ ದೇಶದಲ್ಲಿ ಮೋದಿಯನ್ನ ಬಿಜೆಪಿ ಪ್ರಮೋಟ್ ಮಾಡಿದ ಕೆಲವೇ ತಿಂಗಳಲ್ಲಿ ಇಂಥದ್ದೊಂದು ಮಾತು ಮಂಗಳೂರಿನಲ್ಲಿ ಕೇಳಿ ಬರ ತೊಡಗಿತ್ತು. ನರೇಂದ್ರ ಮೋದಿ ಆರ್ ಎಸ್ ಎಸ್ ನ ಕಟ್ಟರ್ ಹಿಂಬಾಲಕ ಅನ್ನೋದು ಸಂಘದ ತಳಮಟ್ಟದ ಕಾರ್ಯಕರ್ತರಿಗೆ ತಿಳಿದದ್ದೇ ತಡ ಸಂಘದ ಶಾಖೆಗಳಲ್ಲೂ ಮೋದಿ ಪರವಾದ ಮಾತುಗಳು ಆರಂಭಗೊಂಡವು. ಮೋದಿಯನ್ನ ಗೆಲ್ಲಿಸಿದರೆ ಈ ದೇಶದಲ್ಲಿ ಹಿಂದುತ್ವವನ್ನ ಯಾವ ರೀತಿ ಬೆಳೆಸಬಹುದು ಅನ್ನೋ ಚರ್ಚೆಗಳು ಆರಂಭಗೊಂಡವು. ಈ ಎಲ್ಲಾ ಲೆಕ್ಕಾಚಾರಗಳಿಗೆ ಸಾಥ್ ನೀಡುವಂತೆ ನರೇಂದ್ರ ಮೋದಿಯವರ ಪ್ರತೀ ಭಾಷಣದಲ್ಲೂ ಹಿಂದುತ್ವ, ಹಿಂದೂ ಶಕ್ತಿ ಅನ್ನೋ ಮಾತುಗಳು ಕೂಡ ಜೋರಾಗಿಯೇ ಕೇಳಿ ಬಂದವು. ಹೀಗಾಗಿ ನಮ್ಮ ಯುವಕರಿಗೂ ಹಿಂದುತ್ವದ ರಕ್ಷಣೆಗೆ ಮೋದಿಯೇ ಸೂಕ್ತ ಅನ್ನೋದು ಸ್ಪಷ್ಟವಾಗಿ ಅರ್ಥವಾಗಿತ್ತು. ಹೀಗಾಗಿಯೇ ನರೇಂದ್ರ ಮೋದಿಯ ಗೆಲುವಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ಶ್ರಮಿಸಿದೆ ಅನ್ನೋದಕ್ಕಿಂತ ಜಿಲ್ಲೆಯ ಸಂಘದ ಹುಡುಗರು ಎಷ್ಟರ ಮಟ್ಟಿಗೆ ಶ್ರಮಿಸಿದ್ದಾರೆ ಅನ್ನೋದೆ ಮುಖ್ಯ. ಇನ್ನು ಜಿಲ್ಲೆಯ ಮೂಲೆ ಮೂಲೆಯಲ್ಲಿ ನಡೆದ ಹಿಂದೂ ಸಮಾಜೋತ್ಸವಗಳು ಕೂಡ ನರೇಂದ್ರ ಮೋದಿಯನ್ನ ಪರೋಕ್ಷವಾಗಿ ಪ್ರಧಾನಿ ಮಾಡಿ ಅನ್ನೋದನ್ನೇ ಸಾರಿ ಸಾರಿ ಹೇಳುತ್ತಿದ್ದವು. ಈ ದೇಶದಲ್ಲಿ ಈತನಕ ಯಾವ ಬಿಜೆಪಿ ಅಭ್ಯರ್ಥಿಗೂ ನೀಡದ ಭಾರೀ ಬೆಂಬಲವನ್ನ ಸಂಘದ ಹುಡುಗರು ಮೋದಿಗೆ ನೀಡಿದ್ದರು. ಹೋಂಸ್ಟೇ ಮತ್ತು ಪಬ್ ದಾಳಿಯ ವೇಳೆ ದ.ಕ ಜಿಲ್ಲೆಯ ಬಿಜೆಪಿ ಸಂಸದರು ಹಿಂದೂ ಯುವಕರ ಪರವಾಗಿ ನಿಲ್ಲಲಿಲ್ಲ. ಈ ಬಗ್ಗೆ ಸ್ವತಃ ಅದೆಷ್ಟೋ ಸಂಘಟನೆಯ ಕಾರ್ಯಕರ್ತರು ಅಸಮಾಧಾನ ತೋಡಿಕೊಂಡಿದ್ದಾರೆ. ಹೀಗಿದ್ದರೂ ಈ ಬಾರಿ ಅದೇ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದ್ದಾರೆ. ಆದ್ರೆ ಎಲ್ಲೂ ಕೂಡ ನಳಿನ್ ಗಾಗಲೀ ಬಿಜೆಪಿಗಾಗಲೀ ಮತ ನೀಡಿ ಅನ್ನೋ ಮಾತುಗಳು ಇರಲೇ ಇಲ್ಲ. ಬದಲಾಗಿ ಅಲ್ಲೆಲ್ಲಾ ಗೋಚರಿಸಿದ್ದ ಜಸ್ಟ್ ನರೇಂದ್ರ ಮೋದಿ!

ಮೋದಿ ಗೆಲುವು ಜಿಲ್ಲೆಯಲ್ಲಿ ಶಾಂತಿ ಕದಡಬಹುದೇ?

ಹೇಳಿ ಕೇಳಿ ಈಗ ಎಲ್ಲರ ಬಾಯಲ್ಲೂ ನಮೋ ನಮೋ. ಅದರಲ್ಲೂ ಮೊದಲೇ ಹೇಳಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರಂತೂ ಮೋದಿ ಗೆದ್ದಿದ್ದೇ ನಮ್ಮಿಂದ ಅನ್ನೋ ಅತ್ಯುತ್ಸಾಹದಲ್ಲಿದ್ದಾರೆ. ಆದ್ರೆ ಇದೇ ಉತ್ಸಾಹ ಮುಂದಿನ ದಿನಗಳಲ್ಲಿ ಜಿಲ್ಲೆಯ ಮಟ್ಟಿಗೆ ಬಹುದೊಡ್ಡ ಏಟು ಕೊಟ್ಟರೂ ಅಚ್ಚರಿಯಿಲ್ಲ. ಹಾಗಂತ ಇಲ್ಲಿ ಸಂಘದ ಹುಡುಗರೇ ಆಶಾಂತಿಯನ್ನ ಸೃಷ್ಟಿಸುತ್ತಾರೆ ಅಂತಾನೂ ಹೇಳೋಕಾಗೋಲ್ಲ. ಬದಲಾಗಿ ಸಂಘಟನೆಯ ಯುವಕರನ್ನ ಕೆಣಕಲು ಕಿಡಿಗೇಡಿಗಳು ಕೂಡ ಜಿಲ್ಲೆಯ ಶಾಂತಿಯನ್ನ ಕದಡಬಹುದು. ಇನ್ನು ಕೆಲ ಬಿಸಿ ರಕ್ತದ ಹಿಂದೂ ಸಂಘಟನೆಯ ಯುವಕರು ಕೂಡ ಮೋದಿ ಬೆನ್ನಿಗಿದ್ದಾರೆ ಎಂಬ ಹುಂಬ ಧೈರ್ಯದಲ್ಲಿ ಸುಖಾಸುಮ್ಮನೆ ತಗಾದೆ ತೆಗೆದರೂ ಅಚ್ಚರಿಯಿಲ್ಲ. ಇದೇ ಕಾರಣಕ್ಕೆ ಬಿಜೆಪಿಯ ಜೊತೆಗೆ ಸಂಘಪರಿವಾರವೂ ಇನ್ನಷ್ಟು ಗಟ್ಟಿಗೊಂಡಿದೆ ಅನ್ನೋದರಲ್ಲಿ ಯಾವುದೇ ತಪ್ಪಿಲ್ಲ ಬಿಡಿ. ಈ ಮಧ್ಯೆ ನರೇಂದ್ರ ಮೋದಿಗೂ ಕೂಡ ತನ್ನ ಆಡಳಿತದ ಮಧ್ಯೆ ಸಂಘಪರಿವಾರವನ್ನ ಎದುರು ಹಾಕಿಕೊಳ್ಳೋದಕ್ಕೆ ಆಗೋಲ್ಲ. ಇದಕ್ಕೆ ಕಾರಣ ಆರ್ ಎಸ್ ಎಸ್ ಮೋದಿಯ ಮಾತೃ ಸಂಘಟನೆ. ಅಷ್ಟೇ ಅಲ್ಲದೇ ಈ ಮೊದಲೇ ಹೇಳಿದಂತೆ ನರೇಂದ್ರ ಮೋದಿಯ ಗೆಲುವಿನಲ್ಲಿ ಹೆಚ್ಚಿನ ಪಾತ್ರವನ್ನ ಸಂಘದ ಹುಡುಗರು ವಹಿಸಿಕೊಂಡಿದ್ದಾರೆ. ಹೀಗಿರೋವಾಗ ಹಿಂದೂಗಳಿಗಾಗಿ ನರೇಂದ್ರ ಮೋದಿ ಕೊಟ್ಟಿರೋ ಆಶ್ವಾಸನೆಗಳನ್ನ ಈಡೇರಿಸಲೇ ಬೇಕಿದೆ. ಅದರಲ್ಲೂ ಮುಖ್ಯವಾಗಿ ರಾಮ ಮಂದಿರ ಕಟ್ಟಿಯೇ ಸಿದ್ದ ಅಂದಿದ್ದ ಮೋದಿಗೆ ಇದು ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ, ಅಸಲಿಗೆ ರಾಮ ಮಂದಿರ ವಿವಾದ ನ್ಯಾಯಾಲಯದ ಮೆಟ್ಟಿಲೇರಿರೋದ್ರಿಂದ ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ ನರೇಂದ್ರ ಮೋದಿಯಾಗಲೀ ಕೈ ಯಾಡಿಸೋದು ಸಾಧ್ಯವಿಲ್ಲ. ಹೀಗಿದ್ದರೂ ಓಟ್ ಬ್ಯಾಂಕ್ ಗಾಗಿ ಮತ್ತದೇ ವಾಜಪೇಯಿ ಶೈಲಿಯನ್ನ ಯಥಾವತ್ ಅನುಕರಣೆ ಮಾಡಿರೋ ನರೇಂದ್ರ ಮೋದಿಯವರು ಈ ಭರವಸೆಯಲ್ಲಿ ಎಡವೋದು ಖಂಡಿತಾ. ಹೀಗಾಗಿ ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯ ನಡೆ ಸಂಘದ ಹುಡುಗರ ಅಸಮಾಧಾನಕ್ಕೆ ಕಾರಣವಾದರೂ ಆಚ್ಚರಿಯಿಲ್ಲ. ಯಾಕೆಂದರೆ ಆಡಳಿತ ವ್ಯವಸ್ಥೆಯಲ್ಲಿ ಧರ್ಮವನ್ನ ತಂದರೆ ಈ ದೇಶದ ಕಾನೂನು ಸುವ್ಯವಸ್ಥೆಯೇ ಬುಡಮೇಲಾಗಬಹುದು. ಹಾಗಾಗಿ ಎಲ್ಲವನ್ನೂ ಬಲ್ಲವರಾಗಿರೋ ಮೋದಿ ಈ ವಿಚಾರದಲ್ಲಿ ಸೂಕ್ಷ್ಮವಾಗಿಯೇ ನಡೆದುಕೊಳ್ಳುತ್ತಾರೆ. ಆದರೆ ಇದು ಸಂಘದ ಹುಡುಗರಲ್ಲಿ ಮೋದಿ ಬಗ್ಗೆ ಆಕ್ರೋಶ ಹೆಚ್ಚಿಸಬಹುದು. ಹೀಗಾಗಿ ದೇಶದಲ್ಲಿ ದೊಡ್ಡ ಮಟ್ಟದ ಅಲೆ ಸೃಷ್ಟಿಸಿ ಮೋದಿ ಗೆದ್ದಿದ್ದರೂ ಎಲ್ಲರನ್ನೂ ಸಂತೃಪ್ತ ಪಡಿಸಿ ಆಡಳಿತ ನಡೆಸೋದು ನರೇಂದ್ರ ಮೋದಿಯವರಿಗೆ ಅಷ್ಟು ಸುಲಭದ ಮಾತಂತು ಅಲ್ಲವೇ ಅಲ್ಲ.

ಧ್ವನಿ......